ಕಬ್ಬಳಿ ಶ್ರೀ ಬಸವೇಶ್ವರ ದೇಗುಲ ಲೋಕಾರ್ಪಣೆ ಸಡಗರ: ಧಾರ್ಮಿಕ ಕಾರ್ಯಕ್ರಮಗಳಿಗೆ ವಿಧ್ಯುಕ್ತ ಚಾಲನೆ ನೀಡಿದ ಚುಂಚಶ್ರೀ

ಚನ್ನರಾಯಪಟ್ಟಣ (kannadapost.com): ತಾಲ್ಲೂಕಿನ ಪುರಾಣ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಶ್ರೀ ಕ್ಷೇತ್ರ ಕಬ್ಬಳಿಯಲ್ಲಿ ನೂತನವಾಗಿ ಜೀರ್ಣೋದ್ಧಾರಗೊಂಡಿರುವ ಶ್ರೀ ಬಸವೇಶ್ವರ ಸ್ವಾಮಿ ದೇವಾಲಯದ ಲೋಕಾರ್ಪಣೆ ಸಮಾರಂಭದ ಅಂಗವಾಗಿ, ಶನಿವಾರ ಸಂಜೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳಿಗೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ವಿದ್ಯುಕ್ತ ಚಾಲನೆ ನೀಡಿದರು.

​ಚುಂಚಶ್ರೀಗಳಿಗೆ ಭಕ್ತಿಪೂರ್ವಕ ಸ್ವಾಗತ

ಸಂಜೆ 7:30ರ ಸುಮಾರಿಗೆ ಶ್ರೀ ಕ್ಷೇತ್ರ ಕಬ್ಬಳಿಗೆ ಆಗಮಿಸಿದ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಯವರನ್ನು ಭಕ್ತಾದಿಗಳು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಂಡು, ಭಕ್ತಿಭಾವದಿಂದ ಪಾದಪೂಜೆ ಸಲ್ಲಿಸಿದರು.

​ಗೋಪೂಜೆ, ಕ್ಷೀರಾಭಿಷೇಕ ಹಾಗೂ ಗಂಗಾಪೂಜೆ

ಧಾರ್ಮಿಕ ವಿಧಿವಿಧಾನಗಳ ಭಾಗವಾಗಿ ಚುಂಚಶ್ರೀಗಳು ಮೊದಲಿಗೆ ಗೋಪೂಜೆ ನೆರವೇರಿಸಿದರು. ತದನಂತರ ದೇಗುಲದ ಸನ್ನಿಧಿಯಲ್ಲಿ ಶ್ರೀ ಬಸವೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಶ್ರೀ ಬಸವ ಮೂರ್ತಿಗೆ ಭಕ್ತಿಪೂರ್ವಕವಾಗಿ ಕ್ಷೀರಾಭಿಷೇಕ ನೆರವೇರಿಸಿದರು.

​ಇದೇ ವೇಳೆ ದೇಗುಲದ ಆವರಣದಲ್ಲಿರುವ ಪವಿತ್ರ ಪುಷ್ಕರಣಿಯಲ್ಲಿ ಗಂಗಾಪೂಜೆ ಕೈಗೊಂಡ ಸ್ವಾಮೀಜಿಯವರು, ಯಾಗಾಲಯದಲ್ಲಿ ಹೋಮ-ಹವನಾದಿ ಧಾರ್ಮಿಕ ವಿಧಿವಿಧಾನಗಳಿಗೆ ಚಾಲನೆ ನೀಡಿದರು. ಬಳಿಕ ಭೈರವೈಕ್ಯ ಜಗದ್ಗುರು ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

​ಗಣ್ಯರು ಹಾಗೂ ಸಾವಿರಾರು ಭಕ್ತರ ಸಮಾಗಮ

ಈ ಪುಣ್ಯ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಹಾಸನ ಹಾಗೂ ಕೊಡಗು ಶಾಖಾ ಮಠದ ಕಾರ್ಯದರ್ಶಿಗಳಾದ ಶ್ರೀ ಶಂಭುನಾಥ ಸ್ವಾಮೀಜಿ, ಶ್ರೀ ಶಿವಪುತ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

​ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್. ಬಾಲಕೃಷ್ಣ, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ. ಗೋಪಾಲಸ್ವಾಮಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಶಿವನಂಜೇಗೌಡ ಮತ್ತು ಎನ್.ಆರ್. ರತ್ನರಾಜ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆ ಪ್ರಮೀಳಾ ಪ್ರಕಾಶ್, ಗುಡಿ ಗೌಡ ಪ್ರಕಾಶ್, ಪ್ರಮುಖರಾದ ಜವರೇಗೌಡ, ಗಣೇಶ್ ಗೌಡ ಸೇರಿದಂತೆ ಕಬ್ಬಳಿ ಹಾಗೂ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಭಕ್ತರು ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾದರು.