ಸಕಲೇಶಪುರ (kannadapost.com): ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ವೆಂಕಟೇಶ್ ಅವರು ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ದೊಡ್ಡಬಳ್ಳಾಪುರ ಮೂಲದ ವೆಂಕಟೇಶ್ ಅವರು ಕಳೆದ ಕೆಲವು ವರ್ಷಗಳಿಂದ ಸಕಲೇಶಪುರ ತಾಲೂಕು ಪಶುಸಂಗೋಪನೆ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಯೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಅವರು, ಕರ್ತವ್ಯನಿಷ್ಠ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದರು.
ಶುಕ್ರವಾರ ಬೆಳಗ್ಗೆ ಇಲಾಖೆಯ ಸಿಬ್ಬಂದಿ ಕೆಲಸದ ನಿಮಿತ್ತ ವೆಂಕಟೇಶ್ ಅವರಿಗೆ ದೂರವಾಣಿ ಕರೆ ಮಾಡಿದ್ದಾರೆ. ಹಲವು ಬಾರಿ ಕರೆ ಮಾಡಿದರೂ ಅವರು ಸ್ವೀಕರಿಸದ ಹಿನ್ನೆಲೆಯಲ್ಲಿ ಅನುಮಾನಗೊಂಡ ಸಿಬ್ಬಂದಿ ಅವರ ನಿವಾಸದ ಬಳಿ ತೆರಳಿ ಪರಿಶೀಲಿಸಿದಾಗ ವೆಂಕಟೇಶ್ ನಿಧನರಾಗಿರುವುದು ಬೆಳಕಿಗೆ ಬಂದಿದೆ. ತೀವ್ರ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ವೆಂಕಟೇಶ್ ಅವರ ಪತ್ನಿಯೂ ವೈದ್ಯರಾಗಿದ್ದಾರೆ. ವಿಶೇಷವೆಂದರೆ, ಸುಮಾರು 15 ದಿನಗಳ ಹಿಂದಷ್ಟೇ ನೆಲಮಂಗಲ ಸಮೀಪ ನಿರ್ಮಿಸಿದ್ದ ನೂತನ ಮನೆಯ ಗೃಹಪ್ರವೇಶ ನೆರವೇರಿಸಿದ್ದರು. ಹೊಸ ಮನೆಯ ಸಂಭ್ರಮದ ಬೆನ್ನಲ್ಲೇ ಸಂಭವಿಸಿದ ಅವರ ಅಕಾಲಿಕ ನಿಧನ ಕುಟುಂಬಸ್ಥರು, ಸಹೋದ್ಯೋಗಿಗಳು ಹಾಗೂ ಪರಿಚಿತರನ್ನು ಆಘಾತಕ್ಕೀಡು ಮಾಡಿದೆ.
ವೆಂಕಟೇಶ್ ಅವರ ನಿಧನಕ್ಕೆ ಶಾಸಕ ಸಿಮೆಂಟ್ ಮಂಜು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಪಶುಸಂಗೋಪನೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಂಬನಿ ಮಿಡಿದಿದ್ದು, ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೊರೆಯಲಿ ಎಂದು ಸಂತಾಪ ಸೂಚಿಸಿದ್ದಾರೆ.











