Hassan:ಜಮೀರ್ ಜೆಡಿಎಸ್ ಸೇರ್ಪಡೆ ವಿಚಾರ: ಮಾಧ್ಯಮಗಳ ಎದುರೇ ಕೆಂಡಾಮಂಡಲವಾದ ಎಚ್.ಡಿ. ಕುಮಾರಸ್ವಾಮಿ!

  • ಸಚಿವ ಜಮೀರ್ ಅಹಮದ್ ಖಾನ್ ಜೆಡಿಎಸ್ ಸೇರ್ಪಡೆ ವಿಚಾರದ ಕುರಿತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಸನದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಅಂಥ ಕೆಟಗರಿ ಜನಗಳ ಅವಶ್ಯಕತೆ ನಮಗಿಲ್ಲ” ಎಂದು ಗುಡುಗಿದ್ದಾರೆ. ಸಂಪೂರ್ಣ ಸುದ್ದಿ ಓದಿ.

Hassan|ಹಾಸನ: ಸಚಿವ ಜಮೀರ್ ಅಹಮದ್ ಖಾನ್ zameer ahamad Khan ಅವರು ಮರಳಿ ಜೆಡಿಎಸ್ ಸೇರ್ಪಡೆಯಾಗಲಿದ್ದಾರೆ ಎಂಬ ವದಂತಿಗಳ ಕುರಿತು ಕೇಂದ್ರ ಸಚಿವ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

​ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಉದ್ದೂರು ಹೊಸಳ್ಳಿ ಗ್ರಾಮದಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಮೀರ್ ವಿಚಾರದ ಬಗ್ಗೆ ಪ್ರಶ್ನೆ ಕೇಳುತ್ತಿದ್ದಂತೆಯೇ ಗರಂ ಆದರು. “ಯಾವುದೇ ಕಾರಣಕ್ಕೂ ಆ ಸಬ್ಜೆಕ್ಟ್‌ನೇ ನನ್ನ ಹತ್ತಿರ ರೈಜ್ ಮಾಡಬೇಡಿ” ಎಂದು ಖಡಕ್ ಎಚ್ಚರಿಕೆ ನೀಡಿದರು.

“ಅಂಥ ಕೆಟಗರಿ ಜನರ ಅವಶ್ಯಕತೆ ನಮಗಿಲ್ಲ”

ಜಮೀರ್ ಅಹಮದ್ ಅವರ ಜೆಡಿಎಸ್ ಸೇರ್ಪಡೆ ಕುರಿತಾಗಿ ಪ್ರತಿಕ್ರಿಯಿಸಿದ ಎಚ್‌ಡಿಕೆ, “ಅದ್ಯಾವುದನ್ನೂ ಸೀರಿಯಸ್ ಆಗಿ ತೆಗೆದುಕೊಳ್ಳಬೇಡಿ. ನಮ್ಮ ಪಕ್ಷದಲ್ಲಿ ಅಧಿಕಾರಕ್ಕೋಸ್ಕರವಾಗಿ ಅಂತಹ ಕೆಟಗರಿ ಜನಗಳನ್ನು ತೆಗೆದುಕೊಳ್ಳಬೇಕಾದ ಅವಶ್ಯಕತೆಯೇ ಇಲ್ಲ. ನಮಗೆ ಆ ಬಗ್ಗೆ ಈಗಾಗಲೇ ಎಲ್ಲಾ ಅನುಭವಗಳಾಗಿವೆ. ಅದರ ಅವಶ್ಯಕತೆನೂ ಇಲ್ಲ ನಮಗೆ, ಸಾಕಷ್ಟು ಅನುಭವಿಸಿದ್ದೇನೆ,” ಎಂದು ತಮ್ಮ ಹಳೆಯ ಕಹಿನೆನಪುಗಳನ್ನು ಹೊರಹಾಕಿದರು.

​”ಯಾವುದೇ ಕಾರಣಕ್ಕೂ ರಾಜಕೀಯದಲ್ಲಿ ಏನೋ ಶಕ್ತಿ ಬರುತ್ತೆ ಅಂತ ಹೇಳಿ, ಬೆಂದ ಮನೆಯಲ್ಲಿ ಗಳ ಹಿರಿಯುವ ಕೆಲಸಕ್ಕೆ ನಾನು ಕೈ ಹಾಕುವುದಿಲ್ಲ,” ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ನಾಯಕರ ಮೌನಕ್ಕೆ ಎಚ್‌ಡಿಕೆ ಪ್ರಶ್ನೆ

ಇದೇ ವೇಳೆ, ಜಮೀರ್ ಅಹಮದ್ ಅವರು ಇತ್ತೀಚೆಗೆ ನೀಡಿದ್ದ ಹೇಳಿಕೆಯೊಂದನ್ನು ಪ್ರಸ್ತಾಪಿಸಿ ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. “ಕಾಂಗ್ರೆಸ್ ಅಧಿಕಾರ ನಡೆಸುತ್ತಿರುವುದು, ಕಾಂಗ್ರೆಸ್ ನಾಯಕರು ಅನ್ನ ತಿನ್ನುತ್ತಿರುವುದು ಆ ವರ್ಗದ ಜನಗಳಿಂದಲೇ ಅಂತ ಅವರೇ (ಜಮೀರ್) ಹೇಳುತ್ತಿದ್ದಾರೆ. ಇವತ್ತು ಆ ಪರಿಸ್ಥಿತಿಯನ್ನು ರಾಜ್ಯಕ್ಕೆ ತಂದು ಇಟ್ಟಿದ್ದಾರೆ. ಪ್ರತಿನಿತ್ಯ ಅನ್ನ ತಿನ್ನುತ್ತಿರುವುದೇ ಆ ಒಂದು ವರ್ಗದಿಂದ ಅಂತ ಹೇಳುತ್ತಿದ್ದರೂ, ಇವತ್ತು ಕಾಂಗ್ರೆಸ್‌ನವರು ಯಾರಾದರೂ ಅದನ್ನು ವಿರೋಧ ಮಾಡಿದ್ದೀರಾ?” ಎಂದು ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದರು.

​”ಅವರೇ ಕಂಡಿಷನ್‌ಗಳನ್ನು ಹಾಕಿಕೊಳ್ಳುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳು ಎಲ್ಲೆಲ್ಲಿಗೆ ಹೋಗುತ್ತೋ ನೋಡೋಣ ಬನ್ನಿ,” ಎಂದು ಕುಮಾರಸ್ವಾಮಿ ಮಾರ್ಮಿಕವಾಗಿ ನುಡಿದರು.

​ಒಟ್ಟಿನಲ್ಲಿ ಜಮೀರ್ ಅಹಮದ್ ಅವರ ಜೆಡಿಎಸ್ ಮರಳುವಿಕೆಯ ವದಂತಿಗಳಿಗೆ ಎಚ್‌ಡಿಕೆ ಖಡಕ್ ಆಗಿಯೇ ಬ್ರೇಕ್ ಹಾಕಿದ್ದು, ರಾಜಕೀಯ ವಲಯದಲ್ಲಿ ಈ ಹೇಳಿಕೆ ತೀವ್ರ ಸಂಚಲನ ಮೂಡಿಸಿದೆ.