13.4 C
Munich
Home News ಹಾಸನ: ಹೊಯ್ಸಳೇಶ್ವರ ದೇವಾಲಯ ಪ್ರವೇಶ ದ್ವಾರ ಬದಲಾವಣೆ ಬಗ್ಗೆ ಪರ-ವಿರೋಧ ಚರ್ಚೆ

ಹಾಸನ: ಹೊಯ್ಸಳೇಶ್ವರ ದೇವಾಲಯ ಪ್ರವೇಶ ದ್ವಾರ ಬದಲಾವಣೆ ಬಗ್ಗೆ ಪರ-ವಿರೋಧ ಚರ್ಚೆ

The Central Archaeological Survey of India's (CAS) plan to relocate the entrance to the Hoysaleshwara Temple towards the Hoysala Circle has met with both support and opposition from the public.

ಹಾಸನ: ಹೊಯ್ಸಳ ವೃತ್ತದ ಕಡೆ ಹೊಯ್ಸಳೇಶ್ವರ ದೇವಾಲಯದ ಪ್ರವೇಶ ದ್ವಾರವನ್ನು ಬದಲಾಯಿಸಲು ಕೇಂದ್ರ ಪುರಾತತ್ವ ಸರ್ವೇಕ್ಷಣಾ ಇಲಾಖೆ ಚಿಂತನೆ ನಡೆಸಿರುವುದಕ್ಕೆ ಸಾರ್ವಜನಿಕ ವಲಯದಿಂದ ಪರ, ವಿರೋಧ ವ್ಯಕ್ತವಾಗಿದೆ.

ಹೊಯ್ಸಳರ ಕಾಲದಲ್ಲಿ ದಕ್ಷಿಣ ದಿಕ್ಕಿನ ಪ್ರವೇಶ ದ್ವಾರದಲ್ಲಿ ರಾಜರು ಹಾಗೂ ಪರಿವಾರದವರು ಹೊಯ್ಸಳೇಶ್ವರ ದೇವಾಲಯಕ್ಕೆ ಬಂದು ಹೋಗುತ್ತಿದ್ದರು. ಪುರಾತನ ಕಾಲದ ರಾಜಮಾರ್ಗದಲ್ಲಿಯೇ ಪ್ರವಾಸಿಗರು ದೇವಾಲಯದ ಒಳ ಪ್ರವೇಶಿಸಬೇಕು ಎಂದು 4ವರ್ಷದ ಹಿಂದೆ ಉತ್ತರದಿಂದ ದಕ್ಷಿಣ ದಿಕ್ಕಿಗೆ ಪ್ರವೇಶವನ್ನು ಬದಲಿಸಲಾಗಿತ್ತು.

ವ್ಯವಸ್ಥೆಗಳಿಗೆ ಸ್ಥಳೀಯರು ಹಾಗೂ ಪ್ರವಾಸಿಗರು ಹೊಂದಿಕೊಂಡಿದ್ದರು. ದಿಢೀರನೆ ಪ್ರವೇಶ ದ್ವಾರ ಬದಲಿಸಲು ಕೇಂದ್ರ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮುಂದಾಗಿರುವುದಕ್ಕೆ ಜನರಿಂದ ಅಸಮಾಧಾನದ ಮಾತುಗಳು ಕೇಳಿ ಬರುತ್ತಿವೆ.

ಹಿಂದೆ ಸುದೀರ್ಘ ಕಾಲ ಹೊಯ್ಸಳೇಶ್ವರ ದೇವಾಲಯದ ಪ್ರವೇಶ ದ್ವಾರ ಉತ್ತರ ದಿಕ್ಕಿನಲ್ಲಿತ್ತು. ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯ ರಸ್ತೆ ರಾಜಮಾರ್ಗದಂತೆ ಇತ್ತು. ಪ್ರವೇಶ ದ್ವಾರ ಬದಲಿಸಿದ ನಂತರ ಹಳೇಬೀಡಿನ ವೈಭವಕ್ಕೆ ಧಕ್ಕೆಯಾಗಿದೆ.

ದಕ್ಷಿಣ ದಿಕ್ಕಿನ ಪ್ರವೇಶ ದ್ವಾರ ಊರಿನಿಂದ ದೂರದಲ್ಲಿದೆ. ಅಲ್ಲಿ ಪ್ರವಾಸಿಗರಿಗೆ ಸೌಲಭ್ಯಗಳ ಕೊರತೆಯಾಗಿದೆ. ಉತ್ತರ ದಿಕ್ಕಿಗೆ ಹೊಯ್ಸಳೇಶ್ವರ ದೇವಾಲಯ ಪ್ರವೇಶ ಬದಲಿಸುವುದರಿಂದ ಪ್ರವಾಸಿಗರಿಗೆ ಅನುಕೂಲವಾಗಲಿದೆ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮೋಹನ್ ಹೇಳಿದರು.

ಉತ್ತರ ದ್ವಾರದ ಬಳಿಯ ಹೊಯ್ಸಳ ವೃತ್ತದಲ್ಲಿ ವಾಹನ ದಟ್ಟಣೆ ಹೆಚ್ಚಾಗಿರುತ್ತದೆ. ದೇವಾಲಯದ ಒಳ ಹೋಗಿ ಬರುವ ಪ್ರವಾಸಿಗರಿಗೆ ಸುರಕ್ಷತೆ ಇರುವುದಿಲ್ಲ. ಈಗಿನ ಪ್ರವೇಶ ದ್ವಾರ ಇರುವ ಸ್ಥಳ ವಿಶಾಲವಾಗಿದೆ. ವಾಹನ ನಿಲುಗಡೆಗೂ ಸಾಕಷ್ಟು ಸ್ಥಳಾವಕಾಶ ಇದೆ ಎಂದು ಪುಷ್ಪಗಿರಿ ಬೀದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಸುರೇಶ್.ಎಂ.ಎಸ್ ಹೇಳಿದರು.

