ಮಾಡಾಳು (kannadapost.com): ನಾಡಿನ ಲಕ್ಷಾಂತರ ಭಕ್ತರ ಆರಾಧ್ಯ ದೈವ ಹಾಗೂ ಶಕ್ತಿದೇವತೆಯಾಗಿ ಮನೆ-ಮನಗಳಲ್ಲಿ ನೆಲೆಸಿರುವ ಗ್ರಾಮದ ಮೂಲಸ್ಥಾನ ಶ್ರೀ ಸ್ವರ್ಣಗೌರಿ ಅಮ್ಮನವರ ನೂತನ ದೇವಾಲಯದಲ್ಲಿ ಶ್ರಾವಣ ಮಾಸದ ಕೊನೆಯ ಬೆನಕನ ಅಮಾವಾಸ್ಯೆಯ ಅಂಗವಾಗಿ ಶುಕ್ರವಾರ ಸಂಜೆ ನೂರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಗಳಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.
ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಜಗದ್ಗುರು ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರ ಅಪ್ಪಣೆ ಮೇರೆಗೆ ಹಾಗೂ ಶ್ರೀಗಳ ಸತ್ಸಂಕಲ್ಪದಂತೆ ಲೋಕಕಲ್ಯಾಣಾರ್ಥವಾಗಿ ಪ್ರತಿ ಅಮಾವಾಸ್ಯೆಯಂದು ಈ ವಿಶೇಷ ಆಚರಣೆಗಳು ಜರುಗುತ್ತವೆ. ಬೆಳಿಗ್ಗೆ ಕೋಡಿಮಠದ ಮಹಾತಪಸ್ವಿ ಶಿವಲಿಂಗಜ್ಜಯ್ಯ ಮೂರ್ತಿ ಹಾಗೂ ಗ್ರಾಮದ ಆರಾಧ್ಯ ದೈವ ಶ್ರೀ ಗುರು ಚನ್ನಬಸವೇಶ್ವರ ಸ್ವಾಮಿ ಸಮ್ಮುಖದಲ್ಲಿ ಮುಂಜಾನೆ ರುದ್ರಾಭಿಷೇಕ ಮತ್ತು ಕುಂಕುಮಾರ್ಚನೆ ನೆರವೇರಿತು. ಸಂಜೆ ಅಮ್ಮನವರಿಗೆ ಅರ್ಚಕರು ವಿಶೇಷ ಪೂಜೆ ಸಲ್ಲಿಸಿ, ಮಹಾಮಂಗಳಾರತಿ ಬೆಳಗಿದರು.
ಕಂಗೊಳಿಸಿದ ದೇವಾಲಯ: ಅಮಾವಾಸ್ಯೆ ಪ್ರಯುಕ್ತ ನೂತನ ದೇವಾಲಯವನ್ನು ಮಾವಿನ ತಳಿರು ತೋರಣ ಹಾಗೂ ಬಾಳೆ ಕಂದುಗಳಿಂದ ಶೃಂಗರಿಸಲಾಗಿತ್ತು. ದೇವಾಲಯದ ಆವರಣದಲ್ಲಿ ಅಳವಡಿಸಲಾಗಿದ್ದ ಬಣ್ಣ ಬಣ್ಣದ ವಿದ್ಯುತ್ ದೀಪಗಳ ಅಲಂಕಾರ ಭಕ್ತರ ಕಣ್ಮನ ಸೆಳೆಯುವ ಜೊತೆಗೆ, ಧಾರ್ಮಿಕ ಕಾರ್ಯಕ್ರಮದ ಕಳೆಯನ್ನು ಮತ್ತಷ್ಟು ಹೆಚ್ಚಿಸಿತ್ತು.
ಅನ್ನದಾಸೋಹ ವ್ಯವಸ್ಥೆ: ಕಾರ್ಯಕ್ರಮಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಮಾಡಾಳು ಗ್ರಾಮದ ಶಿವಲಿಂಗಪ್ಪ ಮತ್ತು ಮಕ್ಕಳು, ಹಾಗೂ ವೈ.ಜಿ. ಹಳ್ಳಿಯ ವೈ.ಸಿ. ಚಂದ್ರಶೇಖರಪ್ಪ ಮತ್ತು ಮಕ್ಕಳ ವತಿಯಿಂದ ಅನ್ನದಾಸೋಹದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಮಾಡಾಳು ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಾದ ಸೀತಾಪುರ ಕೊಪ್ಪಲು, ಯರೇಹಳ್ಳಿ, ವೈ.ಜಿ. ಹಳ್ಳಿ, ದಿಬ್ಬೂರು, ಕಣಕಟ್ಟೆ, ಪಿ. ಹೊಸಳ್ಳಿ, ಕಿತ್ತನೆಕೆರೆ, ದೊಣನಕಟ್ಟೆ, ಬೊಮ್ಮಸಮುದ್ರ, ಕೆ. ಶಂಕರನಹಳ್ಳಿ, ಕಡಲಮಗೆ, ಡಿ.ಎಂ. ಕುರ್ಕೆ, ಶಶಿವಾಳ, ಚಿಕ್ಕಮೇಟಿಕುರ್ಕೆ, ಹಾರನಹಳ್ಳಿ, ಅಣ್ಣಾಯಕನಹಳ್ಳಿ, ಯಳವರೆ, ಹಿರೀಸಾದರಹಳ್ಳಿ, ಸೊಪ್ಪಿನಹಳ್ಳಿ ಮುಂತಾದ ಕಡೆಗಳಿಂದ ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ಅಮ್ಮನವರ ದರ್ಶನ ಪಡೆದು ಪುನೀತರಾದರು.












