ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ ಸಲ್ಲದು: ಪತ್ರಕರ್ತರಿಗೆ ನೀಡಿದ ನೋಟೀಸ್ ಹಿಂಪಡೆಯಲು ಹಾಸನ ಪೊಲೀಸರಿಗೆ KUWJ ಆಗ್ರಹ

ಬೆಂಗಳೂರು(kannadapost.com): ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಪತ್ರಿಕಾಗೋಷ್ಠಿಯ ವರದಿ ಹಾಗೂ ವಿಡಿಯೋ ಪ್ರಸಾರ ಮಾಡಿದ ಮಾಧ್ಯಮ ಸಂಸ್ಥೆಗಳಿಗೆ ಹಾಸನ ಸೈಬರ್ ಕ್ರೈಂ ಪೊಲೀಸರು ನೋಟೀಸ್ ನೀಡಿರುವುದನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (KUWJ) ತೀವ್ರವಾಗಿ ಖಂಡಿಸಿದೆ. ಪತ್ರಕರ್ತರಿಗೆ ನೀಡಿರುವ ಈ ನೋಟೀಸ್‌ಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಸಂಘ ಆಗ್ರಹಿಸಿದೆ.

​ಸಾರ್ವಜನಿಕವಾಗಿ ನಡೆದ ಪತ್ರಿಕಾಗೋಷ್ಠಿಯನ್ನು ವರದಿ ಮಾಡುವುದು ಮಾಧ್ಯಮಗಳ ವೃತ್ತಿಪರ ಕರ್ತವ್ಯವಾಗಿದೆ. ಅದನ್ನೇ ನೆಪವಾಗಿಸಿಕೊಂಡು ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳ ಮೇಲೆ ಒತ್ತಡ ಹೇರುವುದು ಸಂವಿಧಾನಬದ್ಧ ಪತ್ರಿಕಾ ಸ್ವಾತಂತ್ರ್ಯದ ಆಶಯಕ್ಕೆ ವಿರುದ್ಧವಾಗಿದೆ. ಸುದ್ದಿಮೂಲಗಳ ಗೌಪ್ಯತೆ ಹಾಗೂ ಪತ್ರಕರ್ತರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದೇಶದ ಸರ್ವೋಚ್ಚ ನ್ಯಾಯಾಲಯವೂ ತನ್ನ ಹಲವು ಮಹತ್ವದ ತೀರ್ಪುಗಳಲ್ಲಿ ಎತ್ತಿ ಹಿಡಿದಿದೆ ಎಂದು ಕೆಯುಡಬ್ಲ್ಯೂಜೆ ಸ್ಪಷ್ಟಪಡಿಸಿದೆ.

​ತನಿಖೆಯ ಹೆಸರಿನಲ್ಲಿ ಭಯದ ವಾತಾವರಣ ಸೃಷ್ಟಿ ಸಲ್ಲದು

ಹಾಸನ ಸೈಬರ್ ಕ್ರೈಂ ಪೊಲೀಸರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಸೆಕ್ಷನ್ 94ರ ಅಡಿಯಲ್ಲಿ ಮಾಧ್ಯಮ ಸಂಸ್ಥೆಗಳಿಗೆ ನೋಟೀಸ್ ಜಾರಿ ಮಾಡಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. “ಯಾವುದೇ ಅಪರಾಧ ಪ್ರಕರಣದ ತನಿಖೆಗೆ ನಮ್ಮ ವಿರೋಧವಿಲ್ಲ. ಆದರೆ, ತನಿಖೆಯ ಹೆಸರಿನಲ್ಲಿ ಪತ್ರಕರ್ತರಲ್ಲಿ ಭಯದ ವಾತಾವರಣ ಸೃಷ್ಟಿಸುವುದು ಸರಿಯಲ್ಲ,” ಎಂದು ಸಂಘವು ತನ್ನ ಪ್ರಕಟಣೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದೆ.

​ಪ್ರತಿಭಟನೆಯ ಎಚ್ಚರಿಕೆ

ಪತ್ರಿಕಾ ಸ್ವಾತಂತ್ರ್ಯ ಮತ್ತು ಪತ್ರಕರ್ತರ ವೃತ್ತಿಪರ ಹಕ್ಕುಗಳಿಗೆ ಯಾವುದೇ ರೀತಿಯ ಧಕ್ಕೆ ಉಂಟಾಗದಂತೆ ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಹಾಸನ ಪೊಲೀಸರು ಪತ್ರಕರ್ತರಿಗೆ ನೀಡಿರುವ ನೋಟೀಸ್‌ಗಳನ್ನು ತಕ್ಷಣವೇ ಹಿಂಪಡೆಯಬೇಕು. ಒಂದು ವೇಳೆ ನೋಟೀಸ್ ವಾಪಸ್ ಪಡೆಯಲು ವಿಫಲವಾದಲ್ಲಿ, ಸಂಘದ ವತಿಯಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಎಚ್ಚರಿಕೆ ನೀಡಿದೆ.