ಉತ್ತರ ದಿಕ್ಕಿನ ಪ್ರವೇಶ ದ್ವಾರದ ಗೇಟ್ ಹೊಯ್ಸಳ ವೃತ್ತಕ್ಕೆ ಕೇವಲ 10 ಹೆಜ್ಜೆ ದೂರದಲ್ಲಿದೆ. ಗೇಟ್ ವರೆಗೂ ವಾಹನ ಸಂಚರಿಸುತ್ತವೆ ಸರ್ಕಾರಿ ಆಸ್ಪತ್ರೆಗೆ ಹೋಗುವ ಜನರು ಹಾಗೂ ತುರ್ತು ವಾಹನಗಳು ಹೊಯ್ಸಳ ವೃತ್ತದ ಮುಖಾಂತರ ಹೋಗಬೇಕಾಗಿದೆ. ಪೊಲೀಸ್ ಠಾಣೆಗೂ ಹೊಯ್ಸಳ ವೃತ್ತ ಸಂಪರ್ಕ ಕಲ್ಪಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಉತ್ತರ ದಿಕ್ಕಿಗೆ ಪ್ರವೇಶ ಬದಲಿಸಲು ಪುರಾತತ್ವ ಇಲಾಖೆ ಮುಂದಾಗಿರುವುದು ಒಳ್ಳೆಯ ಬೆಳವಣಿಗೆಯಲ್ಲ. ದಕ್ಷಿಣ ದಿಕ್ಕಿನ ದೇವಾಲಯ ಪ್ರವೇಶ ಬದಲಿಸುವುದಿಲ್ಲ ಎಂದು ಪುರಾತತ್ವ ಇಲಾಖೆಯವರು ಹೇಳಿದ್ದರಿಂದ ವರ್ತಕರು ತಮ್ಮ ಹೊಟ್ಟೆಪಾಡಿನ ವ್ಯವಹಾರವನ್ನು ದಕ್ಷಿಣ ದಿಕ್ಕಿಗೆ ಸ್ಥಳಾಂತರಿಸಿದರು. ಈಗ ಪುನಃ ಬದಲಾವಣೆಗೆ ಮುಂದಾಗಿರುವುದು ಬೇಸರದ ವಿಚಾರ ಎನ್ನುತ್ತಾರೆ ದಲಿತ ಮುಖಂಡ ಭೈರೇಶ್.

ದಕ್ಷಿಣ ದಿಕ್ಕಿನ ಪ್ರವೇಶ ದ್ವಾರದಲ್ಲಿ ಪ್ರವಾಸಿಗರಿಗೆ ಸುರಕ್ಷತೆ ಇಲ್ಲ ಎಂಬ ದೂರುಗಳು ಪ್ರವಾಸಿಗರಿಂದ ಬಂದಿವೆ. ಪಾರ್ಕಿಂಗ್ ಸ್ಥಳದಲ್ಲಿ ಪ್ರವಾಸಿಗರಿಗೆ ಕಿರುಕುಳ ಆಗುತ್ತಿದೆ ಎಂದು ದೂರು ಬಂದಿದೆ. ಹೀಗಾಗಿ ಪುರಾತತ್ವ ಅಧೀಕ್ಷಕರು ಉತ್ತರ ದಿಕ್ಕಿಗೆ ಪ್ರವೇಶ ದ್ವಾರ ಬದಲಿಸಲು ಸೂಚಿಸಿದ್ದಾರೆ. ಪ್ರವೇಶ ದ್ವಾರ ಬದಲಿಸಲು ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಸಹಾಯಕ ಸ್ಮಾರಕ ಸಂರಕ್ಷಣಾಧಿಕಾರಿ ಸುನಿಲ್ ಹೇಳಿದರು.

ಹೊಯ್ಸಳೇಶ್ವರ ದೇವಾಲಯಕ್ಕೆ ಬರುವ ಪ್ರವಾಸಿಗರ ವಾಹನ ನಿಲ್ಲಿಸಲು ಕರ್ನಾಟಕ ಪಬ್ಲಿಕ್ ಶಾಲೆಯ ಜಾಗ ಬಳಕೆಯಾಗುತ್ತಿದೆ. ದಕ್ಷಿಣ ದಿಕ್ಕಿನಲ್ಲಿ ಪಾರ್ಕಿಂಗ್ ಗಾಗಿ ಗ್ರಾಮ ಪಂಚಾಯಿತಿ, ಪ್ರವಾಸೋದ್ಯಮ ಹಾಗೂ ಪುರಾತತ್ವ ಇಲಾಖೆಗೆ ಸೇರಿದ ಜಾಗ ಇಲ್ಲ. ಪಾರ್ಕಿಂಗ್ ನಡೆಸಲು ಶಾಲೆಯಿಂದ ಅನುಮತಿ ದೊರಕಿಲ್ಲ. ಹೀಗಾಗಿ ಉತ್ತರ ದಿಕ್ಕಿಗೆ ಹೊಯ್ಸಳೇಶ್ವರ ದೇವಾಲಯ ಪ್ರವೇಶದ್ವಾರ ಬದಲಿಸುವುದು ಸೂಕ್ತ ಎಂಬ ಮಾತು ಕೆಲವರಿಂದ ಕೇಳಿ ಬರುತ್ತಿದೆ.

error: Content is protected !!