ವಿಜಯಪುರ : ವಿಜಯಪುರ ನಗರದಲ್ಲಿ ಪ್ರೀತಿಸಿದ ಯುವಕನೊಂದಿಗೆ ತೆರಳಿದ ಮಗಳಿಗಾಗಿ ಪೋಷಕರು ಪೊಲೀಸ್ ಠಾಣೆ ಎದುರು ಕಣ್ಣೀರು ಹಾಕಿದ ಘಟನೆ ಮನಕಲಕುವಂತಾಗಿದೆ. ಗಾಂಧಿಚೌಕ್ ಪೊಲೀಸ್ ಠಾಣೆ ಹೊರಭಾಗದಲ್ಲಿ ತಡರಾತ್ರಿವರೆಗೂ ಮಗಳು ಹಿಂತಿರುಗುವ ನಿರೀಕ್ಷೆಯಲ್ಲಿ ಪೋಷಕರು ಕಾಯುತ್ತಿದ್ದರು. ಆದರೆ ಮಗಳು ತಾನು ಮದುವೆಯಾಗಿರುವುದಾಗಿ ಹೇಳಿ ಪೋಷಕರೊಂದಿಗೆ ತೆರಳಲು ನಿರಾಕರಿಸಿ, ತನ್ನ ಪತಿಯೊಂದಿಗೇ ಹೋಗಿದ್ದಾಳೆ.
ಫೆಬ್ರವರಿ 4ರಂದು ಶಾನುಭಾಯಿ ಚೌಹಾಣ್ ಮತ್ತು ಪಂಡಿತ ಚೌಹಾಣ್ ದಂಪತಿಯ ಮಗಳು ನಿಶಾ ಕಾಣೆಯಾಗಿದ್ದಳು. ಈ ಹಿನ್ನೆಲೆ ಪೋಷಕರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ನಿಶಾ ಸ್ವಯಂಪ್ರೇರಿತವಾಗಿ ನಗರದ ಮಹಿಳಾ ಪೊಲೀಸ್ ಠಾಣೆಗೆ ಹಾಜರಾಗಿದ್ದು, ತಾನು ಎಲ್ಲಿಯೂ ಅಪಹರಣಗೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾಳೆ.
ಮಹಿಳಾ ಠಾಣೆಗೆ ನಿಶಾ ತನ್ನ ಪ್ರಿಯಕರ ಮೊಹಮದ್ ಸಲಿಂ ಸುತಾರ್ ಜೊತೆಗೆ ಆಗಮಿಸಿ, ನಾವಿಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದೇವೆ. ನಾನು ಪೋಷಕರೊಂದಿಗೆ ಹೋಗುವುದಿಲ್ಲ, ಗಂಡನ ಜೊತೆಯಲ್ಲಿಯೇ ತೆರಳುತ್ತೇನೆ ಎಂದು ಪೊಲೀಸರ ಮುಂದೆ ಹೇಳಿದ್ದಾಳೆ. ನಿಶಾ ವಯಸ್ಕಳಾಗಿರುವುದರಿಂದ ಮತ್ತು ಅವಳ ನಿರ್ಧಾರಕ್ಕೆ ಕಾನೂನಾತ್ಮಕ ಅಡ್ಡಿ ಇಲ್ಲದ ಕಾರಣ, ಪೊಲೀಸರು ಆಕೆಯನ್ನು ಪತಿ ಸಲಿಂ ಜೊತೆಯಲ್ಲಿಯೇ ಕಳುಹಿಸಿದ್ದಾರೆ.
ಮಗಳು ಠಾಣೆಗೆ ಬಂದಿರುವ ಸುದ್ದಿ ತಿಳಿಯುತ್ತಿದ್ದಂತೆ ಪೋಷಕರು ದೌಡಾಯಿಸಿ ಬಂದರು. ತಾಯಿ ಶಾನುಭಾಯಿ ಕಣ್ಣೀರಿಟ್ಟು ಬೇಡಿಕೊಂಡರೂ ನಿಶಾ ಪೋಷಕರ ಮನವಿಗೆ ಒಪ್ಪಲಿಲ್ಲ. ಕೊನೆಗೆ ಪೊಲೀಸರ ವಾಹನದಲ್ಲೇ ನಿಶಾ ತನ್ನ ಪತಿ ಸಲಿಂ ಜೊತೆ ಠಾಣೆಯಿಂದ ಹೊರಟು ಹೋಗಿದ್ದಾಳೆ. ಈ ವೇಳೆ ಠಾಣೆ ಮುಂದೆ ಪೋಷಕರ ಅಳಲು, ನೋವು ಕಂಡುಬಂದಿದ್ದು ಸ್ಥಳದಲ್ಲಿ ಭಾವನಾತ್ಮಕ ವಾತಾವರಣ ನಿರ್ಮಾಣವಾಗಿತ್ತು.










