- Hassan ಹಾಸನದ ಹೊಳೆನರಸೀಪುರದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕಾಂಗ್ರೆಸ್ ನಾಯಕರು, ಮಲ್ಲಿಕಾರ್ಜುನ ಖರ್ಗೆ, ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಿಎಂ ಕುರ್ಚಿ ಕಾದಾಟ, ಮಾಟಮಂತ್ರ, ಫ್ರೀಬಿ ರಾಜಕಾರಣದ ಬಗ್ಗೆ ಕಿಡಿಕಾರಿದ್ದಾರೆ.
Hassan|ಹಾಸನ: ಐದು ರಾಜ್ಯಗಳ ಚುನಾವಣೆ, ಗ್ಯಾರಂಟಿ ಯೋಜನೆಗಳು, ಮುಖ್ಯಮಂತ್ರಿ ಕುರ್ಚಿ ಕಾದಾಟ ಹಾಗೂ ಮೇಕೆದಾಟು ವಿಚಾರವಾಗಿ ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಉದ್ದೂರು ಹೊಸಳ್ಳಿ ಗ್ರಾಮದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಉಗ್ರ’ ಎಂದು ಕರೆದಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ದ್ವಿಮುಖ ನೀತಿಯನ್ನು ಕಟುವಾಗಿ ಟೀಕಿಸಿದರು.
ಪ್ರಧಾನಿ ಬಗ್ಗೆ ಉದ್ಧಟತನದ ಮಾತು: ಯುವಜನತೆಗೆ ಯಾವ ಸಂದೇಶ?
ರಾಜಕೀಯ ನಾಯಕರ ಭಾಷಣದ ಶೈಲಿ ಕುರಿತು ಬೇಸರ ವ್ಯಕ್ತಪಡಿಸಿದ ಎಚ್‌ಡಿಕೆ, “ರಾಜಕೀಯದಲ್ಲಿ ಹಿರಿತನದಿಂದ ಬಂದವರು, ಅನುಭವಸ್ಥರು ಬಳಸುತ್ತಿರುವ ಪದಬಳಕೆ ನೋಡಿದರೆ ನಾವು ಎಲ್ಲಿಗೆ ಹೋಗುತ್ತಿದ್ದೇವೆ ಎಂಬ ಆತಂಕ ಮೂಡುತ್ತದೆ. ಕರ್ನಾಟಕದವರೇ ಆದ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರು ತಮ್ಮ ಮನಸ್ಸಿನಲ್ಲಿ ಯಾವ ರೀತಿಯ ಭಾವನೆಗಳನ್ನು ಇಟ್ಟುಕೊಂಡಿದ್ದಾರೆ? ಗೌರವಾನ್ವಿತ ಪ್ರಧಾನಮಂತ್ರಿಗಳನ್ನೇ ಟೆರರಿಸ್ಟ್ ಅಂತ ಕರೆಯುತ್ತಾರೆ ಎಂದರೆ ಅವರಲ್ಲಿ ಎಷ್ಟು ಉದ್ಧಟತನ ಇರಬಹುದು? ಇದು ಯುವಜನಾಂಗಕ್ಕೆ ಯಾವ ರೀತಿ ದಾರಿ ತೋರಿಸುತ್ತದೆ ಎಂದು ಯೋಚನೆ ಮಾಡಬೇಕು,” ಎಂದು ಕಿಡಿಕಾರಿದರು.
ಅಭಿವೃದ್ಧಿ ಶೂನ್ಯ, ಫ್ರೀಬಿ ಕೊಡಲು ಕಾಂಪಿಟೇಷನ್
ದೇಶದ ಐದು ರಾಜ್ಯಗಳಲ್ಲಿ ಚುನಾವಣೆ ಪ್ರಕ್ರಿಯೆಗಳು ಮುಕ್ತಾಯದ ಹಂತಕ್ಕೆ ಬರುತ್ತಿದ್ದು, ಯಾರೊಬ್ಬರೂ ಅಭಿವೃದ್ಧಿ ಹೆಸರಿನಲ್ಲಿ ಮತ ಕೇಳುತ್ತಿಲ್ಲ ಎಂದು ಕುಮಾರಸ್ವಾಮಿ ಕಳವಳ ವ್ಯಕ್ತಪಡಿಸಿದರು.
”ದೇಶಕ್ಕೆ ಏನು ಕೊಡುತ್ತೇವೆ ಅನ್ನೋದನ್ನು ಬಿಟ್ಟು ಫ್ರೀಬಿ (ಉಚಿತ ಕೊಡುಗೆ) ಕೊಡಲು ಕಾಂಪಿಟೇಷನ್ ಶುರುವಾಗಿದೆ. ನೀನು ಅದು ಕೊಟ್ಟರೆ, ನಾನು ಇದು ಕೊಡುತ್ತೇನೆ ಎನ್ನುತ್ತಾರೆ. ಇದು ಆಘಾತ ತರುವ ವಿಚಾರ. ಹಿಮಾಚಲ ಪ್ರದೇಶದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಚೀಫ್ ಸೆಕ್ರೆಟರಿಗೆ ಸಂಬಳ ಕಟ್ ಮಾಡಿದ್ದಾರೆ. ಇವತ್ತಿನ ಸರ್ಕಾರಗಳು ಜನಸಾಮಾನ್ಯರ ಬದುಕು ಸರಿಪಡಿಸುವುದು ಇರಲಿ, ಅವರ ಜೀವನದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ,” ಎಂದು ಆರೋಪಿಸಿದರು.
