
ನಿವೃತ್ತಿ ನಂತರ ಕ್ರಿಕೆಟ್‌ನಿಂದ ದೂರ ಉಳಿಯುವೆ: ವಿರಾಟ್ ಕೊಹ್ಲಿ ಅಚ್ಚರಿ ಹೇಳಿಕೆ
ಬೆಂಗಳೂರು,ಮೇ,22,2026(www.kannadapost.com): ವಿಶ್ವ ಕ್ರಿಕೆಟ್ ದಂತಕಥೆ, ರನ್ ಮಷಿನ್ ವಿರಾಟ್ ಕೊಹ್ಲಿ (Virat Kohli) ನಿವೃತ್ತಿಯ ನಂತರದ ತಮ್ಮ ಭವಿಷ್ಯದ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ್ದಾರೆ. ತಮ್ಮ ಆಟದ ದಿನಗಳು ಮುಗಿದ ನಂತರ ಕ್ರಿಕೆಟ್‌ಗೆ ಸಂಬಂಧಿಸಿದ ಯಾವುದೇ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಬಯಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಆರ್‌ಸಿಬಿ ಇನ್ನೋವೇಶನ್ ಲ್ಯಾಬ್ ಇಂಡಿಯನ್ ಸ್ಪೋರ್ಟ್ಸ್ ಸಮ್ಮಿಟ್ನ ಮೂರನೇ ಆವೃತ್ತಿಯಲ್ಲಿ ಮಾತನಾಡಿದ ಕೊಹ್ಲಿ, ಕ್ರಿಕೆಟ್ ಜೀವನ, ಮಾನಸಿಕ ಒತ್ತಡ, ನಾಯಕತ್ವ ಹಾಗೂ ಯುವ ಆಟಗಾರರ ಭವಿಷ್ಯದ ಬಗ್ಗೆ ಮುಕ್ತವಾಗಿ ಮಾತನಾಡಿದರು.
“ಜೀವನ ಕ್ರಿಕೆಟ್‌ಗೆ ಮಾತ್ರ ಸೀಮಿತವಾಗಬಾರದು”
ನಿವೃತ್ತಿಯ ನಂತರದ ಯೋಜನೆಗಳ ಕುರಿತು ಮಾತನಾಡಿದ ಕೊಹ್ಲಿ, “ನನ್ನ ಆಟದ ದಿನಗಳು ಮುಗಿದ ನಂತರ ಕ್ರಿಕೆಟ್‌ಗೆ ಸಂಬಂಧಿಸಿದ ಯಾವುದೇ ಕೆಲಸ-ಕಾರ್ಯಗಳಲ್ಲಿ ಬದ್ಧನಾಗಲು ಬಯಸುವುದಿಲ್ಲ. ನನ್ನ ಜೀವನವನ್ನು ಕ್ರಿಕೆಟ್ ಮೇಲೆ ಮಾತ್ರ ಬದುಕಲು ನಾನು ಬಯಸುವುದಿಲ್ಲ” ಎಂದು ಹೇಳಿದ್ದಾರೆ.
ಈ ಜಗತ್ತಿನಲ್ಲಿ ಅರ್ಥಮಾಡಿಕೊಳ್ಳಲು ಮತ್ತು ತಿಳಿದುಕೊಳ್ಳಲು ಇನ್ನೂ ಬಹಳಷ್ಟು ವಿಷಯಗಳಿವೆ. ಜೀವನ ಕೇವಲ ಕ್ರಿಕೆಟ್‌ಗೆ ಸೀಮಿತವಾಗಿರಬಾರದು ಎಂಬುದು ತಮ್ಮ ಅನುಭವದಿಂದ ಬಂದ ಅರಿವು ಎಂದು ಕೊಹ್ಲಿ ತಿಳಿಸಿದ್ದಾರೆ.
