ದೇವಿಗೆರೆ ಕೆರೆ ಸಂರಕ್ಷಣೆ ಮತ್ತು ಪುನರುಜ್ಜೀವನಕ್ಕೆ ವಿಶೇಷ ಸಮಿತಿ ರಚನೆ: ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಆದೇಶ

ಹಾಸನ (kannadapost.com):  ನಗರದ ಹೃದಯಭಾಗದಲ್ಲಿರುವ ಐತಿಹಾಸಿಕ ಹಾಗೂ ಪರಿಸರ ಸಂರಕ್ಷಣೆಯ ಪ್ರಮುಖ ಜಲಮೂಲವಾದ ನೀರುಬಾಗಿಲು ಆಂಜನೇಯ ಸ್ವಾಮಿ ದೇವಸ್ಥಾನದ ಪಕ್ಕದ ‘ದೇವಿಗೆರೆ ಕಲ್ಯಾಣಿ’ಯ ಸಮಗ್ರ ಸಂರಕ್ಷಣೆ, ನಿರ್ವಹಣೆ ಮತ್ತು ಪುನರುಜ್ಜೀವನಕ್ಕಾಗಿ ಜಿಲ್ಲಾಡಳಿತ ಮಹತ್ವದ ಹೆಜ್ಜೆ ಇಟ್ಟಿದೆ.

ನಿರ್ದೇಶನ ಹಾಗೂ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ (KTCDA) ನಿಯಮಾವಳಿಗಳ ಅನ್ವಯ 9 ಅಧಿಕಾರಿಗಳನ್ನೊಳಗೊಂಡ ಉನ್ನತ ಮಟ್ಟದ ವಿಶೇಷ ಸಮಿತಿಯನ್ನು ರಚಿಸಿ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಆದೇಶ ಹೊರಡಿಸಿದ್ದಾರೆ.

ವೇಗದ ನಗರೀಕರಣ, ಪ್ಲಾಸ್ಟಿಕ್-ಘನತ್ಯಾಜ್ಯ ಎಸೆಯುವಿಕೆ ಹಾಗೂ ಒಳಚರಂಡಿ ಕಲುಷಿತ ನೀರು ಸೇರ್ಪಡೆಯಿಂದ ನಲುಗುತ್ತಿರುವ ದೇವಿಗೆರೆಯನ್ನು ವೈಜ್ಞಾನಿಕವಾಗಿ ರಕ್ಷಿಸಲು ಸಮಿತಿಗೆ ಕಟ್ಟುನಿಟ್ಟಿನ 18 ಅಂಶಗಳ ಕಾರ್ಯಸೂಚಿಯನ್ನು ನಿಗದಿಪಡಿಸಲಾಗಿದೆ.

ಸಮಿತಿಯ ರಚನೆ

  • ಅಧ್ಯಕ್ಷರು: ಉಪವಿಭಾಗಾಧಿಕಾರಿಗಳು, ಹಾಸನ ಉಪವಿಭಾಗ
  • ಸದಸ್ಯ ಕಾರ್ಯದರ್ಶಿ: ಸಹಾಯಕ ಕಾರ್ಯಪಾಲಕ ಅಭಿಯಂತರರು (ಪರಿಸರ), ಮಹಾನಗರಪಾಲಿಕೆ, ಹಾಸನ
  • ಸದಸ್ಯರು:
    • ಡಿವೈಎಸ್ಪಿ (DySP), ಹಾಸನ ಉಪವಿಭಾಗ
    • ಪರಿಸರ ಅಧಿಕಾರಿಗಳು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB), ಹಾಸನ
    • ಯೋಜನಾ ನಿರ್ದೇಶಕರು, ನಗರಾಭಿವೃದ್ಧಿ ಕೋಶ, ಹಾಸನ
    • ಉಪಕಾರ್ಯದರ್ಶಿಗಳು (ಆಡಳಿತ), ಜಿಲ್ಲಾ ಪಂಚಾಯತ್, ಹಾಸನ
    • ಆಯುಕ್ತರು, ಮಹಾನಗರಪಾಲಿಕೆ, ಹಾಸನ
    • ತಹಶೀಲ್ದಾರ್ ಹಾಗೂ ತಾಲ್ಲೂಕು ದಂಡಾಧಿಕಾರಿಗಳು, ಹಾಸನ
    • ತಹಶೀಲ್ದಾರ್ (ಮುಜರಾಯಿ), ಜಿಲ್ಲಾಧಿಕಾರಿಗಳ ಕಚೇರಿ, ಹಾಸನ

