ಹಾಸನ: ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಕಂದಾಯ ಸಚಿವ ಕೃಷ್ಣಭೈರೇಗೌಡರನ್ನು ನೇಮಕ ಮಾಡಿರುವುದನ್ನು ಶಾಸಕ ಎಚ್.ಪಿ.ಸ್ವರೂಪ್ ಸ್ವಾಗತಿಸಿದ್ದಾರೆ. ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಉಸ್ತುವಾರಿ ಸಚಿವರಾದ ಕೆ.ಎನ್.ರಾಜಣ್ಣ ಅವರಿಗೆ ಆಸಕ್ತಿ ಇರಲಿಲ್ಲ.
ಕೃಷ್ಣಭೈರೇಗೌಡನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿದ್ದು, ಜನರು ನಿರೀಕ್ಷೆಯಲ್ಲಿದ್ದಾರೆ ಎಂದರು. ಕೃಷ್ಣಭೈರೇಗೌಡ ಕಂದಾಯ ಸಚಿವರಾದ ಮೇಲೆ ಕಂದಾಯ ಇಲಾಖೆಯಲ್ಲಿ ಬಹಳಷ್ಟು ಸುಧಾರಣೆ ತಂದಿದ್ದು, ಅದೇ ರೀತಿ ನಾವು ನಿರೀಕ್ಷೆಯಲ್ಲಿದ್ದೇವೆ.
ಮುಂದಿನ ದಿನಗಳಲ್ಲಿ ಹಾಸನ ಜಿಲ್ಲೆಯ ಜನತೆಗೆ ಉತ್ತಮವಾದ ಕೆಲಸಗಳಾಗುತ್ತವೆ ಎಂದು ಕೊಂಡಿದ್ದೇವೆ. ಕೃಷ್ಣಭೈರೇಗೌಡರು ನಮಗೆ ಎಲ್ಲಾ ಕೆಲಸ ಕಾರ್ಯ ಮಾಡಿಕೊಟ್ಟಿದ್ದಾರೆ. ನಿನ್ನೆ ಆದೇಶ ಬಂದಿದೆ, ಸೋಮವಾರ ಭೇಟಿ ಮಾಡುತ್ತೇವೆ ಎಂದರು.
ಇದೇ ವೇಳೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಶಾಸಕ ಎಚ್.ಪಿ.ಸ್ವರೂಪ್‌ಪ್ರಕಾಶ್ ಹಾಸನ ಜಿಲ್ಲೆಗೆ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಶೂನ್ಯ. ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಒಂದು ಬಿಡಿಗಾಸು ಅನುದಾನ ನೀಡಿಲ್ಲ. ಮಳೆ ಜಾಸ್ತಿಯಾಗಿ ರಸ್ತೆಗಳು ಹಾಳಾಗಿವೆ.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ ಮುಗಿದಿಲ್ಲ ಎಂದರು. ರೇವಣ್ಣ ಅವರ ಕಾಲದಲ್ಲಿ ಆದ ಕೆಲಸಗಳನ್ನು ಬಿಟ್ಟರೆ ಬೇರೆ ಯಾವ ಕೆಲಸಗಳು ಆಗಿಲ್ಲ. ಮುಂದಿನವಾರ ಅಧಿವೇಶನ ಇದ್ದು, ಜಿಲ್ಲೆಯ ಎಲ್ಲಾ ಶಾಸಕರು ಹೋರಾಟ ಮಾಡುತ್ತೇವೆ. ಅರಸೀಕೆರೆ ಬಂದು ಸಾಧನೆ ಮಾಡಿದ್ದೇವೆ ಅಂಥ ಹೇಳ್ತಾರೆ, ಆದರೆ ಹಾಸನ ಜಿಲ್ಲೆಯಲ್ಲಿ ಆಗಿರುವುದು ಶೂನ್ಯ ಸಾಧನೆ.
ಮುಖ್ಯಮಂತ್ರಿಗಳು ಹಾಸನ ಜಿಲ್ಲೆಯನ್ನು ಏಕೆ ನಿರ್ಲಕ್ಷ್ಯ ಮಾಡಿದ್ದಾರೆ ಗೊತ್ತಿಲ್ಲ. ಮಹಾನಗರಪಾಲಿಕೆ ವಿಚಾರದಲ್ಲಿ ಸರ್ಕಾರ, ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡಿದೆ ಯಾರು ಸ್ಪಂದಿಸುತ್ತಿಲ್ಲ. ಅಧಿವೇಶನದಲ್ಲಿ ಎಲ್ಲಾ ಶಾಸಕರು ಸೇರಿ ನಮಗೆ ಜಯ ಸಿಗುವವರೆಗೂ ಹೋರಾಟ ಮಾಡುತ್ತೇವೆ ಎಂದರು.










