ಹಾಸನ:ಪರಿವರ್ತನೆಯೇ ಶ್ರೇಷ್ಠ ಎಂದು ಸಾರಿದ ವಾಲ್ಮೀಕಿ ಮಹರ್ಷಿ ಆದರ್ಶಪ್ರಾಯ: ಡಾ.ಎಚ್.ಎನ್.ಚಂದ್ರಶೇಖರ್-ಸ್ಕಾಲರ್ಸ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ವಾಲ್ಮೀಕಿ ಜಯಂತಿ

ಹಾಸನ (kannadapost.com): ಇಲ್ಲಿನ ಸ್ಕಾಲರ್ಸ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು. ಶಾಲೆಯ ಆಡಳಿತಾಧಿಕಾರಿ ಡಾ. ಎಚ್. ಎನ್. ಚಂದ್ರಶೇಖರ್ ಹಾಗೂ ಕಾರ್ಯದರ್ಶಿ ಮಮತಾ ಚಂದ್ರಶೇಖರ್ ಅವರು ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.

​ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಎಚ್. ಎನ್. ಚಂದ್ರಶೇಖರ್, “ರಾಮಾಯಣ ಮಹಾಕಾವ್ಯ ರಚಿಸಿದ ವಾಲ್ಮೀಕಿ ಅವರ ಜೀವನ ಮತ್ತು ಸಾಹಿತ್ಯ ಇಂದಿಗೂ ಸಮಾಜಕ್ಕೆ ಸ್ಫೂರ್ತಿಯಾಗಿದೆ. ವ್ಯಕ್ತಿಯೊಬ್ಬನ ಹಿಂದಿನ ಜೀವನಕ್ಕಿಂತ ಆತ ತನ್ನ ಬದುಕಿನಲ್ಲಿ ಸಾಧಿಸುವ ಪರಿವರ್ತನೆಯೇ ನಿಜವಾದ ಶ್ರೇಷ್ಠತೆಯನ್ನು ಸಾರುತ್ತದೆ” ಎಂದರು.

​ವಾಲ್ಮೀಕಿ ಅವರ ಜೀವನವು ಸತ್ಯ, ಧರ್ಮ, ಜ್ಞಾನ, ತ್ಯಾಗ ಹಾಗೂ ಮಾನವೀಯ ಮೌಲ್ಯಗಳ ಮಹತ್ವವನ್ನು ತಿಳಿಸುತ್ತದೆ. ವಿದ್ಯಾರ್ಥಿಗಳು ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಇದೇ ವೇಳೆ ಕರೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.