4.2 C
Munich
Home News ಕ್ರೀಡಾ ಕ್ಷೇತ್ರಕ್ಕೆ ಸರ್ಕಾರದಿಂದ ಹೆಚ್ಚಿನ ಅನುದಾನಕ್ಕೆ ಶಾಸಕ ಬಾಲಕೃಷ್ಣ ಆಗ್ರಹ

ಕ್ರೀಡಾ ಕ್ಷೇತ್ರಕ್ಕೆ ಸರ್ಕಾರದಿಂದ ಹೆಚ್ಚಿನ ಅನುದಾನಕ್ಕೆ ಶಾಸಕ ಬಾಲಕೃಷ್ಣ ಆಗ್ರಹ

ಚನ್ನರಾಯಪಟ್ಟಣ: ದೇಶದಲ್ಲಿನ ಕ್ರೀಡಾಕ್ಷೇತ್ರದಲ್ಲಿ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡಿ, ದೇಶಕ್ಕೆ ಕೀರ್ತಿ ತರಬೇಕಾದಲ್ಲಿ ಆಳುವ ಸರ್ಕಾರಗಳು ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಸೇರಿ ಕ್ರೀಡಾ ಸೌಲಭ್ಯ ಒದಗಿಸಬೇಕೆಂದು ಶಾಸಕ ಸಿ.ಎನ್.ಬಾಲಕೃಷ್ಣ ಸರ್ಕಾರಗಳನ್ನು ಆಗ್ರಹಿಸಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಗುರುವಾರದಂದು ಶಾಲಾ ಶಿಕ್ಷಣ ಇಲಾಖೆ ಹಾಗೂ ಪಿಎಂಶ್ರೀ ಶಾಲೆ ಚನ್ನರಾಯಪಟ್ಟಣ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕಸಬಾ ಹೋಬಳಿ ಮಟ್ಟದ ೨೦೨೫-೨೬ ನೇ ಸಾಲಿನ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಟ್ಟಣದ ಕ್ರೀಡಾಂಗಣದಲ್ಲಿ ೬೦ ಲಕ್ಷ ರೂ ವೆಚ್ಚದಲ್ಲಿ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಲು ಕ್ರಮ ಕೈಗೊಂಡಿದ್ದು ಕ್ರೀಡಾಂಗಣದ ಅಭಿವೃದ್ಧಿಗೆ ಹೆಚ್ಚಿನ ಅನುದಾನದ ಅವಶ್ಯಕತೆಯಿದ್ದು, ಸರ್ಕಾರ ರಾಜ್ಯದ ಕ್ರೀಡಾಂಗಣಗಳ ಅಭಿವೃದ್ಧಿಗೆ ನಿಗದಿಪಡಿಸಿರುವ ೧೪ ಕೋಟಿ ರೂ. ಗಳಲ್ಲಿ ಕ್ರೀಡಾಂಗಣಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುವುದಿಲ್ಲ. ಕ್ರೀಡಾಂಗಣಗಳ ಅಭಿವೃದ್ಧಿಗೆ ಕನಿಷ್ಠ ೧೦೦ ಕೋಟಿ ರೂ. ಮೀಸಲಿಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ಮಕ್ಕಳು ಶಿಕ್ಷಣದ ಜೊತೆ ಕ್ರೀಡೆಗೂ ಹೆಚ್ಚಿನ ಒತ್ತು ನೀಡಬೇಕು. ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ಶಾರೀರಿಕ ಹಾಗು ಮಾನಸಿಕ ವಿಕಸನ ಸಾಧ್ಯ. ಕೇವಲ ಪಠ್ಯಪುಸ್ತಕಗಳ ಅಧ್ಯಯನಕ್ಕೆ ಮಾತ್ರ ಸೀಮಿತರಾಗಬಾರದು. ಶಾಲಾ ಹಂತದಲ್ಲೆ ಕ್ರೀಡಾ ಮನೋಭಾವ ಬೆಳೆಸಿಕೊಂಡು ಹೋಬಳಿ ಮಟ್ಟದಿಂದ ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟದವರೆಗೂ ಕ್ರೀಡೆಯಲ್ಲಿ ಸಾಧನೆ ಮಾಡಬಹುದು. ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು.

ಮಕ್ಕಳ ಕ್ರೀಡಾ ಪ್ರತಿಭೆ ಗುರುತಿಸಲು ಹಾಗೂ ಸರ್ವಾಂಗೀಣ ಅಭಿವೃದ್ಧಿಗೆ ಕ್ರೀಡಾಕೂಟ ಸಹಕಾರಿಯಾಗಲಿದೆ. ಕ್ರೀಡೆಯಲ್ಲಿ ಸೋಲು ಗೆಲುವನ್ನು ಸಮಾನಾಗಿ ಸ್ವೀಕರಿಸುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕ್ರೀಡಾಕೂಟದಲ್ಲಿ ಪುರಸಭಾ ಉಪಾಧ್ಯಕ್ಷ ಕವಿತಾರಾಜು ಧ್ವಜಾರೋಹಣ ನೆರವೇರಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಎ.ಗಣೇಶ್ ಕ್ರೀಡಾ ಜ್ಯೋತಿ ಸ್ವೀಕರಿಸಿದರು. ಪುರಸಭಾ ಮಾಜಿ ಅಧ್ಯಕ್ಷೆ ಬನಶಂಕರಿ ರಘು, ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಎನ್.ದೀಪ, ಕ್ಷೇತ್ರ ಸಮನ್ವಯಾಧಿಕಾರಿ ಕೆ.ಎನ್.ಅನಿಲ್, ಅಕ್ಷರ ದಾಸೋಹ ಅಧಿಕಾರಿ ಉಮಾಶಂಕರ್, ತಾಲೂಕು ದೈಹಿಕ ಶಿಕ್ಷಣ ಪರೀಕ್ಷಕ ಕೆ.ಟಿ.ಆನಂದ್, ಪಿಎಂಶ್ರೀ ಶಾಲೆಯ ಮುಖ್ಯ ಶಿಕ್ಷಕ ಪ್ರಕಾಶ್, ಪುರಸಭಾ ಮುಖ್ಯಾಧಿಕಾರಿ ಆರ್.ಯತೀಶ್‌ಕುಮಾರ್, ರಾಜ್ಯ ನೌಕರರ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ್, ಶಿಕ್ಷಣ ಇಲಾಖೆಯ ವಿ.ಜಿ. ದ್ಯಾವೇಗೌಡ, ಶಿವಾನಂದ್, ಜಿ.ಎನ್.ರವಿ, ಚಿಕ್ಕೇಗೌಡ, ಗಾಯತ್ರಮ್ಮ, ಕಾಳೇಗೌಡ, ಶ್ರೀನಿವಾಸ್, ನಾಗೇಂದ್ರ ಕುಮಾರ್, ನಾಗರಾಜು, ಲೋಕೇಶ್, ಜಯಪ್ರಕಾಶ್, ಯಾದವ ರಾಜ್, ರಂಗಸ್ವಾಮಿ ಸೇರಿದಂತೆ ಕಸಬಾ ಹೋಬಳಿಯ ಎಲ್ಲಾ ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

error: Content is protected !!