ಮುಂಬೈ : ಟಿ20 ವಿಶ್ವಕಪ್‌ನಲ್ಲಿ ಫೆ.15ರಂದು ಭಾರತ ವಿರುದ್ಧದ ಪಂದ್ಯವನ್ನು ಆಡಲ್ಲ ಎಂದು ಘೋಷಿಸಿದ್ದ ಪಾಕಿಸ್ತಾನ, ಇದೀಗ ತನ್ನ ನಿಲುವಿನಿಂದ ಬಹುತೇಕ ಹಿಂದೆ ಸರಿದಂತಾಗಿದೆ. ಪಾಕಿಸ್ತಾನ ಸರ್ಕಾರದ ಕಠಿಣ ನಿರ್ಧಾರಕ್ಕೆ ವಿರುದ್ಧವಾಗಿ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿಯೇ ಪಂದ್ಯ ನಡೆಯುವ ಸಾಧ್ಯತೆ ಕುರಿತು ಸ್ಪಷ್ಟ ಸುಳಿವು ನೀಡಿದ್ದಾರೆ.
ಇದರೊಂದಿಗೆ ಹಲವು ದಿನಗಳಿಂದ ನಡೆಯುತ್ತಿದ್ದ ಹೈಡ್ರಾಮಕ್ಕೆ ಬ್ರೇಕ್ ಬೀಳುವ ಸೂಚನೆ ದೊರೆತಿದ್ದು, ಬಹು ನಿರೀಕ್ಷಿತ ಭಾರತ–ಪಾಕ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ.
ಸೋಮವಾರ ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಖ್ವಿ, “ಐಸಿಸಿ ಹಾಗೂ ಬಾಂಗ್ಲಾ ಕ್ರಿಕೆಟ್ ಮಂಡಳಿಯೊಂದಿಗೆ ಚರ್ಚೆ ನಡೆಸಿದ್ದೇವೆ. ಈ ಹಂತದಲ್ಲಿ ಹೆಚ್ಚಿನ ಪ್ರತಿಕ್ರಿಯೆ ನೀಡುವುದು ಸೂಕ್ತವಲ್ಲ. ಅವರ ಅಭಿಪ್ರಾಯ ಸಿಕ್ಕ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ.
ಐಸಿಸಿ ಪ್ರತಿಕ್ರಿಯೆ ಬಂದ ನಂತರ ಪ್ರಧಾನಮಂತ್ರಿ ಶೆಹಬಾಜ್ ಶರೀಫ್ ಅವರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಪ್ರಕಟಿಸುತ್ತೇವೆ. ನಾಳೆ ಅಥವಾ ನಾಡಿದ್ದು ನಿರ್ಧಾರ ಹೊರಬೀಳಲಿದೆ” ಎಂದು ಹೇಳಿದರು.
ಐಸಿಸಿ ಹಾಗೂ ಬಾಂಗ್ಲಾ ನಡುವಿನ ಸಂಧಾನದ ವಿಚಾರಕ್ಕೆ ಸಂಬಂಧಿಸಿ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ ನಖ್ವಿ, “ಐಸಿಸಿ ಅಧಿಕಾರಿಗಳು ನಮ್ಮನ್ನು ಭೇಟಿ ಮಾಡಿದ್ದಾರೆ. ಅವರನ್ನು ನಾವು ಗೌರವಿಸುತ್ತೇವೆ. ಬಾಂಗ್ಲಾದ ನಿಲುವು ಸರಿಯಾಗಿದ್ದು, ಅದಕ್ಕೆ ನಾವು ಬೆಂಬಲ ನೀಡಿದ್ದೇವೆ” ಎಂದರು.
ಇದೇ ವೇಳೆ ಪಿಸಿಬಿ ಮೇಲೆ ಐಸಿಸಿ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಈ ರೀತಿಯ ಬೆದರಿಕೆಗಳಿಗೆ ನಾವು ಹೆದರಲ್ಲ. ನಮ್ಮ ಫೀಲ್ಡ್ ಮಾರ್ಷಲ್ ಅಸೀಂ ಮುನೀರ್ ಬಗ್ಗೆ ಎಲ್ಲರಿಗೂ ತಿಳಿದಿದೆ. ಹೀಗಾಗಿ ಯಾವುದೇ ನಿರ್ಬಂಧಗಳ ಬಗ್ಗೆ ನಮಗೆ ಆತಂಕವಿಲ್ಲ” ಎಂದು ಸ್ಪಷ್ಟಪಡಿಸಿದರು.
ಭದ್ರತಾ ಕಾರಣ ಮುಂದಿಟ್ಟು ಬಾಂಗ್ಲಾ ತಂಡ ಭಾರತದಲ್ಲಿ ವಿಶ್ವಕಪ್ ಪಂದ್ಯ ಆಡಲ್ಲ ಎಂದು ಪಟ್ಟುಹಿಡಿದ ಹಿನ್ನೆಲೆಯಲ್ಲಿ, ಐಸಿಸಿ ಬಾಂಗ್ಲಾವನ್ನು ಟೂರ್ನಿಯಿಂದ ಹೊರಗಿಟ್ಟಿತ್ತು. ಇದಕ್ಕೆ ಪ್ರತಿಯಾಗಿ ಪಾಕ್ ಸರ್ಕಾರ ಭಾರತ ವಿರುದ್ಧದ ಫೆ.15ರ ಪಂದ್ಯ ಆಡಲ್ಲ ಎಂದು ಘೋಷಿಸಿತ್ತು. ಈ ನಿಲುವನ್ನು ಪ್ರಧಾನಿ ಶೆಹಬಾಜ್ ಶರೀಫ್ ಸಹ ಪುನರುಚ್ಚರಿಸಿದ್ದರು. ಆದರೆ ಇದೀಗ ಪಿಸಿಬಿ ಅಧ್ಯಕ್ಷರ ಹೇಳಿಕೆ ಸರ್ಕಾರದ ಹೇಳಿಕೆಗೆ ವಿರುದ್ಧವಾಗಿ ಹೊರಬಿದ್ದಿದ್ದು, ಪಾಕ್ ಸರ್ಕಾರಕ್ಕೆ ಮುಖಭಂಗ ಉಂಟಾಗಿದೆ.