ಮೂರು ವರ್ಷದಿಂದ ಬರೀ ಕುರ್ಚಿ ಗುದ್ದಾಟ, ಈಗ ಮಾಟ-ಮಂತ್ರ!
ರಾಜ್ಯ ಸರ್ಕಾರದ ವೈಫಲ್ಯಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಎಚ್‌ಡಿಕೆ, “ಹಲವಾರು ಗ್ರಾಮಗಳಲ್ಲಿ ಕುಡಿಯುವ ನೀರಿನ ಭಾರಿ ಸಮಸ್ಯೆ ಇದೆ. ಆದರೆ, ಅದರ ಬಗ್ಗೆ ಒಬ್ಬನೇ ಒಬ್ಬ ಮಂತ್ರಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುತ್ತೇವೆ ಎಂದು ಹೇಳಿಲ್ಲ. ಇವರ‌್ಯಾರಿಗೂ ಜನರ ಸಮಸ್ಯೆಗಳಿಗೆ ಪರಿಹಾರ ತಂದು ಕೊಡುವ ಕಮಿಟ್‌ಮೆಂಟ್ ಇಲ್ಲ. ಕಳೆದ ಮೂರು ವರ್ಷದಿಂದ ನಿರಂತರವಾಗಿ ಕೇವಲ ಮುಖ್ಯಮಂತ್ರಿ ಕುರ್ಚಿ ಬಗ್ಗೆಯೇ ಚರ್ಚೆ ನಡೆಯುತ್ತಿದೆ,” ಎಂದರು.
”ಕುರ್ಚಿ ವಿಚಾರವಾಗಿ ಅವರ ಮೇಲೆ ಇವರು, ಇವರ ಮೇಲೆ ಅವರು ಹೇಳಿಕೆ ನೀಡುತ್ತಿದ್ದರು. ಈಗ ಇನ್ನೊಬ್ಬರು ದೇವರ ಮೊರೆ ಹೋಗುತ್ತಿದ್ದಾರೆ. ಇದೀಗ ಮಾಟಮಂತ್ರದ ವಿಚಾರ ಪ್ರಾರಂಭವಾಗಿದೆ. ಮುಖ್ಯಮಂತ್ರಿಗಳ ಮೇಲೆ ಮಾಟ ಮಾಡಿದ್ದಾರೆ ಅಂತ ಆ ಪಕ್ಷದ ಶಾಸಕರೇ ಹೇಳುತ್ತಾರೆ. ಇದನ್ನು ನೋಡಿದರೆ ಇವರು ಹುಡುಕಾಟದ ರಾಜಕಾರಣ ಮಾಡುತ್ತಿದ್ದಾರೆ,” ಎಂದು ವ್ಯಂಗ್ಯವಾಡಿದರು.
ಡಿಕೆಶಿ ವಿರುದ್ಧ ನೇರ ವಾಗ್ದಾಳಿ: ಮೇಕೆದಾಟು ವಿಚಾರದಲ್ಲಿ ದ್ವಿಮುಖ ನೀತಿ
ಇದೇ ವೇಳೆ ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧವೂ ಹರಿಹಾಯ್ದ ಅವರು, “ತಮಿಳುನಾಡಿಗೆ ಹೋಗಿ ವೀರಾವೇಷದ ಭಾಷಣ ಮಾಡುತ್ತಾರೆ. ಅಲ್ಲಿ ಡಿಎಂಕೆ ಗೆಲ್ಲಿಸಿ ಅಂತಾರೆ, ಇಲ್ಲಿಗೆ ಬಂದು ಮೇಕೆದಾಟು ಮಾಡುತ್ತೇವೆ ಅಂತಾರೆ. ಅಲ್ಲಿ ಡಿಎಂಕೆ ಅವರು ಕೋರ್ಟ್‌ಗೆ ಹೋಗಿ ಮೇಕೆದಾಟು ಯೋಜನೆಗೆ ತಡೆ ಒಡ್ಡುತ್ತಿದ್ದಾರೆ. ಆದರೆ, ಇವರು ಮಾತ್ರ ನಮ್ಮ ಮೇಲೆ ಹಾಗೂ ಕೇಂದ್ರ ಸರ್ಕಾರದ ಮೇಲೆ ಸುಖಾಸುಮ್ಮನೆ ಆರೋಪ ಮಾಡುತ್ತಾರೆ,” ಎಂದು ಡಿ.ಕೆ. ಶಿವಕುಮಾರ್ ನಡೆಯನ್ನು ಕಟುವಾಗಿ ಟೀಕಿಸಿದರು.
ಒಟ್ಟಿನಲ್ಲಿ ತಮ್ಮ ಭಾಷಣದುದ್ದಕ್ಕೂ ರಾಜ್ಯ ಕಾಂಗ್ರೆಸ್ ನಾಯಕರ ನಡೆಯನ್ನು ಎಚ್.ಡಿ. ಕುಮಾರಸ್ವಾಮಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದು, 2028ಕ್ಕೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎನ್ನುತ್ತಿರುವ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.










