ಹಾಸನ: ಚಿರತೆ ದಾಳಿ: ಎರಡು ಮೇಕೆ, ನಾಯಿ ಬಲಿ

  • ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ದಾಳಗೌಡನಹಳ್ಳಿಯಲ್ಲಿ ಚಿರತೆ ದಾಳಿಗೆ ಎರಡು ಮೇಕೆ ಹಾಗೂ ಒಂದು ನಾಯಿ ಬಲಿ. ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನು ಇರಿಸಿದೆ.

ಹಾಸನ (kannadapost.com): ಚಿರತೆ ದಾಳಿಗೆ ಎರಡು ಮೇಕೆಗಳು ಹಾಗೂ ಒಂದು ನಾಯಿ ಬಲಿಯಾಗಿರುವ ಘಟನೆ ಹೊಳೆನರಸೀಪುರ ತಾಲ್ಲೂಕಿನ ಹಳ್ಳಿಮೈಸೂರು ಹೋಬಳಿಯ ದಾಳಗೌಡನಹಳ್ಳಿ ಗ್ರಾಮದಲ್ಲಿ ಇಂದು ಮುಂಜಾನೆ ನಡೆದಿದೆ.

ಗ್ರಾಮದ ಮಲ್ಲೇಶ್ ಎಂಬುವವರಿಗೆ ಸೇರಿದ ಎರಡು ಮೇಕೆಗಳು ಹಾಗೂ ನಾಯಿ ಚಿರತೆ ದಾಳಿಗೆ ಬಲಿಯಾಗಿವೆ. ಕೊಟ್ಟಿಗೆಯಲ್ಲಿ ಕಟ್ಟಿದ್ದ ಎರಡು ಮೇಕೆಗಳನ್ನು ಕೊಂದು, ಅವುಗಳನ್ನು ಹೊತ್ತೊಯ್ಯಲು ಚಿರತೆ ಯತ್ನಿಸಿದೆ ಎನ್ನಲಾಗಿದೆ.

ಬಳಿಕ ಮನೆಯ ಮುಂಭಾಗದಲ್ಲಿ ಮಲಗಿದ್ದ ನಾಯಿಯನ್ನು ಚಿರತೆ ಹೊತ್ತೊಯ್ದಿದ್ದು, ಅದನ್ನು ತಿಂದು ಹಾಕಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ವಾಸದ ಮನೆಗಳ ಸಮೀಪವೇ ಚಿರತೆ ಓಡಾಡುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಚಿರತೆ ತನ್ನ ಮರಿಗಳನ್ನು ವಾಸದ ಮನೆಗಳ ಸಮೀಪವೇ ಇಟ್ಟುಕೊಂಡಿರುವ ಸಾಧ್ಯತೆಯಿದೆ ಎಂಬ ಶಂಕೆಯೂ ವ್ಯಕ್ತವಾಗಿದೆ.

ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಬೋನು ಇರಿಸಿದ್ದು, ಇದುವರೆಗೂ ಚಿರತೆ ಬೋನಿಗೆ ಬಿದ್ದಿಲ್ಲ. ಗ್ರಾಮದಲ್ಲಿ ಮತ್ತಷ್ಟು ದಾಳಿ ನಡೆಯುವ ಮುನ್ನವೇ ಚಿರತೆಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.