SRH ಒಡತಿ ಕಾವ್ಯ ಮಾರನ್ ಮತ್ತು ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ ಅಧಿಕೃತ ದೃಢೀಕರಣ ಇನ್ನೂ ಬಂದಿಲ್ಲ.
ಸ್ಪೋರ್ಟ್ಸ್/ಎಂಟರ್‌ಟೈನ್‌ಮೆಂಟ್ ಡೆಸ್ಕ್: ಐಪಿಎಲ್ 2026ರ ನಡುವೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ಒಡತಿ ಕಾವ್ಯ ಮಾರನ್ ತಮ್ಮ ವೈಯಕ್ತಿಕ ಜೀವನದ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಕಾವ್ಯ ಮಾರನ್ ಶೀಘ್ರದಲ್ಲೇ ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ಹಾಗೂ ಸಿಂಗರ್ ಅನಿರುದ್ಧ್ ರವಿಚಂದರ್ ಅವರನ್ನು ವಿವಾಹವಾಗಲಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಆದರೆ, ಈ ಮದುವೆ ಸುದ್ದಿಯ ಬಗ್ಗೆ ಸನ್ ನೆಟ್‌ವರ್ಕ್ ಅಥವಾ ಅನಿರುದ್ಧ್ ಕುಟುಂಬದವರಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಂದಿಲ್ಲ.
2026ರ ದ್ವಿತೀಯಾರ್ಧದಲ್ಲಿ ಮದುವೆ?
ವರದಿಗಳ ಪ್ರಕಾರ, ಕಾವ್ಯ ಮಾರನ್ ಮತ್ತು ಅನಿರುದ್ಧ್ ರವಿಚಂದರ್ 2026ರ ದ್ವಿತೀಯಾರ್ಧದಲ್ಲಿ ಮದುವೆಯಾಗಲು ಯೋಜಿಸುತ್ತಿದ್ದಾರೆ ಎನ್ನಲಾಗಿದೆ. ಶೀಘ್ರದಲ್ಲೇ ಎರಡೂ ಕುಟುಂಬಗಳಿಂದ ಅಧಿಕೃತ ಘೋಷಣೆ ಬರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
ಈ ಸುದ್ದಿಗೆ ಅಭಿಮಾನಿಗಳು ಮಿಶ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕೆಲವರು ಸಂತೋಷ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಇದು ಕೇವಲ ವದಂತಿ ಮಾತ್ರ ಎಂದು ಹೇಳುತ್ತಿದ್ದಾರೆ.
ಡೇಟಿಂಗ್ ವದಂತಿ ಹೊಸದೇನಲ್ಲ
ಅನಿರುದ್ಧ್ ಮತ್ತು ಕಾವ್ಯ ಮಾರನ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಕಳೆದ ವರ್ಷದಿಂದಲೇ ಹರಿದಾಡುತ್ತಿವೆ. ಲಾಸ್ ವೇಗಾಸ್‌ನಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದರು ಎನ್ನಲಾದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.
ಇದೇ ವೇಳೆ, ಕಾವ್ಯ ಮಾರನ್ ಅವರ ತಂದೆ ಕಲಾನಿಧಿ ಮಾರನ್ ಒಡೆತನದ ಸನ್ ಪಿಕ್ಚರ್ಸ್ ಬ್ಯಾನರ್‌ನಡಿ ಅನಿರುದ್ಧ್ ಹಲವು ದೊಡ್ಡ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ.
ರಜನಿಕಾಂತ್ ಸಂಬಂಧಿ ಅನಿರುದ್ಧ್
ಅನಿರುದ್ಧ್ ರವಿಚಂದರ್ ಅವರು ಸೂಪರ್‌ಸ್ಟಾರ್ ರಜನಿಕಾಂತ್ ಅವರ ಸಂಬಂಧಿ. ಅನಿರುದ್ಧ್ ಅವರ ತಾಯಿ ಲಕ್ಷ್ಮಿ, ರಜನಿಕಾಂತ್ ಅವರ ಪತ್ನಿ ಲತಾ ರಜನಿಕಾಂತ್ ಅವರ ಸಹೋದರಿ. ಹೀಗಾಗಿ ಸಂಬಂಧದಲ್ಲಿ ರಜನಿಕಾಂತ್ ಅವರು ಅನಿರುದ್ಧ್‌ಗೆ ಚಿಕ್ಕಪ್ಪರಾಗುತ್ತಾರೆ.
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವರದಿಗಳ ಪ್ರಕಾರ, ರಜನಿಕಾಂತ್ ಸ್ವತಃ ಕಲಾನಿಧಿ ಮಾರನ್ ಅವರೊಂದಿಗೆ ಮಾತನಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಕುರಿತು ಅಧಿಕೃತ ದೃಢೀಕರಣ ಇಲ್ಲ.

ವೃತ್ತಿಜೀವನದಲ್ಲಿ ಬ್ಯುಸಿ ಇಬ್ಬರೂ
ಅನಿರುದ್ಧ್ ಪ್ರಸ್ತುತ ಭಾರತದಲ್ಲಿ ಅತಿ ಹೆಚ್ಚು ಬೇಡಿಕೆಯ ಸಂಗೀತ ನಿರ್ದೇಶಕರಲ್ಲಿ ಒಬ್ಬರು. ಜೈಲರ್ 2, ಜನನಾಯಗನ್ ಹಾಗೂ ಶಾರುಖ್ ಖಾನ್ ಅಭಿನಯದ ಕಿಂಗ್ ಸೇರಿದಂತೆ ಹಲವು ದೊಡ್ಡ ಚಿತ್ರಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ.
ಮತ್ತೊಂದೆಡೆ, ಕಾವ್ಯ ಮಾರನ್ ಉದ್ಯಮಿಯಾಗಿ ಹಾಗೂ SRH ತಂಡದ ನಿರ್ವಹಣೆಯಲ್ಲಿ ಸಕ್ರಿಯರಾಗಿದ್ದಾರೆ. ಐಪಿಎಲ್ ಜೊತೆಗೆ ದಕ್ಷಿಣ ಆಫ್ರಿಕಾ ಟಿ20 ಲೀಗ್‌ನಲ್ಲೂ SRH Eastern Cape ತಂಡದ ಯಶಸ್ಸಿನಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.
ಸದ್ಯ ಕಾವ್ಯ ಮಾರನ್ ಮತ್ತು ಅನಿರುದ್ಧ್ ಮದುವೆ ಸುದ್ದಿ ವದಂತಿಯ ಹಂತದಲ್ಲಿದ್ದು, ಅಧಿಕೃತ ಘೋಷಣೆಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.











