ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ಕಾಕ್ರೋಚ್ ಜನತಾ ಪಾರ್ಟಿಯ ಎಕ್ಸ್ ಖಾತೆ ಭಾರತದಲ್ಲಿ ತಡೆಹಿಡಿಯಲಾಗಿದೆ. CJP ಸ್ಥಾಪಕ ಅಭಿಜಿತ್ ದೀಪ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಮುಖ ಮುಖ್ಯಾಂಶಗಳು
- ಕಾಕ್ರೋಚ್ ಜನತಾ ಪಾರ್ಟಿ ಸೋಷಿಯಲ್ ಮೀಡಿಯಾ ಖಾತೆ ತಡೆಹಿಡಿಕೆ
- ಇದು ನನಗೆ ಮೊದಲೇ ತಿಳಿದಿತ್ತು ಎಂದ ಪಕ್ಷದ ಸ್ಥಾಪಕ ಅಭಿಜಿತ್ ದೀಪ್ಕೆ
- ಬಿಜೆಪಯನ್ನು ಹಿಂದಿಕ್ಕಿದ್ದ ಸಿಜೆಪಿಯ ಸೋಷಿಯಲ್ ಮೀಡಿಯಾ ಅಕೌಂಟ್
ವೈರಲ್ ಡೆಸ್ಕ್,ಮೇ,21,2026(www.kannadapost.com): ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿರುವ ಕಾಕ್ರೋಚ್ ಜನತಾ ಪಾರ್ಟಿ (Cockroach Janata Party – CJP) ಮತ್ತೆ ಸುದ್ದಿಯಲ್ಲಿದೆ. ಪಕ್ಷದ ಎಕ್ಸ್/ಟ್ವಿಟರ್ ಖಾತೆಯನ್ನು ಭಾರತದಲ್ಲಿ ತಡೆಹಿಡಿಯಲಾಗಿದೆ ಎಂದು ಪಕ್ಷದ ಸ್ಥಾಪಕ ಅಭಿಜಿತ್ ದೀಪ್ಕೆ ತಿಳಿಸಿದ್ದಾರೆ.
ಅಭಿಜಿತ್ ದೀಪ್ಕೆ ತಮ್ಮ ಎಕ್ಸ್ ಖಾತೆಯಲ್ಲಿ, “ನನಗೆ ಮೊದಲೇ ತಿಳಿದಂತೆ ನಮ್ಮ ಕಾಕ್ರೋಚ್ ಜನತಾ ಪಾರ್ಟಿಯ ಸೋಷಿಯಲ್ ಮೀಡಿಯಾ ಖಾತೆಯನ್ನು ಭಾರತದಲ್ಲಿ ತಡೆಹಿಡಿಯಲಾಗಿದೆ” ಎಂದು ಬರೆದುಕೊಂಡಿದ್ದಾರೆ. ಆದರೆ, ಈ ಕ್ರಮಕ್ಕೆ ನಿಖರ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಏನು ಈ ಕಾಕ್ರೋಚ್ ಜನತಾ ಪಾರ್ಟಿ?
ಕೆಲ ದಿನಗಳ ಹಿಂದೆ ಭಾರತದ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಸೂರ್ಯಕಾಂತ್ ಅವರು ನಿರುದ್ಯೋಗಿ ಯುವಕರನ್ನು ಜಿರಲೆಗಳಿಗೆ ಹೋಲಿಸಿದ್ದಾರೆ ಎನ್ನಲಾದ ಹೇಳಿಕೆಯ ನಂತರ, ಅಭಿಜಿತ್ ದೀಪ್ಕೆ ಅವರು ಸೋಷಿಯಲ್ ಮೀಡಿಯಾದಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಹೆಸರಿನ ವ್ಯಂಗ್ಯಾತ್ಮಕ ರಾಜಕೀಯ ಚಳವಳಿಯನ್ನು ಆರಂಭಿಸಿದ್ದರು.
ಈ ಪಕ್ಷವು ತನ್ನನ್ನು ತಾನು ಜಾತ್ಯತೀತ, ಸಮಾಜವಾದಿ, ಪ್ರಜಾಪ್ರಭುತ್ವ ಹಾಗೂ ಸೋಮಾರಿ ತತ್ವಗಳನ್ನು ಪಾಲಿಸುವ ಪಕ್ಷ ಎಂದು ಪರಿಚಯಿಸಿಕೊಂಡಿದೆ.
BJPಯನ್ನೂ ಹಿಂದಿಕ್ಕಿದ್ದ CJP!
ಸೋಷಿಯಲ್ ಮೀಡಿಯಾದಲ್ಲಿ CJPಗೆ ಭಾರೀ ಬೆಂಬಲ ವ್ಯಕ್ತವಾಗಿದ್ದು, ಪಕ್ಷ ಆರಂಭವಾದ ಕೆಲವೇ ದಿನಗಳಲ್ಲಿ ಲಕ್ಷಾಂತರ ಹಿಂಬಾಲಕರನ್ನು ಗಳಿಸಿತ್ತು. ವರದಿಗಳ ಪ್ರಕಾರ, CJP ಸುಮಾರು 1.23 ಕೋಟಿ ಫಾಲೋವರ್ಸ್ ಗಳಿಸುವ ಮೂಲಕ 87 ಲಕ್ಷ ಫಾಲೋವರ್ಸ್ ಹೊಂದಿದ್ದ BJP ಖಾತೆಯನ್ನು ಹಿಂದಿಕ್ಕಿತ್ತು ಎನ್ನಲಾಗಿದೆ. ಈ ಪಟ್ಟಿಯಲ್ಲಿ ಕಾಂಗ್ರೆಸ್ ಪಕ್ಷ ಸುಮಾರು 1.33 ಕೋಟಿ ಫಾಲೋವರ್ಸ್ ಮೂಲಕ ಮುನ್ನಡೆಯಲ್ಲಿದೆ ಎಂದು ಹೇಳಲಾಗಿದೆ.

ಕಾಕ್ರೋಚ್ ಪಕ್ಷದ ಕ್ರೇಜಿ ಪ್ರಣಾಳಿಕೆ
CJP ಪಕ್ಷದ ಪ್ರಣಾಳಿಕೆ ಕೂಡ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.
- ಮುಖ್ಯ ನ್ಯಾಯಮೂರ್ತಿಗಳಿಗೆ ನಿವೃತ್ತಿಯ ನಂತರ ರಾಜ್ಯಸಭಾ ಸ್ಥಾನ ನೀಡಬಾರದು
- ಸಂಸತ್ತಿನ ಸ್ಥಾನ ಹೆಚ್ಚಿಸದೆ ಮಹಿಳೆಯರಿಗೆ ಶೇ.50 ಮೀಸಲಾತಿ ನೀಡಬೇಕು
- ಪಕ್ಷಾಂತರ ಮಾಡುವ ಶಾಸಕರು ಮತ್ತು ಸಂಸದರಿಗೆ 20 ವರ್ಷಗಳ ಕಾಲ ಚುನಾವಣೆಗೆ ನಿಲ್ಲದಂತೆ ನಿಷೇಧ ಹೇರಬೇಕು
ಇಂತಹ ಬೇಡಿಕೆಗಳು ಪಕ್ಷದ ಪ್ರಣಾಳಿಕೆಯಲ್ಲಿ ಸೇರಿವೆ ಎನ್ನಲಾಗಿದೆ.
ಸದ್ಯ CJP ಖಾತೆ ತಡೆಹಿಡಿಯಲ್ಪಟ್ಟಿರುವ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.










