ಹಾಸನ: ಭಾರತಕ್ಕೆ ತಂತ್ರಜ್ಞಾನ ಹಾಗೂ ಸಂಪರ್ಕ ಕ್ರಾಂತಿಯ ಪರಿಚಯ ಮಾಡಿಕೊಟ್ಟ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಮತ್ತು ಸಾಮಾಜಿಕ ನ್ಯಾಯದ ಹರಿಕಾರ, ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಅವರು ತಮ್ಮ ಜನಪರ ಕೊಡುಗೆಗಳ ಮೂಲಕ ಜನರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ (ಒಬಿಸಿ) ವಿಭಾಗದ ಅಧ್ಯಕ್ಷ ಮಂಗಳಾಪುರ ನಾಗರಾಜ್ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಗುರುವಾರ ಆಯೋಜಿಸಿದ್ದ ರಾಜೀವ್ ಗಾಂಧಿ ಹಾಗೂ ಡಿ. ದೇವರಾಜ ಅರಸು ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಇಬ್ಬರು ನಾಯಕರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.
ದೇಶವನ್ನು ಸಮಗ್ರ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸುವಲ್ಲಿ ರಾಜೀವ್ ಗಾಂಧಿ ಹಾಗೂ ದೇವರಾಜ ಅರಸು ಅವರು ನೀಡಿದ ಕೊಡುಗೆ ಅನನ್ಯವಾಗಿದೆ. ಇಬ್ಬರೂ ನಾಯಕರು ತಮ್ಮದೇ ಆದ ಕ್ಷೇತ್ರಗಳಲ್ಲಿ ಮಹತ್ವದ ಬದಲಾವಣೆಗಳಿಗೆ ಮುನ್ನುಡಿ ಬರೆದಿದ್ದಾರೆ ಎಂದು ಮಂಗಳಾಪುರ ನಾಗರಾಜ್ ಸ್ಮರಿಸಿದರು.
ಸಾಮಾಜಿಕ ನ್ಯಾಯಕ್ಕೆ ಅರಸು ಕೊಡುಗೆ
ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ರಾಜ್ಯದಲ್ಲಿ ಸಾಮಾಜಿಕ ನ್ಯಾಯಕ್ಕೆ ಭದ್ರ ಅಡಿಪಾಯ ಹಾಕಿದ ಮಹಾನ್ ನಾಯಕರು. ‘ಉಳುವವನೇ ಹೊಲದೊಡೆಯ’ ಎಂಬ ಕ್ರಾಂತಿಕಾರಿ ಭೂ ಸುಧಾರಣಾ ಕಾನೂನಿನ ಮೂಲಕ ಭೂಹೀನ ರೈತರು ಹಾಗೂ ದುರ್ಬಲ ವರ್ಗಗಳ ಬದುಕಿನಲ್ಲಿ ಮಹತ್ವದ ಬದಲಾವಣೆ ತಂದರು ಎಂದು ಹೇಳಿದರು.
ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಅವಕಾಶ ಕಲ್ಪಿಸುವ ಮೂಲಕ ಸಮಾನತೆಯ ಸಮಾಜ ನಿರ್ಮಾಣಕ್ಕೆ ದೇವರಾಜ ಅರಸು ಅವರು ನೀಡಿದ ಕೊಡುಗೆ ಸ್ಮರಣೀಯ ಎಂದು ತಿಳಿಸಿದರು.
ತಂತ್ರಜ್ಞಾನ ಕ್ರಾಂತಿಗೆ ರಾಜೀವ್ ಗಾಂಧಿ ಮುನ್ನುಡಿ
ಇಂದಿನ ಡಿಜಿಟಲ್ ಭಾರತ ಹಾಗೂ ತಾಂತ್ರಿಕ ಪ್ರಗತಿಗೆ ಮುನ್ನುಡಿ ಬರೆದವರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪಾತ್ರ ಮಹತ್ವದ್ದಾಗಿದೆ. ದೇಶದಲ್ಲಿ ಆಧುನಿಕ ತಂತ್ರಜ್ಞಾನ ಮತ್ತು ಸಂಪರ್ಕ ವ್ಯವಸ್ಥೆಗಳ ಅಭಿವೃದ್ಧಿಗೆ ಅವರು ಒತ್ತು ನೀಡಿದರು.
ಯುವಜನರನ್ನು ದೇಶದ ಅಭಿವೃದ್ಧಿಯೊಂದಿಗೆ ಬೆಸೆಯುವ ಹಾಗೂ ಭಾರತವನ್ನು ಆಧುನಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಮುನ್ನಡೆಸುವ ದೂರದೃಷ್ಟಿಯನ್ನು ರಾಜೀವ್ ಗಾಂಧಿ ಹೊಂದಿದ್ದರು ಎಂದು ಮಂಗಳಾಪುರ ನಾಗರಾಜ್ ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಘು ದಾಸರಕೊಪ್ಪಲು, ಹಾಸನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್, ಮುಖಂಡ ಜೆಸಿಬಿ ಚಂದ್ರಶೇಖರ್, ಆಲೂರು ಒಬಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಶೇಖರ್, ಹೊಳೆನರಸೀಪುರ ಒಬಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಎನ್. ಗೌಡ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.