ಯುವ ಆಟಗಾರರಿಗೆ ಕೊಹ್ಲಿ ಸಲಹೆ
ಐಪಿಎಲ್ ಯುಗದಲ್ಲಿ ಕಡಿಮೆ ಎಸೆತಗಳಲ್ಲಿ ಹೆಚ್ಚು ರನ್ ಗಳಿಸಿದರೆ ಹಣ, ಖ್ಯಾತಿ ಮತ್ತು ಪ್ರಶಸ್ತಿಗಳು ಸುಲಭವಾಗಿ ಸಿಗುತ್ತವೆ. ಆದರೆ ದೀರ್ಘಕಾಲ ಕ್ರಿಕೆಟ್‌ನಲ್ಲಿ ಉಳಿಯಲು ಶಿಸ್ತು, ಒತ್ತಡ ಸಹಿಸುವ ಶಕ್ತಿ ಮತ್ತು ನಿರಂತರ ಪರಿಶ್ರಮ ಅಗತ್ಯ ಎಂದು ಕೊಹ್ಲಿ ಯುವ ಆಟಗಾರರಿಗೆ ಸಲಹೆ ನೀಡಿದ್ದಾರೆ.
“20 ಎಸೆತಗಳಲ್ಲಿ 40-50 ರನ್ ಗಳಿಸುವುದು ಸೇಫ್ ಜೋನ್‌ಗೆ ಕರೆದೊಯ್ಯಬಹುದು. ಆದರೆ 15-20 ವರ್ಷಗಳ ಕಾಲ ಕ್ರಿಕೆಟ್‌ನಲ್ಲಿ ಉಳಿದು ನಿಜವಾದ ಗೌರವ ಗಳಿಸಬೇಕು ಎಂಬ ಸಂಕಲ್ಪ ಬೇರೆ ಹಂತದ್ದು” ಎಂದು ಅವರು ಹೇಳಿದರು.
ನಾಯಕತ್ವದ ಒತ್ತಡದ ಬಗ್ಗೆ ಭಾವನಾತ್ಮಕ ಮಾತು
ಭಾರತ ತಂಡದ ನಾಯಕತ್ವ ತ್ಯಜಿಸುವುದರ ಹಿಂದಿನ ಮಾನಸಿಕ ಒತ್ತಡದ ಬಗ್ಗೆ ಮಾತನಾಡಿದ ಕೊಹ್ಲಿ, ಬ್ಯಾಟಿಂಗ್ ಘಟಕದ ಕೇಂದ್ರಬಿಂದು ಆಗಿರುವುದರ ಜೊತೆಗೆ ನಾಯಕತ್ವದ ಜವಾಬ್ದಾರಿಯೂ ತಮ್ಮ ಮೇಲೆ ಬಿದ್ದಿತ್ತು ಎಂದು ಹೇಳಿದರು.
“ನಾನು ತಂಡಕ್ಕಾಗಿ ನನ್ನಲ್ಲಿದ್ದ ಎಲ್ಲಾ ಶಕ್ತಿಯನ್ನೂ ನೀಡಿದ್ದೆ. ನಾಯಕತ್ವ ತ್ಯಜಿಸುವ ಹೊತ್ತಿಗೆ ನಾನು ತುಂಬಾ ದಣಿದಿದ್ದೆ. ಆ ಜವಾಬ್ದಾರಿಗಳು ನನ್ನನ್ನು ಸಂಪೂರ್ಣವಾಗಿ ಹಿಂಡಿ ಹಾಕಿದ್ದವು” ಎಂದು ಕೊಹ್ಲಿ ಭಾವನಾತ್ಮಕವಾಗಿ ಹಂಚಿಕೊಂಡರು.

ಶಿಸ್ತು ಮತ್ತು ಒತ್ತಡ ನಿರ್ವಹಣೆಯೇ ನಿಜವಾದ ಸ್ಫೂರ್ತಿ
ಕೊಹ್ಲಿ ಪ್ರಸ್ತುತ ಏಕದಿನ ಮತ್ತು ಐಪಿಎಲ್ ಮೇಲೆ ಹೆಚ್ಚು ಗಮನಹರಿಸುತ್ತಿದ್ದಾರೆ. ಆಟಗಾರರು ಮೈದಾನದಲ್ಲಿ ಗಳಿಸುವ ಅಂಕಿಅಂಶಗಳಿಗಿಂತ, ಅವರು ಒತ್ತಡವನ್ನು ಹೇಗೆ ನಿಭಾಯಿಸುತ್ತಾರೆ, ಎಷ್ಟು ಶಿಸ್ತುಬದ್ಧರಾಗಿದ್ದಾರೆ ಎಂಬುದೇ ಮುಂದಿನ ಪೀಳಿಗೆಗೆ ನಿಜವಾದ ಸ್ಫೂರ್ತಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.









