ಹಾಸನ: ನಿಷೇಧಾಜ್ಞೆಯಿದ್ದರೂ ದೇವಿಗೆರೆಯಲ್ಲಿ ಪೆಂಡಾಲ್ ಗಣಪತಿ ವಿಸರ್ಜನೆ: ಎಸ್ಪಿ ವಿರುದ್ಧ ಡಿಸಿ ಗರಂ- ಖುದ್ದು ಹಾಜರಾಗಿ ವಿವರಣೆ ನೀಡಲು ನೋಟಿಸ್ ಜಾರಿ!

ಹಾಸನ (kannadapost.com):ನಗರದ ಐತಿಹಾಸಿಕ ನೀರುಬಾಗಿಲು ಆಂಜನೇಯ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿರುವ ದೇವಿಗೆರೆ ಆವರಣದಲ್ಲಿ ನಿಷೇಧಾಜ್ಞೆ ಉಲ್ಲಂಘಿಸಿ ಗಣೇಶ ಮೂರ್ತಿಗಳನ್ನು ವಿಸರ್ಜಿಸಲು ಅವಕಾಶ ನೀಡಿದ ಪೊಲೀಸ್ ಇಲಾಖೆ ಮೇಲೆ ಡಿಸಿ ಅಸಮಾಧಾನಗೊಂಡಿದ್ದಾರೆ.

 ಕರ್ತವ್ಯಲೋಪ ಹಾಗೂ ನಿರ್ಲಕ್ಷ್ಯ ಆರೋಪದಡಿ ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಶುಭಾನ್ವಿತಾ ಅವರಿಗೆ ಖುದ್ದು ಹಾಜರಾಗಿ ವಿವರಣೆ ನೀಡುವಂತೆ ಕಟುವಾದ ಪದಗಳಲ್ಲಿ ‘ಕಾರಣ ಕೇಳಿ ನೋಟಿಸ್‘ ಜಾರಿ ಮಾಡಿದ್ದಾರೆ.

​ಏನಿದು ಘಟನೆ?:

ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿರುವ ದೇವಿಗೆರೆ ಕಲ್ಯಾಣಿಯ ನೀರು ರಾಸಾಯನಿಕ ಬಣ್ಣಗಳು ಮತ್ತು ತ್ಯಾಜ್ಯಗಳಿಂದ ಕಲುಷಿತಗೊಳ್ಳುವುದನ್ನು ತಪ್ಪಿಸಲು ಮಹಾನಗರ ಪಾಲಿಕೆ ಹಾಗೂ ತಹಶೀಲ್ದಾರ್ ವರದಿ ನೀಡಿದ್ದರು. ಇದರ ಅನ್ವಯ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) 2023ರ ಸೆಕ್ಷನ್ 163 ಮತ್ತು ಜಲ ಮಾಲಿನ್ಯ ತಡೆ ಕಾಯ್ದೆ (Water Act 1974) ಸೆಕ್ಷನ್ 24ರ ಅಡಿಯಲ್ಲಿ ಅಕ್ಟೋಬರ್ 3ರಂದು ಜಿಲ್ಲಾಧಿಕಾರಿಗಳು ದೇವಿಗೆರೆಯಲ್ಲಿ ಗೌರಿ-ಗಣೇಶ ಮೂರ್ತಿಗಳ ವಿಸರ್ಜನೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿದ್ದರು. ನಿಯಮ ಮೀರುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಪೊಲೀಸ್ ಇಲಾಖೆಗೆ ಸ್ಪಷ್ಟ ಸೂಚನೆ ನೀಡಲಾಗಿತ್ತು.

​ಆದೇಶವಿದ್ದರೂ ಪೆಂಡಾಲ್ ಗಣಪತಿ ವಿಸರ್ಜನೆ:

ಆದರೆ, ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಅಕ್ಟೋಬರ್ 3ರಂದು ನಗರದ  ಪೆಂಡಾಲ್‌ ಗಣಪತಿ ಹಾಗೂ ಗೌರಿ ಮೂರ್ತಿಗಳನ್ನು ನಿರ್ಭೀತಿಯಿಂದ ದೇವಿಗೆರೆ ಆವರಣದಲ್ಲೇ ವಿಸರ್ಜಿಸಲಾಗಿದೆ ಎಂದಿರುವ ಡಿಸಿ, ಆದೇಶ ಉಲ್ಲಂಘಿಸಿದ ಸಂಘಟಕರು ಹಾಗೂ ವ್ಯಕ್ತಿಗಳ ವಿರುದ್ಧ ಯಾವುದೇ ಕಾನೂನು ಕ್ರಮ ಜರುಗಿಸದೆ ಪೊಲೀಸ್ ಇಲಾಖೆ ಮೌನ ವಹಿಸಿದೆ ಎಂದು ನೋಟಿಸ್‌ನಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

​ನೋಟಿಸ್‌ನಲ್ಲಿ ಡಿಸಿ ತರಾಟೆ:

“ಜಿಲ್ಲಾಡಳಿತ ಜಾರಿಗೊಳಿಸಿದ ನಿಷೇಧಾಜ್ಞೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರದೆ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿರುವುದು ಸರ್ಕಾರಿ ನೌಕರರಿಗೆ ತರವಲ್ಲದ ನಡವಳಿಕೆ. ಇದು ಕರ್ತವ್ಯಲೋಪ ಮಾತ್ರವಲ್ಲದೆ ಉದ್ಧಟತನದ ಪರಮಾವಧಿಯಾಗಿದೆ. ಈ ಕರ್ತವ್ಯಲೋಪಕ್ಕೆ ಸಂಬಂಧಿಸಿದಂತೆ ನಿಮ್ಮ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಸಕ್ಷಮ ಪ್ರಾಧಿಕಾರಕ್ಕೆ (ಸರ್ಕಾರಕ್ಕೆ) ಏಕೆ ಶಿಫಾರಸ್ಸು ಮಾಡಬಾರದು? ನೋಟಿಸ್ ತಲುಪಿದ ತಕ್ಷಣವೇ ಖುದ್ದು ಹಾಜರಾಗಿ ಲಿಖಿತ ಸಮಜಾಯಿಷಿ ನೀಡಬೇಕು; ತಪ್ಪಿದರೆ ಶಿಸ್ತುಕ್ರಮಕ್ಕೆ ಶಿಫಾರಸ್ಸು ರವಾನಿಸಲಾಗುವುದು,” ಎಂದು ಜಿಲ್ಲಾಧಿಕಾರಿ, ಎಸ್ಪಿಗೆ ಎಚ್ಚರಿಕೆ ನೀಡಿದ್ದಾರೆ.