ಹಾಸನ (kannadapost.com): ಪ್ರತಿ ವರ್ಷ ಸೆಪ್ಟೆಂಬರ್ 17 ರಂದು ವಿಶ್ವಕರ್ಮ ಮಹೋತ್ಸವ ಮತ್ತು ಜನವರಿ 01 ರಂದು ಅಮರಶಿಲ್ಪಿ ಜಕಣಾಚಾರ್ಯ ಸಂಸ್ಮರಣಾ ದಿನಾಚರಣೆಗೆ ಸಂಬಂಧಿಸಿದಂತೆ, ಪ್ರತಿ ಕಾರ್ಯಕ್ರಮಕ್ಕೆ ಸರ್ಕಾರ ನಿಗಧಿ ಮಾಡಿರುವ ಪ್ರೋತ್ಸಾಹಕರ ಅನುದಾನವನ್ನು ಕೂಡಲೆ ಬಿಡುಗಡೆ ಮಾಡಬೇಕು ಎಂದು ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷ ಎಚ್. ವಿ. ಹರೀಶ್ ಮನವಿ ಮಾಡಿದ್ದಾರೆ.
ವಿಶೇಷವಾಗಿ ವಿಶ್ವಕರ್ಮ ಸಮಾಜವು ಹಾಸನ ಜಿಲ್ಲೆಗೆ ಶಿಲ್ಪಕಲೆಗಳ ತವರೂರೆಂಬ ಕೀರ್ತಿ ಬರಲು ಮತ್ತು ಪ್ರವಾಸೋದ್ಯಮದ ಅಭಿವೃದ್ಧಿಗೆ ಅವಿಸ್ಮರಣೀಯ ಕೊಡುಗೆ ನೀಡಿದೆ. ವ್ಯಾಪಾರ ವ್ಯವಹಾರಗಳಿಗೆ ತನ್ನದೇ ಆದ ರೀತಿಯಲ್ಲಿ ವಿಶೇಷವಾದ ಕೊಡುಗೆ ನೀಡಿ ಜಿಲ್ಲೆಯ ಆರ್ಥಿಕ ಚಟುವಟಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ರೈತರ ಬೆನ್ನೆಲುಬಾಗಿರುವ ವಿಶ್ವಕರ್ಮ ಸಮಾಜವು ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರದಲ್ಲಿ ಸಮರ್ಥ ಮತ್ತು ಸದೃಢ ಸಂಘಟನೆ ಹೊಂದಿದೆ.
ಸಮಾಜದ ಗುರುಪೀಠಗಳು ಮತ್ತು ಸಂಘಟನೆಯ ಮುಖಂಡರ ಸತತ ಪರಿಶ್ರಮದ ಫಲವಾಗಿ ರಾಜ್ಯ ಸರ್ಕಾರ ಆದೇಶ ಮಾಡಿರುವ ಈ ಆಚರಣೆಯನ್ನು ಸಮಾಜದ ಸಂಘಟನೆಯ ಮುಖಂಡರ ಸಭೆ ನಡೆಸಿ ಅವರನ್ನು ವಿಶ್ವಾಸಕ್ಕೆ ಪಡೆದು ಈ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಆಯೋಜಿಸಬೇಕು.
ಈ ಬಗ್ಗೆ ಹಾಸನ ಜಿಲ್ಲಾ ವಿಶ್ವಕರ್ಮ ಸಮಾಜದ ಕಾರ್ಯಕಾರಿ ಸಮಿತಿಯು ಹಾಸನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ, ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಸಹ ಜಿಲ್ಲಾಡಳಿತ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯನ್ನು ಆಗ್ರಹಪೂರ್ವಕವಾಗಿ ವಿನಂತಿಸಲಾಗಿದೆ.
ಕೆಲ ವರ್ಷಗಳಿಂದ ತಾಲ್ಲೂಕುಗಳಿಗೆ ಸರ್ಕಾರದಿಂದ ನೀಡುವ ಪ್ರೋತ್ಸಾಹಕರ ಅನುದಾನವನ್ನು ಸಹ ಕೊಟ್ಟಿರುವುದಿಲ್ಲ ಎಂದು ತಾಲ್ಲೂಕು ಸಂಘಗಳು ಅಸಮಾಧಾನ ವ್ಯಕ್ತಪಡಿಸಿವೆ. ಆದ್ದರಿಂದ ಕೂಡಲೆ ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೂ ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.