ಜಿಲ್ಲಾಡಳಿತ ಸೂಚಿಸಿರುವ ಪ್ರಮುಖ 18 ಕಾರ್ಯಸೂಚಿಗಳು

  1. ಸಂಯುಕ್ತ ಕಂದಾಯ ಸರ್ವೆ: ಹಳೆಯ ದಾಖಲೆಗಳ ಆಧಾರದ ಮೇಲೆ ತಹಶೀಲ್ದಾರ್ ನೇತೃತ್ವದಲ್ಲಿ ಕೆರೆಯ ನಿಖರ ಗಡಿ ಗುರುತಿಸುವುದು.
  2. ಗಡಿ ಕಲ್ಲುಗಳ ಸ್ಥಾಪನೆ: ಕೆರೆಯ ಗರಿಷ್ಠ ನೀರಿನ ಮಟ್ಟದ (HFL) ಸುತ್ತಲೂ ಶಾಶ್ವತ ಕಾಂಕ್ರೀಟ್ ಗಡಿ ಕಲ್ಲುಗಳನ್ನು ನೆಡುವುದು.
  3. ಕಾಲುವೆಗಳ ನಕ್ಷೆ: ರಾಜಕಾಲುವೆ ಹಾಗೂ ಒಳ-ಹೊರ ಹರಿವಿನ ತೂಬುಗಳನ್ನು ಗುರುತಿಸಿ ಸ್ವಚ್ಛಗೊಳಿಸುವುದು.
  4. ಚರಂಡಿ ನೀರು ತಡೆ: ಒಳಚರಂಡಿ ನೀರು ಕೆರೆ ಸೇರದಂತೆ ತಡೆದು ಮಹಾನಗರಪಾಲಿಕೆಯ UGD ಜಾಲಕ್ಕೆ ಜೋಡಿಸುವುದು.
  5. ಕಬ್ಬಿಣದ ಜಾಲರಿಗಳು: ಮಳೆನೀರು ಕಾಲುವೆಗಳ ಮೂಲಕ ಪ್ಲಾಸ್ಟಿಕ್ ಮತ್ತು ಕಸ ಕೆರೆಗೆ ಬಾರದಂತೆ ‘ಟ್ರ್ಯಾಶ್ ರ್‍ಯಾಕ್’ (Trash Racks) ಅಳವಡಿಸುವುದು.
  6. ಸಿಲ್ಟ್ ಟ್ರ್ಯಾಪ್ ನಿರ್ಮಾಣ: ಮಣ್ಣು ಮತ್ತು ಹೂಳು ನೇರವಾಗಿ ಕೆರೆ ಸೇರದಂತೆ ಹೂಳು ಸಂಗ್ರಹಣಾ ತೊಟ್ಟಿ ನಿರ್ಮಿಸುವುದು.
  7. ವೈಜ್ಞಾನಿಕ ಹೂಳೆತ್ತುವಿಕೆ: ಬೇಸಿಗೆಯಲ್ಲಿ ಹೂಳು ತೆಗೆದು ನೀರಿನ ಸಂಗ್ರಹ ಸಾಮರ್ಥ್ಯ ಹಾಗೂ ಅಂತರ್ಜಲ ವೃದ್ಧಿಸುವುದು.
  8. ಕೋಡಿ ಸ್ವಚ್ಛತೆ: ಮಳೆಗಾಲದಲ್ಲಿ ಕೋಡಿ ನೀರು ಸರಾಗವಾಗಿ ಹರಿದುಹೋಗುವಂತೆ ಮಾರ್ಗ ಸುಗಮಗೊಳಿಸುವುದು.
  9. ಜಲಸಸ್ಯಗಳ ತೆರವು: ಆಫ್ರಿಕನ್ ಪಾಚಿ ಹಾಗೂ ಜಲಕಳೆಗಳನ್ನು ನಿರಂತರವಾಗಿ ತೆರವುಗೊಳಿಸುವುದು.
  10. ಮಾಸಿಕ ನೀರಿನ ಪರೀಕ್ಷೆ: ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪ್ರತಿ ತಿಂಗಳು ನೀರಿನ ಗುಣಮಟ್ಟ ಪರೀಕ್ಷಿಸಿ ವರದಿ ಪ್ರಕಟಿಸುವುದು.
