ಹಾಸನ: ಹಿಂದಿನಿಂದಲೂ ನಮ್ಮ ಕುಟುಂಬದ ಬಗ್ಗೆ ಅನೇಕರು ಒಂದಲ್ಲ, ಒಂದು ರೀತಿಯ ಅಪಪ್ರಚಾರ ಮಾಡುತ್ತಿದ್ದಾರೆ. ದೇವೇಗೌಡರ ಕಾಲದಿಂದಲೂ ಇದು ನಡೆಯುತ್ತಿದೆ. ಇದಕ್ಕೆಲ್ಲಾ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದರು.
ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಮ್ಮ ಕುಟುಂಬದ ಬಗ್ಗೆ ಅಪಪ್ರಚಾರ ಮಾಡುವುದು ಮಾಮೂಲಿ. ಇದನ್ನೆಲ್ಲ ಜಿಲ್ಲೆಯ ಜನರು ಗಮನಿಸುತ್ತಿದ್ದಾರೆ. ಈ ಚುನಾವಣೆಯಲ್ಲಿ ಹಾಸನ, ಮಂಡ್ಯ, ಕೋಲಾರ ಸೇರಿದಂತೆ ಎಲ್ಲಾ 28 ಕ್ಕೆ 28 ಸ್ಥಾನವನ್ನೂ ನಾವು ಗೆಲ್ಲುತ್ತೇವೆ ಎಂದು ಹೇಳಿದರು.
ರಾಜ್ಯದಲ್ಲಿ ಗ್ಯಾರಂಟಿ ಆಯ್ತು ಈಗ ಪೊಳ್ಳು ಗ್ಯಾರಂಟಿ ಶುರುವಾಗಿದೆ. ಬಾಂಡ್ ಪೇಪರ್‌ನಲ್ಲಿ ಸಿಎಂ ಹಾಗೂ ಡಿಸಿಎಂ ಒಂದು ಲಕ್ಷ ಕೊಡುವುದಾಗಿ ಕರಪತ್ರ ಹಂಚುತ್ತಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗ ಗಮನಿಸಬೇಕು ಎಂದು ಆಗ್ರಹಿಸಿದರು.
ಒಂದು ಕಡೆ ಪ್ರಜ್ವಲ್, ದೇವೇಗೌಡರು ಏನು ಮಾಡಿದ್ದಾರೆ ಅಂತಾರೆ. ಆದರೆ ಅವರು ಈ ಜಿಲ್ಲೆಗೆ ಏನು ಕೊಡುಗೆ ಕೊಟ್ಟಿದ್ದಾರೆ ಎಂಬುದು ಜನರಿಗೆ ಗೊತ್ತು. 11 ತಿಂಗಳಲ್ಲಿ ರಾಜ್ಯದ ಖಜಾನೆ ಖಾಲಿ ಮಾಡಿ ಖಾಲಿ ಚೊಂಬು ಕೊಟ್ಟಿದ್ದಾರೆ. ಒಂದೇ ಒಂದು ಅಭಿವೃದ್ಧಿ ಕೆಲಸ ಆಗಿಲ್ಲ ಎಂದು ದೂರಿದರು.










