ಸಕಲೇಶಪುರ: ಪಟ್ಟಣದ ಬಿ.ಎಂ ರಸ್ತೆಯ ಎರಡೂ ಬದಿಗಳಲ್ಲಿ ದಿನ ಬಿಟ್ಟು ದಿನ ಒಂದೊಂದು ಬದಿಯಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಶಾಸಕ ಸಿಮೆಂಟ್ ಮಂಜುನಾಥ್ ತಿಳಿಸಿದ್ದಾರೆ.
ಪಟ್ಟಣದ ಬಿ.ಎಂ ರಸ್ತೆಯ ಎರಡೂ ಬದಿಗಳಲ್ಲಿ ರಸ್ತೆ ಗುಂಡಿ ಮುಚ್ಚಿ ಡಾಂಬರೀಕರಣ ಕಾಮಗಾರಿಯನ್ನು ವೀಕ್ಷಿಸಿದ ಬಳಿಕ ಮಾತನಾಡಿದ ಅವರು, ಈಗಾಗಲೇ ಪಟ್ಟಣದಲ್ಲಿ ಬೈಪಾಸ್ ರಸ್ತೆ ನಿರ್ಮಾಣವಾಗಿದ್ದರೂ ವಾಹನ ಸಂಚಾರದ ಒತ್ತಡ ಕಡಿಮೆಯಾಗಿಲ್ಲ. ಇದರಿಂದ ಬಿ.ಎಂ ರಸ್ತೆಯಲ್ಲಿ ಟ್ರಾಫಿಕ್ ಕಿರಿಕಿರಿ ಹೆಚ್ಚಾಗಿದೆ ಎಂದು ಹೇಳಿದರು.
ಪ್ರಸ್ತುತ ಬಿ.ಎಂ ರಸ್ತೆಯ ಒಂದು ಬದಿಯಲ್ಲಿ ಮಾತ್ರ ವಾಹನಗಳ ನಿಲುಗಡೆಗೆ ಅವಕಾಶ ನೀಡಲಾಗುತ್ತಿದ್ದು, ರಸ್ತೆ ಅಗಲ ಕಿರಿದಾಗಿರುವುದರಿಂದ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಎರಡು ಬದಿಗಳಲ್ಲೂ ಪರ್ಯಾಯ ದಿನಗಳಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಅಧಿಕಾರಿಗಳು ಸಾರ್ವಜನಿಕರನ್ನು ಅನಗತ್ಯವಾಗಿ ಅಲೆದಾಡಿಸಬಾರದು. ಸಮಸ್ಯೆಗಳಿಗೆ ತ್ವರಿತ ಪರಿಹಾರ ಒದಗಿಸಬೇಕು ಎಂದು ಶಾಸಕ ಸಿಮೆಂಟ್ ಮಂಜುನಾಥ್ ಸೂಚನೆ ನೀಡಿದರು.
MLA Cement Manjunath said that parking of vehicles will be allowed on both sides of the BM Road in Sakleshpur town on alternate days.










