ಹಾಸನ (kannadapost.com): ಇಲ್ಲಿನ ‘ದಿ ಸ್ಕಾಲರ್ಸ್ ವರ್ಲ್ಡ್’ ಶಾಲೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು. ಶಾಲೆಯ ಆಡಳಿತಾಧಿಕಾರಿ ಡಾ. ಎಚ್. ಎನ್. ಚಂದ್ರಶೇಖರ್ ಹಾಗೂ ಕಾರ್ಯದರ್ಶಿ ಮಮತಾ ಚಂದ್ರಶೇಖರ್ ಅವರು ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಎಚ್. ಎನ್. ಚಂದ್ರಶೇಖರ್, “ರಾಮಾಯಣ ಮಹಾಕಾವ್ಯ ರಚಿಸಿದ ವಾಲ್ಮೀಕಿ ಅವರ ಜೀವನ ಮತ್ತು ಸಾಹಿತ್ಯ ಇಂದಿಗೂ ಸಮಾಜಕ್ಕೆ ಸ್ಫೂರ್ತಿಯಾಗಿದೆ. ವ್ಯಕ್ತಿಯೊಬ್ಬನ ಹಿಂದಿನ ಜೀವನಕ್ಕಿಂತ, ಆತ ತನ್ನ ಬದುಕಿನಲ್ಲಿ ಸಾಧಿಸುವ ಪರಿವರ್ತನೆಯೇ ನಿಜವಾದ ಶ್ರೇಷ್ಠತೆಯನ್ನು ಸಾರುತ್ತದೆ” ಎಂದರು.
ವಾಲ್ಮೀಕಿ ಅವರ ಜೀವನವು ಸತ್ಯ, ಧರ್ಮ, ಜ್ಞಾನ, ತ್ಯಾಗ ಹಾಗೂ ಮಾನವೀಯ ಮೌಲ್ಯಗಳ ಮಹತ್ವವನ್ನು ತಿಳಿಸುತ್ತದೆ. ವಿದ್ಯಾರ್ಥಿಗಳು ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಇದೇ ವೇಳೆ ಕರೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.










