8.4 C
Munich
Home Uncategorized ₹21 ಕೋಟಿ ಗಡಿ ದಾಟಿದ ಹಾಸನಾಂಬೆ ದರ್ಶನದ ಟಿಕೆಟ್-ಲಾಡು ಮಾರಾಟದ ಆದಾಯ: 11 ದಿನಗಳಲ್ಲಿ ಸಾರ್ವಕಾಲಿಕ...

₹21 ಕೋಟಿ ಗಡಿ ದಾಟಿದ ಹಾಸನಾಂಬೆ ದರ್ಶನದ ಟಿಕೆಟ್-ಲಾಡು ಮಾರಾಟದ ಆದಾಯ: 11 ದಿನಗಳಲ್ಲಿ ಸಾರ್ವಕಾಲಿಕ ದಾಖಲೆಯ ಸಂಗ್ರಹ!

ಹಾಸನ (kannadapost.com): ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ಶಕ್ತಿದೇವತೆ ಶ್ರೀ ಹಾಸನಾಂಬ ದೇವಿ ದರ್ಶನ ಹಾಗೂ ಶ್ರೀ ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವ 2026 ರಲ್ಲಿ ಭಕ್ತರ ಸಾಗರವೇ ಹರಿದುಬರುತ್ತಿದ್ದು, ದೇವಾಲಯದ ಆದಾಯದಲ್ಲಿ ಸಾರ್ವಕಾಲಿಕ ದಾಖಲೆ ನಿರ್ಮಾಣವಾಗಿದೆ. ಅಕ್ಟೋಬರ್ 29 ರಿಂದ ನವೆಂಬರ್ 8 ರ ಮಧ್ಯಾಹ್ನ 1:30 ರವರೆಗೆ ಕೇವಲ ವಿಶೇಷ ದರ್ಶನದ ಟಿಕೆಟ್ ಹಾಗೂ ಲಾಡು ಪ್ರಸಾದ ಮಾರಾಟದಿಂದಲೇ ಬರೋಬ್ಬರಿ ₹21,19,48,720 (₹21.19 ಕೋಟಿ) ಆದಾಯ ಸಂಗ್ರಹವಾಗಿದೆ.

​ವೀಕೆಂಡ್ ಹಿನ್ನೆಲೆಯಲ್ಲಿ ಭಾನುವಾರವೂ ಭಕ್ತರ ದಂಡು ಹರಿದುಬಂದಿದ್ದು, ₹300 ಹಾಗೂ ₹1000 ಮುಖಬೆಲೆಯ ನೇರ ದರ್ಶನದ ಟಿಕೆಟ್‌ಗಳಿಗೆ ಭಾರೀ ಬೇಡಿಕೆ ವ್ಯಕ್ತವಾಗಿದೆ. ಇದುವರೆಗೆ ಒಟ್ಟು 3,45,816 ಮಂದಿ ಟಿಕೆಟ್ ಖರೀದಿಸಿ ದೇವಿಯ ದರ್ಶನ ಪಡೆದಿದ್ದಾರೆ.

​ಆದಾಯ ಸಂಗ್ರಹದ ಸಂಪೂರ್ಣ ವಿವರ:

  • ​₹1000 ಟಿಕೆಟ್‌ನಿಂದಲೇ ಗರಿಷ್ಠ ಆದಾಯ: ₹1000 ಮುಖಬೆಲೆಯ ಟಿಕೆಟ್ ಮಾರಾಟದಿಂದಲೇ ಅತಿ ಹೆಚ್ಚು ಅಂದರೆ ₹13,91,46,000 (₹13.91 ಕೋಟಿ) ಸಂಗ್ರಹವಾಗಿದೆ. ಇದರಲ್ಲಿ ಆನ್‌ಲೈನ್ ಮೂಲಕ 32,551 ಟಿಕೆಟ್‌ಗಳು (₹3.25 ಕೋಟಿ) ಹಾಗೂ ಕೌಂಟರ್‌ಗಳಲ್ಲಿ 1,06,595 ಟಿಕೆಟ್‌ಗಳು (₹10.65 ಕೋಟಿ) ಸೇರಿ ಒಟ್ಟು 1,39,146 ಟಿಕೆಟ್‌ಗಳು ಮಾರಾಟವಾಗಿವೆ.

  • ​₹300 ಟಿಕೆಟ್ ಮಾರಾಟ: ₹300 ಮುಖಬೆಲೆಯ ಒಟ್ಟು 2,06,670 ಟಿಕೆಟ್‌ಗಳು ಮಾರಾಟವಾಗಿದ್ದು, ಇದರಿಂದ ₹6,20,01,000 (₹6.20 ಕೋಟಿ) ಆದಾಯ ಬಂದಿದೆ. ಇದರಲ್ಲಿ ಆನ್‌ಲೈನ್ ಮೂಲಕ 34,719 ಟಿಕೆಟ್‌ಗಳು (₹1.04 ಕೋಟಿ) ಮತ್ತು ಭೌತಿಕ ಕೌಂಟರ್‌ಗಳಲ್ಲಿ 1,71,951 ಟಿಕೆಟ್‌ಗಳು (₹5.15 ಕೋಟಿ) ಮಾರಾಟವಾಗಿವೆ.

  • ​ಲಡ್ಡು ಪ್ರಸಾದದಿಂದ ₹1.08 ಕೋಟಿ: ಭಕ್ತರು ದೇವಿಯ ಪ್ರಸಾದಕ್ಕೂ ಮುಗಿಬಿದ್ದಿದ್ದು, ಬರೋಬ್ಬರಿ 1,79,370 ಲಡ್ಡು ಪ್ರಸಾದ ಮಾರಾಟವಾಗಿದೆ. ಇದರಿಂದ ದೇವಾಲಯಕ್ಕೆ ₹1,08,01,720 ಆದಾಯ ಹರಿದುಬಂದಿದೆ.

​ನವೆಂಬರ್ 5 ರ ವೇಳೆಗೆ ₹10.21 ಕೋಟಿ ಇದ್ದ ಟಿಕೆಟ್ ಮತ್ತು ಲಾಡು ಆದಾಯ, ಕಳೆದ ಮೂರು ದಿನಗಳಲ್ಲಿ ದುಪ್ಪಟ್ಟಾಗಿ ₹21.19 ಕೋಟಿ ತಲುಪಿರುವುದು ವಿಶೇಷ. ನವೆಂಬರ್ 10 ರವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶವಿರುವುದರಿಂದ ಅಂತಿಮ ದಿನಗಳಲ್ಲಿ ಈ ಮೊತ್ತ ₹25 ಕೋಟಿ ಗಡಿ ದಾಟುವ ನಿರೀಕ್ಷೆಯಿದೆ. ಹುಂಡಿ ಎಣಿಕೆ ಕಾರ್ಯ ಇನ್ನಷ್ಟೇ ನಡೆಯಬೇಕಿದ್ದು, ಒಟ್ಟಾರೆ ಆದಾಯ ಮತ್ತಷ್ಟು ಏರಿಕೆಯಾಗಲಿದೆ.

error: Content is protected !!