- ಹಾಸನ ಹೊರವಲಯದ ವಿಮಾನ ನಿಲ್ದಾಣ ಸಮೀಪ ಕಾರಿನಲ್ಲಿ 5 ಲಕ್ಷ ರೂ. ಮೌಲ್ಯದ 50 ಗ್ರಾಂ MDMA ಡ್ರಗ್ಸ್ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಬಡಾವಣೆ ಠಾಣೆ ಪೊಲೀಸರು ಬಂಧಿಸಿದ್ದಾರೆ.can
Hassan|ಹಾಸನ: ನಗರದ ಹೊರವಲಯದ ವಿಮಾನ ನಿಲ್ದಾಣ ಸಮೀಪದ ಲೇಔಟ್‌ನಲ್ಲಿ ಕಾರಿನಲ್ಲಿ ಕುಳಿತು ಮಾದಕ ವಸ್ತು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತರಿಂದ ಬರೋಬ್ಬರಿ 5 ಲಕ್ಷ ರೂಪಾಯಿ ಮೌಲ್ಯದ ಎಂಡಿಎಂಎ (MDMA) ಡ್ರಗ್ಸ್ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಶಹಬಾಜ್ (32) ಮತ್ತು ಫಸ್ಲು ಅಹಮದ್ (44) ಬಂಧಿತ ಆರೋಪಿಗಳು. ಇವರು ಬೇಲೂರಿನಿಂದ ಎಂಡಿಎಂಎ ಡ್ರಗ್ಸ್ ತೆಗೆದುಕೊಂಡು ಬಂದು ಹಾಸನದಲ್ಲಿ ಮಾರಾಟ ಮಾಡಲು ಸಂಚು ರೂಪಿಸಿದ್ದರು.
ಪೊಲೀಸರ ಕಾರ್ಯಾಚರಣೆ ಹೇಗಿತ್ತು?
ಆರೋಪಿಗಳು KA-18 MB-7201 ನೋಂದಣಿ ಸಂಖ್ಯೆಯ ರಿಟ್ಜ್ (Ritz) ಕಾರಿನಲ್ಲಿ ಕುಳಿತು ಗಿರಾಕಿಗಳಿಗಾಗಿ ಕಾಯುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಕಲೆಹಾಕಿದ ಬಡಾವಣೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ವಿನಯ್‌ಕುಮಾರ್ ನೇತೃತ್ವದ ತಂಡ, ಏಕಾಏಕಿ ದಾಳಿ ನಡೆಸಿ ಆರೋಪಿಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಪರಿಶೀಲನೆ ವೇಳೆ ಕಾರಿನಲ್ಲಿ ಸುಮಾರು 50 ಗ್ರಾಂ ತೂಕದ, 5 ಲಕ್ಷ ರೂ. ಮೌಲ್ಯದ MDMA ಪತ್ತೆಯಾಗಿದ್ದು, ಕಾರು ಸಮೇತ ಡ್ರಗ್ಸ್ ಅನ್ನು ಜಪ್ತಿ ಮಾಡಲಾಗಿದೆ.

ರಾಜಕಾರಣಿಯ ಸಂಬಂಧಿ ಬಂಧನ!
ಬಂಧಿತ ಆರೋಪಿಗಳ ಪೈಕಿ ಶಹಬಾಜ್ ಪ್ರಭಾವಿ ಹಿನ್ನೆಲೆ ಹೊಂದಿದ್ದಾನೆ ಎಂಬ ಅಂಶ ಬೆಳಕಿಗೆ ಬಂದಿದೆ. ಈತ ಬೇಲೂರು-ಹಳೇಬೀಡು ಪ್ರಾಧಿಕಾರದ ಅಧ್ಯಕ್ಷ ಹಾಗೂ ಮಾಜಿ ಜಿ.ಪಂ. ಸದಸ್ಯ ತೌಫಿಕ್ ಅವರ ಅಣ್ಣ ಶಕೀಲ್ ಅಹಮದ್ ಎಂಬುವರ ಪುತ್ರನಾಗಿದ್ದಾನೆ. ಪ್ರಭಾವಿ ಮುಖಂಡರೊಬ್ಬರ ಸಂಬಂಧಿಯೇ ಈ ಡ್ರಗ್ಸ್ ಜಾಲದಲ್ಲಿ ಸಿಕ್ಕಿಬಿದ್ದಿರುವುದು ಸ್ಥಳೀಯವಾಗಿ ತೀವ್ರ ಸಂಚಲನ ಮೂಡಿಸಿದೆ.
ಈ ಸಂಬಂಧ ಹಾಸನದ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡ್ರಗ್ಸ್ ಜಾಲದ ಹಿಂದೆ ಇನ್ನೆಷ್ಟು ಜನರಿದ್ದಾರೆ? ಇವರಿಗೆ ಬೇಲೂರಿನಲ್ಲಿ ಡ್ರಗ್ಸ್ ಪೂರೈಕೆ ಮಾಡಿದವರು ಯಾರು? ಎಂಬ ಬಗ್ಗೆ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.










