ಹಾಸನ,ಮಾರ್ಚ್ 3,2026(www.kannadapost.com):ಕನಿಷ್ಠ ವೇತನ ಅಂತಿಮ ಅಧಿಸೂಚನೆ ತಕ್ಷಣ ಜಾರಿಗೆ ತರಬೇಕು ಎಂದು ಆಗ್ರಹಿಸಿ ಹಾಸನದಲ್ಲಿ ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರ ಪ್ರತಿಭಟನೆ. ಏಳು ವರ್ಷಗಳಿಂದ ವೇತನ ಪರಿಷ್ಕರಣೆ ಆಗದ ಹಿನ್ನೆಲೆ ಆಕ್ರೋಶ.
ಕನಿಷ್ಠ ವೇತನ ಅಂತಿಮ ಅಧಿಸೂಚನೆ ಜಾರಿಗೆ ಆಗ್ರಹಿಸಿ ಹಾಸನದಲ್ಲಿ ಕಾರ್ಮಿಕರ ಪ್ರತಿಭಟನೆ
ಕನಿಷ್ಠ ವೇತನ ಅಂತಿಮ ಅಧಿಸೂಚನೆ ತಕ್ಷಣ ಪ್ರಕಟಿಸಿ ಜಾರಿಗೆ ತರಬೇಕು ಎಂದು ಆಗ್ರಹಿಸಿ ಹಾಸನದಲ್ಲಿ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಸಿಐಟಿಯು ನೇತೃತ್ವದಲ್ಲಿ ನಗರದ ಅರಳೀಕಟ್ಟೆ ವೃತ್ತದ ಬಳಿ ಇರುವ ಉಪ ಕಾರ್ಮಿಕ ಆಯುಕ್ತರ ಕಚೇರಿ ಎದುರು ಕಾರ್ಮಿಕರು ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
🔶 ಏಳು ವರ್ಷಗಳಿಂದ ವೇತನ ಪರಿಷ್ಕರಣೆ ಇಲ್ಲ
ಪ್ರತಿಭಟನೆಯಲ್ಲಿ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್, ರಾಜ್ಯ ಸರ್ಕಾರ ಏಪ್ರಿಲ್ 2025ರಲ್ಲಿ ಕನಿಷ್ಠ ವೇತನದ ಕರಡು ಅಧಿಸೂಚನೆ ಪ್ರಕಟಿಸಿತ್ತು. ಈ ಕುರಿತು ಕಾರ್ಮಿಕ ಸಂಘಟನೆಗಳು ಹಾಗೂ ಮಾಲೀಕರ ಸಂಘಟನೆಗಳು ತಮ್ಮ ಆಕ್ಷೇಪಣೆ ಹಾಗೂ ಸಲಹೆಗಳನ್ನು ಸಲ್ಲಿಸಿದ್ದವು.
ನಂತರ ಕನಿಷ್ಠ ವೇತನ ಸಲಹಾ ಮಂಡಳಿ ಎರಡು ಸುತ್ತಿನ ಚರ್ಚೆ ನಡೆಸಿ 2025ರ ಆಗಸ್ಟ್ ತಿಂಗಳಲ್ಲಿ ತನ್ನ ಶಿಫಾರಸ್ಸುಗಳನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆದರೆ ಹಲವು ತಿಂಗಳು ಕಳೆದರೂ ಕನಿಷ್ಠ ವೇತನ ಅಂತಿಮ ಅಧಿಸೂಚನೆ ಪ್ರಕಟವಾಗದಿರುವುದು ಕಾರ್ಮಿಕರಲ್ಲಿ ತೀವ್ರ ನಿರಾಶೆ ಮೂಡಿಸಿದೆ ಎಂದು ಹೇಳಿದರು.
🔶 ಬೆಲೆ ಏರಿಕೆಗೆ ಹೋಲಿಸಿದರೆ ವೇತನ ಸಾಲದು
ಇಂದಿನ ಬೆಲೆ ಏರಿಕೆ, ಮನೆ ಬಾಡಿಗೆ, ವಿದ್ಯುತ್, ಸಾರಿಗೆ, ಶಿಕ್ಷಣ ಹಾಗೂ ಆರೋಗ್ಯ ವೆಚ್ಚ ಹೆಚ್ಚಳದ ಹಿನ್ನೆಲೆಯಲ್ಲಿ ಹಾಲಿ ವೇತನ ಕಾರ್ಮಿಕರ ಜೀವನೋಪಾಯಕ್ಕೆ ಸಾಕಾಗುತ್ತಿಲ್ಲ. ಏಳು ವರ್ಷಗಳಿಂದ ವೇತನ ಪರಿಷ್ಕರಣೆ ಆಗದೇ ಉಳಿದಿರುವುದು ಗಂಭೀರ ವಿಚಾರವಾಗಿದೆ ಎಂದು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಮಿಕ ಸಂಘಟನೆಗಳು ವಲಯ-1, ವಲಯ-2 ಮತ್ತು ವಲಯ-3 ಪ್ರಕಾರ ಅತಿ ಕುಶಲ, ಕುಶಲ, ಅರೆಕುಶಲ ಮತ್ತು ಅಕುಶಲ ವರ್ಗಗಳಿಗೆ ದಿನ ಹಾಗೂ ತಿಂಗಳ ವೇತನದ ಪರಿಷ್ಕೃತ ಪ್ರಸ್ತಾವಗಳನ್ನು ಸರ್ಕಾರಕ್ಕೆ ಸಲ್ಲಿಸಿವೆ. ಈ ಪ್ರಸ್ತಾವಗಳು ಇಂದಿನ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ರೂಪುಗೊಂಡಿವೆ ಎಂದು ಹೇಳಿದರು.
