ಹಾಸನ (kannadapost.com): ಜಿಲ್ಲೆಯ ಹೊಳೆನರಸೀಪುರ ಪಟ್ಟಣದಲ್ಲಿ ಅತೀವ ಮನಕಲಕುವ ಘಟನೆಯೊಂದು ನಡೆದಿದೆ. ಆಟವಾಡಿಸುವಾಗ ನಿಂತಿದ್ದ ಟ್ರ್ಯಾಕ್ಟರ್ ಸ್ಟಾರ್ಟ್ ಮಾಡಿದ ಮಗು, ಚಲಿಸುವ ಟ್ರ್ಯಾಕ್ಟರ್ ನಿಂದ ಬೀಳುವುದನ್ನು ತಪ್ಪಿಸಲು ಹೋದ ತಂದೆಯೇ ಆಕಸ್ಮಿಕವಾಗಿ ಅದೇ ವಾಹನದ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ.
ಅರಕಲಗೂಡು ಸಾರಿಗೆ ಸಂಸ್ಥೆ ಘಟಕದ ನೌಕರ, ಹೊಳೆನರಸೀಪುರ ಪಟ್ಟಣದ ಕೋಟೆ ಒಕ್ಕಲಿಗರ ಬೀದಿಯ ಯಶ್ವಂತ್ (37) ಮೃತ ತಂದೆ.
ಘಟನೆಯ ಹಿನ್ನೆಲೆ
ಯಶ್ವಂತ್ ಅವರು ಹೊಸ ಮನೆಯನ್ನು ಕಟ್ಟಿಸುತ್ತಿದ್ದರು. ವರಮಹಾಲಕ್ಷ್ಮಿ ಹಬ್ಬದ ದಿನದಂದು ಮನೆಯ ಆರ್‌ಸಿಸಿ (RCC) ಕಾಮಗಾರಿಗಾಗಿ ಟ್ರ್ಯಾಕ್ಟರ್‌ನಲ್ಲಿ ಸೆಂಟ್ರಿಂಗ್ ಸಾಮಗ್ರಿಗಳನ್ನು ತರಿಸಲಾಗಿತ್ತು. ಸಾಮಗ್ರಿಗಳನ್ನು ತಂದಿದ್ದ ಚಾಲಕ, ನಿರ್ಲಕ್ಷ್ಯದಿಂದ ಕೀಯನ್ನು ಟ್ರ್ಯಾಕ್ಟರ್‌ನಲ್ಲೇ ಬಿಟ್ಟು ಹೋಗಿದ್ದನು.
ಈ ವೇಳೆ ಯಶ್ವಂತ್ ಅವರು ತಮ್ಮ ಮೂರು ವರ್ಷದ ಮಗನನ್ನು ನಿಂತಿದ್ದ ಟ್ರ್ಯಾಕ್ಟರ್ ಮೇಲೆ ಕೂರಿಸಿಕೊಂಡು ಆಟವಾಡಿಸುತ್ತಿದ್ದರು. ಆಟದ ಭರದಲ್ಲಿ ಮಗು ದಿಢೀರನೆ ಟ್ರ್ಯಾಕ್ಟರ್ ಕೀ ಆನ್ ಮಾಡಿದೆ. ತಕ್ಷಣವೇ ಟ್ರ್ಯಾಕ್ಟರ್ ಮುಂದಕ್ಕೆ ಚಲಿಸಲು ಪ್ರಾರಂಭಿಸಿದೆ.
ಮಗನ ರಕ್ಷಣೆಗೆ ಧಾವಿಸಿ ಪ್ರಾಣಬಿಟ್ಟ ತಂದೆ
ಟ್ರ್ಯಾಕ್ಟರ್ ಮುಂದಕ್ಕೆ ಚಲಿಸುತ್ತಿದ್ದಂತೆ ಮಗು ಮೇಲಿನಿಂದ ಕೆಳಗೆ ಬೀಳುವ ಹಂತದಲ್ಲಿತ್ತು. ಇದನ್ನು ಕಂಡು ಆತಂಕಗೊಂಡ ತಂದೆ ಯಶ್ವಂತ್, ತಮ್ಮ ಪ್ರಾಣದ ಹಂಗು ತೊರೆದು ಮಗನನ್ನು ರಕ್ಷಿಸಲು ಮುಂದಾಗಿದ್ದಾರೆ. ಈ ವೇಳೆ ಆಯತಪ್ಪಿ ಕೆಳಗೆ ಬಿದ್ದ ಯಶ್ವಂತ್ ಅವರ ಮೇಲೆಯೇ ಟ್ರ್ಯಾಕ್ಟರ್ ಹರಿದಿದೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣವೇ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಘಟನಾ ಸ್ಥಳಕ್ಕೆ ಹೊಳೆನರಸೀಪುರ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಕಣ್ಣೆದುರೇ ನಡೆದ ಈ ದುರಂತದಿಂದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.