  11. ಪ್ರತ್ಯೇಕ ವಿಸರ್ಜನಾ ಕಲ್ಯಾಣಿ: ಹಬ್ಬಗಳಲ್ಲಿ ಗಣೇಶ ಮೂರ್ತಿ ವಿಸರ್ಜನೆಗೆ ಕೆರೆಯ ಪಕ್ಕದಲ್ಲೇ ಪ್ರತ್ಯೇಕ ಕಲ್ಯಾಣಿ ನಿರ್ಮಿಸುವುದು.
  12. ಚೈನ್‌ಲಿಂಕ್ ತಂತಿ ಬೇಲಿ: ರಾತ್ರಿ ವೇಳೆ ತ್ಯಾಜ್ಯ ಸುರಿಯುವುದನ್ನು ತಡೆಯಲು ಕೆರೆಯ ಸುತ್ತಲೂ ತಂತಿ ಬೇಲಿ ಹಾಕುವುದು.
  13. ದಂಡೆಯಲ್ಲಿ ಜೈವಿಕ ಕವಚ: ಮಣ್ಣಿನ ಸವೆತ ತಡೆಯಲು ಆಳವಾದ ಬೇರು ಬಿಡುವ ನೈಸರ್ಗಿಕ ಹುಲ್ಲು ಮತ್ತು ಗಿಡಗಳನ್ನು ನೆಡುವುದು.
  14. ಕಸದ ಬುಟ್ಟಿ & ದಂಡ: ವಾಕಿಂಗ್ ಪಾತ್‌ನಲ್ಲಿ ಒಣ-ಹಸಿ ತ್ಯಾಜ್ಯ ಬುಟ್ಟಿ ಇಡುವುದು ಹಾಗೂ ಕಸ ಎಸೆಯುವವರಿಗೆ ದಂಡ ವಿಧಿಸುವುದು.
  15. ಸೋಲಾರ್ ಬೀದಿ ದೀಪಗಳು: ವಾಕಿಂಗ್ ಟ್ರ್ಯಾಕ್ ಸುತ್ತಲೂ ಸಾರ್ವಜನಿಕರ ಸುರಕ್ಷತೆಗಾಗಿ ಸೌರಶಕ್ತಿ ದೀಪ ಅಳವಡಿಕೆ.
  16. ಕೆರೆ ಕಾವಲುಗಾರರ ನೇಮಕ: ಭದ್ರತೆ ಹಾಗೂ ಸ್ವಚ್ಛತೆಗಾಗಿ ನಗರಪಾಲಿಕೆಯಿಂದ ಕೆರೆ ಕಾವಲುಗಾರರನ್ನು ನೇಮಿಸುವುದು.
  17. ಪೊಲೀಸ್ ರಾತ್ರಿ ಗಸ್ತು: ರಾತ್ರಿ ವೇಳೆ ಅಕ್ರಮವಾಗಿ ತ್ಯಾಜ್ಯ ಎಸೆಯುವ ಕಿಡಿಗೇಡಿಗಳ ವಿರುದ್ಧ ಪೊಲೀಸ್ ಇಲಾಖೆಯಿಂದ ಕಠಿಣ ನಿಗಾ ಮತ್ತು ಗಸ್ತು.
  18. ಮಾಹಿತಿ ಫಲಕಗಳು: ಸಾರ್ವಜನಿಕರಿಗೆ ನಿಯಮಗಳು, ನೀರಿನ ಗುಣಮಟ್ಟ ಹಾಗೂ ತುರ್ತು ಸಂಪರ್ಕ ಸಂಖ್ಯೆಗಳ ನಾಮಫಲಕ ಅಳವಡಿಕೆ.

ತಿಂಗಳಿಗೊಮ್ಮೆ ಸಭೆ, ಕಠಿಣ ನಿಗಾ

ರಚಿಸಲಾದ ಸಮಿತಿಯು ಜಿಪಿಎಸ್ ಫೋಟೋ ಸಮೇತ ಜಂಟಿ ಸ್ಥಳ ಪರಿಶೀಲನೆ ನಡೆಸಿ ಜಿಲ್ಲಾಧಿಕಾರಿಗಳ ಕಚೇರಿಯ ಧಾರ್ಮಿಕ ದತ್ತಿ ಶಾಖೆಗೆ ಸಮಗ್ರ ವರದಿ ಸಲ್ಲಿಸಬೇಕು. ಪ್ರತಿ ತಿಂಗಳು ಪ್ರಗತಿ ಪರಿಶೀಲನಾ ಸಭೆ ನಡೆಸಿ ಕೈಗೊಂಡ ಕ್ರಮಗಳ ವರದಿ (Action Taken Report – ATR) ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.