ಅರಸೀಕೆರೆ: ‘ಆದರ್ಶಗಳ ದಾರಿಯಲ್ಲಿ ಸಾಗಿದಾಗ ಬದುಕು ಶ್ರೇಷ್ಠವಾಗುತ್ತದೆ’ – ಸಾಣೆಹಳ್ಳಿ ಶ್ರೀ

ಅರಸೀಕೆರೆ: “ಮಾನವನ ಬದುಕು ಎಷ್ಟು ಶ್ರೇಷ್ಠವಾಗಿರುತ್ತದೆಯೋ ಅಷ್ಟೇ ಕನಿಷ್ಠವೂ ಆಗುವ ಸಾಧ್ಯತೆಗಳಿರುತ್ತವೆ. ಆದರೆ ಆದರ್ಶಗಳ ದಾರಿಯಲ್ಲಿ ಸಾಗಿದಾಗ ಮಾತ್ರ ಮನುಷ್ಯನ ಬದುಕು ಶ್ರೇಷ್ಠವಾಗುತ್ತದೆ” ಎಂದು ಸಾಣೆಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.

​ತಾಲೂಕಿನ ಕಣಕಟ್ಟೆ ಹೋಬಳಿಯ ರಾಂಪುರ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ, ಜೆಡಿಎಸ್ ಮುಖಂಡ ಹಾಗೂ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಉಪಾಧ್ಯಕ್ಷ ಆರ್.ಎನ್. ಶೇಖರಪ್ಪನವರ ತಾಯಿ ಶ್ರೀಮತಿ ರಾಮಕ್ಕನವರ ಪುಣ್ಯಸ್ಮರಣೆ ಹಾಗೂ ‘ಶರಣ ಸಮ್ಮೇಳನ’ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಸಮಾಜಕ್ಕೆ ಒಳಿತು ಮಾಡಿ:

“ಪ್ರತಿಯೊಬ್ಬ ವ್ಯಕ್ತಿಯು ಕನಿಷ್ಠ ಬದುಕನ್ನು ತೊರೆದು ಶ್ರೇಷ್ಠ ಬದುಕು ಸಾಗಿಸಬೇಕು ಎನ್ನುವುದೇ ಬಸವಾದಿ ಶಿವಶರಣರ ಹಾಗೂ ಹಿರಿಯ ಗುರುಗಳ ಆಶಯವಾಗಿದೆ. ಮನುಷ್ಯ ಹುಟ್ಟು ಮತ್ತು ಸಾವಿನ ನಡುವಿನ ಅವಧಿಯಲ್ಲಿ ಈ ಲೋಕಕ್ಕೆ ಉತ್ತಮ ಕೊಡುಗೆಗಳನ್ನು ನೀಡುವುದು ಅತ್ಯಗತ್ಯ. ಭಕ್ತರು ಶ್ರೀಮಂತರಾದಾಗ ಅಹಂಕಾರ ಬೆಳೆಸಿಕೊಳ್ಳಬಾರದು. ಸತ್ಕಾರ್ಯಗಳನ್ನು ಮಾಡುವ ಮೂಲಕ ಸಂಪತ್ತಿನ ಸಾರ್ಥಕತೆ ಮೆರೆಯಬೇಕು ಮತ್ತು ಸಮಾಜಕ್ಕೆ ಧಾರೆಯೆರೆಯುವ ಉತ್ತಮ ಗುಣಗಳನ್ನು ಬೆಳೆಸಿಕೊಳ್ಳಬೇಕು” ಎಂದು ಸ್ವಾಮೀಜಿ ಭಕ್ತರಿಗೆ ಕಿವಿಮಾತು ಹೇಳಿದರು.

ಯುವಜನತೆ ದಾರಿ ತಪ್ಪುತ್ತಿದ್ದಾರೆ:

ಕಾರ್ಯಕ್ರಮದಲ್ಲಿ ಮಾತನಾಡಿದ ಪಾಂಡುಮಟ್ಟಿ ವಿರಕ್ತ ಮಠದ ಶ್ರೀ ಗುರುಬಸವಾನಂದ ಸ್ವಾಮೀಜಿ, “ಪ್ರಸ್ತುತ ದಿನಗಳಲ್ಲಿ ಯುವಜನತೆ ಆಧುನಿಕ ಜೀವನಶೈಲಿಗೆ ಮಾರುಹೋಗಿದ್ದಾರೆ. ಮೌಲ್ಯಗಳು ಮತ್ತು ಹಿರಿಯರ ಸಿದ್ಧಾಂತಗಳನ್ನು ಗಾಳಿಗೆ ತೂರುತ್ತಿರುವುದರಿಂದ ಸಮಾಜ ದಿಕ್ಕುತಪ್ಪುತ್ತಿದೆ” ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು.

ಕೇಳಿಸಿಕೊಳ್ಳುವ ಗುಣ ಬೆಳೆಯಲಿ:

ಮಾಡಾಳು ನಿರಂಜನ ಪೀಠದ ಶ್ರೀ ರುದ್ರಮುನಿ ಸ್ವಾಮೀಜಿ ಮಾತನಾಡಿ, “ಮಕ್ಕಳಲ್ಲಿ ಮಾತನಾಡುವ ಕಲೆಗಿಂತ ಕೇಳಿಸಿಕೊಳ್ಳುವ ಗುಣ ಬೆಳೆಯಬೇಕು. ಅಂತರಂಗದ ಸತ್ಯ, ಶುದ್ಧತೆ, ಪ್ರಾಮಾಣಿಕತೆ, ಅಹಿಂಸೆ, ಸಹಕಾರ ಮತ್ತು ಪರೋಪಕಾರದಂತಹ ಸದ್ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಬದುಕು ಸಾರ್ಥಕತೆ ಹೊಂದುತ್ತದೆ” ಎಂದರು.

​ವೇದಿಕೆಯಲ್ಲಿ ಕೋಳಗುಂದ ಕೇದಿಗೆ ಮಠದ ಜಯಚಂದ್ರ ಶೇಖರ ಸ್ವಾಮೀಜಿ, ಡಿ.ಎಂ. ಕುರ್ಕೆ ಬೂದಿಹಾಳ್ ವಿರಕ್ತಮಠದ ಶಶಿಶೇಖರ ಸಿದ್ದಬಸವ ಸ್ವಾಮೀಜಿ, ಉಪನ್ಯಾಸಕ ದಿಬ್ಬದಹಳ್ಳಿ ಶ್ಯಾಮಸುಂದರ್ ಉಪಸ್ಥಿತರಿದ್ದರು.

​ತಾಲೂಕು ಸಾಧು ಲಿಂಗಾಯತ ವೀರಶೈವ ಸಮಾಜದ ಮುಖಂಡ ಎನ್.ಜಿ. ಮರುಳುಸಿದ್ದಸ್ವಾಮಿ ನಾಗಸಮುದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಧು ಲಿಂಗಾಯತ ಸಮಾಜದ ಮುಖಂಡ ಅಣ್ಣಾಯಕನಹಳ್ಳಿ ವಿಜಯಕುಮಾರ್ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಹೊಸೂರು ಗಂಗಾಧರ್ ಸೇರಿದಂತೆ ಹಲವು ಗಣ್ಯರು ಹಾಗೂ ಅಪಾರ ಸಂಖ್ಯೆಯ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.