ಅರೇಹಳ್ಳಿ: ಕಾಫಿ ಕಳವಿಗೆ ಬಂದವರನ್ನು ತಡೆಯಲು ಹೋದ ಮಾಲೀಕನ ಮೇಲೆ ಖದೀಮರ ತಂಡ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಇಂದು ಮುಂಜಾನೆ ಸುಮಾರು 4.30ರ ಸಮಯದಲ್ಲಿ ಮೂರ್ನಾಲ್ಕು ಜನರಿದ್ದ ಅದೇ ಖದೀಮರ ಗುಂಪು ಕಾಫಿ ದೋಚಲು ಬಂದು ಸಾಕಷ್ಟು ಹೊಂಚು ಹಾಕಿತ್ತು. ಅದೇ ವೇಳೆಗೆ ಎಚ್ಚೆತ್ತ ಕಾಫಿ ಬೆಳೆಗಾರ ಜಗನ್ನಾಥ್ ಶೆಟ್ಟಿ ಎಂಬುವರು ಕಾರಿನಿಂದ ಹೊರಗೆ ಬಂದು ಕಳವು ತಡೆಯಲು ಯತ್ನಿಸಿದರು.
ಇದನ್ನು ಗಮನಿಸಿದ ಗುಂಪು ಜಗನ್ನಾಥ್ ಶೆಟ್ಟಿ ಅವರ ತಲೆಗೆ ಮಚ್ಚಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ. ಬಳಿಕ ಅಲ್ಲಿದ್ದ ಸುಮಾರು 100 ಕೆ.ಜಿ.ಯಷ್ಟು ಕಾಫಿಯನ್ನು ದೋಚಿ ಪರಾರಿಯಾಗಿದೆ.
ಸುದ್ದಿ ತಿಳಿದ ಪ್ಲಾಂಟರ್ಸ್ ಸಂಘದ ಉಪಾಧ್ಯಕ್ಷ ಮಂಜುನಾಥ್ ಶೆಟ್ಟಿ, ಕರ್ನಾಟಕ ಕಾಫಿ ಬೆಳೆಗಾರರ ಸಂಘದ ಮಾಜಿ ಉಪಾಧ್ಯಕ್ಷ ಬಿ.ಪಿ ಬಸವರಾಜ್ ಹಾಗೂ ಗ್ರಾಮದ ಮುಖಂಡ ಅಮಿತ್ ಶೆಟ್ಟಿ ಹಲ್ಲೆ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಈ ವೇಳೆ ಮಾತನಾಡಿದ ಅವರು, ಪೊಲೀಸ್ ಇಲಾಖೆ ತಪ್ಪಿತಸ್ಥರನ್ನು ಅದಷ್ಟು ಬೇಗ ಪತ್ತೆ ಹಚ್ಚಿ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಇಂತಹ ಪ್ರಕರಣಗಳು ನಮ್ಮ ಭಾಗದಲ್ಲಿ ಮತ್ತೆಂದಿಗೂ ಮರುಕಳಿಸಬಾರದು. ಮೂರ್ನಾಲ್ಕು ದಿನಗಳ ಹಿಂದೆ ಅದೇ ಸ್ಥಳದಲ್ಲಿ ಕಾಫಿ ಕಳವು ನಡೆದು ಪೊಲೀಸರಿಗೆ ಮಾಹಿತಿ ನೀಡಿ ಪ್ರಕರಣ ಸಹ ದಾಖಲಾಗಿತ್ತು. ಆದರೂ ಅಂತದೇ ಕೃತ್ಯಗಳು ಮರುಕಳಿಸುತ್ತಿವೆ ಎಂದರೆ ಇದು ಯಾರ ವೈಫಲ್ಯ ಎಂದು ಪ್ರಶ್ನಿಸಿದರು.
ಎಸ್ಪಿ ಭೇಟಿ:
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಸ್ಥಳೀಯ ಅಧಿಕಾರಿಗಳೊಂದಿಗೆ ಪ್ರಕರಣ ಕುರಿತು ಹೆಚ್ಚಿನ ಮಾಹಿತಿ ಪಡೆದರು.
ಇದಲ್ಲದೇ ಶ್ವಾನದಳದ ವಿಶೇಷ ತನಿಖಾ ತಂಡದಿAದಲೂ ತನಿಖೆ ಮುಂದುವರೆದಿದ್ದು, ಆರೋಪಿಗಳ ಪತ್ತೆಗೆ ಸ್ಥಳೀಯ ಪೊಲೀಸರು ಬಲೆ ಬೀಸಿದ್ದಾರೆ. ಗಾಯಾಳು ಜಗನ್ನಾಥ್ ಶೆÀಟ್ಟಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಹಿಂದೆಯೂ ನಡೆದಿತ್ತು:
ಕಳೆದ ಭಾನುವಾರ ತಡರಾತ್ರಿ 3 ರ ಸಮಯದಲ್ಲಿ ಮೂರ್ನಾಲ್ಕು ಜನರಿದ್ದ ಖದೀಮರ ಗುಂಪು ಸುಮಾರು 2 ಲಕ್ಷ ಮೌಲ್ಯದ ಕಾಫಿ ಬೀಜವನ್ನು ಕಳವು ಮಾಡಿತ್ತು. ಈ ಬಗ್ಗೆ ಸ್ಥಳೀಯ ಕಾಫಿ ಬೆಳೆಗಾರರ ಸಂಘದ ಸಹಕಾರದೊಂದಿಗೆ ಪೊಲೀಸ್ ಠಾಣೆಗೆ ಮಾಲೀಕರು ತೆರಳಿ ದೂರು ಸಲ್ಲಿಸಿದ್ದರು.ತ್ವರಿತವಾಗಿ ಖದೀಮರನ್ನು ಪತ್ತೆ ಹಚ್ಚಿ ನ್ಯಾಯ ಒದಗಿಸಬೇಕು ಎಂದು ಮನವಿ ಸಹ ಮಾಡಿದ್ದರು.
ಇದಾದ ಬೆನ್ನಲ್ಲೇ ಎಚ್ಚೆತ್ತ ಪೊಲೀಸ್ ಇಲಾಖೆ ರಾತ್ರಿ ಸಮಯದಲ್ಲಿ ಗಸ್ತು ಚುರುಕುಗೊಳಿಸಿತ್ತು. ಆದರೂ ಕಳ್ಳರು ಮತ್ತೆ ಕಳವಿಗೆ ಯತ್ನಿಸಿದ್ದಲ್ಲದೆ ಮಾಲೀಕರ ಮೇಲೆ ಹಲ್ಲೆ ಮಾಡಿರುವುದು ಸಹಜವಾಗಿಯೇ ಈ ಭಾಗದ ಜನರಲ್ಲಿ ಆತಂಕ ಮೂಡಿಸಿದೆ.
An incident occurred in the Arehalli police station area where a group of thugs fatally attacked a coffee shop owner who went to stop the coffee shop thieves.









