ಹಾಸನ: ಭೀಕರ ಅಪಘಾತ- ಕೆ‌ಎಸ್‌ಆರ್‌ಟಿಸಿ ಬಸ್‌ ಡಿಕ್ಕಿಯಾಗಿ ಗೃಹಿಣಿ ದಾರುಣ ಸಾವು | Hassan Accident News

ಹಾಸನ(kannadapost.com): ನಗರದ ಎನ್‌.ಆರ್. ವೃತ್ತದಲ್ಲಿ ಕೆ‌ಎಸ್‌ಆರ್‌ಟಿಸಿ ಬಸ್ ಚಾಲಕನ ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಗೆ ಗೃಹಿಣಿಯೋರ್ವಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ. ಮೃತರನ್ನು ಹಾಸನ ತಾಲ್ಲೂಕಿನ ದೊಡ್ಡ ಆಲದಹಳ್ಳಿ ಗ್ರಾಮದ ಮೂಲದ ಅಪರ್ಣ ಡಿ.ಜೆ. (31) ಎಂದು ಗುರುತಿಸಲಾಗಿದೆ.

​ಬೆಂಗಳೂರಿನಲ್ಲಿ ಪತಿ ಯೋಗೀಶ್ ಅವರೊಂದಿಗೆ ನೆಲೆಸಿದ್ದ ಅಪರ್ಣ ಅವರು, ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿಯಷ್ಟೇ ತಮ್ಮ ತವರು ಮನೆಗೆ ಬಂದಿದ್ದರು. ಇಂದು (ಶನಿವಾರ) ಆಸ್ಪತ್ರೆಗೆ ಭೇಟಿ ನೀಡುವ ಸಲುವಾಗಿ ಹಾಸನ ನಗರಕ್ಕೆ ಬಂದಿದ್ದ ಅಪರ್ಣ, ಕೆಲಸ ಮುಗಿಸಿಕೊಂಡು ತಮ್ಮ ಸ್ನೇಹಿತೆ ರಕ್ಷಿತಾ ಅವರೊಂದಿಗೆ ಸ್ಕೂಟರ್‌ನಲ್ಲಿ ವಾಪಸ್ ಊರಿಗೆ ತೆರಳುತ್ತಿದ್ದರು.

​ಘಟನೆಯ ವಿವರ:

ಅಪರ್ಣ ಹಾಗೂ ರಕ್ಷಿತಾ ಅವರು ಎನ್‌.ಆರ್. ವೃತ್ತದ ಬಳಿ ತೆರಳುತ್ತಿದ್ದಾಗ, ಹಿಂದಿನಿಂದ ಅತಿವೇಗವಾಗಿ ಬಂದ ಕೆಎಸ್ಸಾರ್ಟಿಸಿ ಸಾರಿಗೆ ಬಸ್ ಇವರ ಸ್ಕೂಟರ್‌ಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಇಬ್ಬರೂ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಬಸ್ ಚಕ್ರಕ್ಕೆ ಸಿಲುಕಿದ ಅಪರ್ಣ ಅವರನ್ನು ಬಸ್ಸು ಸ್ವಲ್ಪ ದೂರದವರೆಗೆ ಎಳೆದುಕೊಂಡು ಹೋಗಿದೆ.

​ಇದನ್ನು ಗಮನಿಸಿದ ಆಟೋ ಚಾಲಕ ಕುಮಾರ್ ಎಂಬುವವರು ತಕ್ಷಣವೇ ಸ್ಪಂದಿಸಿ, ಚಕ್ರದಡಿಯಿಂದ ಅಪರ್ಣ ಅವರನ್ನು ಹೊರತೆಗೆದು ಜಿಲ್ಲಾಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದಾರೆ. ಆದರೆ, ತೀವ್ರ ರಕ್ತಸ್ರಾವ ಹಾಗೂ ಗಂಭೀರ ಗಾಯಗಳಾಗಿದ್ದರಿಂದ ಆಸ್ಪತ್ರೆ ತಲುಪುವಷ್ಟರಲ್ಲೇ ಅಪರ್ಣ ಕೊನೆಯುಸಿರೆಳೆದಿದ್ದಾರೆ.

​ಬ್ರೇಕ್ ವಿಫಲವಾಗಿದೆ ಎಂದ ಚಾಲಕ:

ಅಪಘಾತಕ್ಕೆ ಬಸ್‌ನ ಬ್ರೇಕ್ ಹಿಡಿಯದಿರುವುದೇ ಕಾರಣ ಎಂದು ಬಸ್ ಚಾಲಕ ಸ್ಥಳದಲ್ಲಿ ಸಬೂಬು ನೀಡಿದ್ದಾನೆ. ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬದಲ್ಲಿ ಇದೀಗ ಸೂತಕದ ಛಾಯೆ ಆವರಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

​ಕಳೆದುಹೋದ ಮಾಂಗಲ್ಯ ಸರ:

ಈ ಭೀಕರ ಅಪಘಾತದ ಗಡಿಬಿಡಿಯಲ್ಲಿ, ಮೃತ ಅಪರ್ಣ ಅವರ ಕೊರಳಿನಲ್ಲಿದ್ದ ಎರಡು ಎಳೆಯ ಚಿನ್ನದ ಮಾಂಗಲ್ಯ ಸರ ಕಳೆದುಹೋಗಿದೆ ಎಂದು ತಿಳಿದುಬಂದಿದೆ.

​ಘಟನಾ ಸ್ಥಳಕ್ಕೆ ಹಾಸನ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.