🔶 ಕಾನೂನು ಅಡಚಣೆ ಇಲ್ಲ
ಕೇಂದ್ರ ಸರ್ಕಾರ 2025 ನವೆಂಬರ್ 21ರಂದು ಇಂಡಸ್ಟ್ರಿಯಲ್ ರಿಲೇಶನ್ಸ್ ಕೋಡ್ 2020ರ ಕಲಂ 104(1ಎ) ಅನ್ವಯ ಹೊರಡಿಸಿದ ಅಧಿಸೂಚನೆಯಲ್ಲಿ ನೂತನ ಔದ್ಯೋಗಿಕ ನ್ಯಾಯಾಧೀಕರಣ ರಚನೆಯಾಗುವವರೆಗೆ ಹಾಲಿ ವ್ಯವಸ್ಥೆ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದೆ.
ಫೆಬ್ರವರಿ 12ರಂದು ರಾಷ್ಟ್ರಪತಿ ಅಂಕಿತದೊಂದಿಗೆ ಅದಕ್ಕೆ ಕಾನೂನುಬದ್ಧ ಬಲವೂ ಲಭಿಸಿದೆ. ಫೆಬ್ರವರಿ 18ರಂದು ರಾಜ್ಯ ಹೈಕೋರ್ಟ್ ಸಹ ಹಾಲಿ ಪ್ರಾಧಿಕಾರಗಳು ಮುಂದುವರಿಯಲಿವೆ ಎಂದು ದೃಢಪಡಿಸಿದೆ. ಹೀಗಾಗಿ ಕನಿಷ್ಠ ವೇತನ ಅಂತಿಮ ಅಧಿಸೂಚನೆ ಪ್ರಕಟಿಸಲು ಯಾವುದೇ ಕಾನೂನು ಅಡಚಣೆ ಇಲ್ಲ ಎಂದು ಧರ್ಮೇಶ್ ತಿಳಿಸಿದರು.
🔶 ಹೋರಾಟ ತೀವ್ರಗೊಳ್ಳುವ ಎಚ್ಚರಿಕೆ
ಕರ್ನಾಟಕದ ಸಮಗ್ರ ಅಭಿವೃದ್ಧಿ ಹಾಗೂ ಕಾರ್ಮಿಕ ವರ್ಗದ ಆರ್ಥಿಕ ಸ್ವಾವಲಂಬನೆಗಾಗಿ ಕನಿಷ್ಠ ವೇತನದ ಅಂತಿಮ ಅಧಿಸೂಚನೆಯನ್ನು ಕೂಡಲೇ ಜಾರಿಗೆ ತರಬೇಕು. ಇಲ್ಲವಾದರೆ ಹೋರಾಟವನ್ನು ರಾಜ್ಯವ್ಯಾಪಿ ತೀವ್ರಗೊಳಿಸಲಾಗುವುದು ಎಂದು ಸಂಘಟನೆಗಳು ಎಚ್ಚರಿಸಿವೆ.
ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ. ಪುಷ್ಪ, ಜಿಲ್ಲಾ ಖಜಾಂಚಿ ಅರವಿಂದ ಹಾಗೂ ಹಲವು ಕಾರ್ಮಿಕರು ಭಾಗವಹಿಸಿದ್ದರು.
Workers in Hassan staged a protest demanding immediate implementation of the Minimum Wage Final Notification, citing seven years of delay and rising cost of living.
Minimum Wage Final Notification: Workers Stage Protest in Hassan
The demand for the Minimum Wage Final Notification intensified in Hassan as workers under the leadership of CITU staged a protest in front of the Deputy Labour Commissioner’s office.
Union leaders stated that although the draft notification was issued in April 2025 and recommendations were submitted in August 2025, the final notification has not yet been published.
They highlighted that wages have not been revised for seven years, despite rising inflation, rent, electricity, transport, healthcare, and education costs.
Leaders clarified that there are no legal hurdles in issuing the Minimum Wage Final Notification, as confirmed by central and state authorities.
Workers warned that if the government fails to act immediately, the protest movement will be intensified statewide.










