ಹಾಸನ: ಪ್ರತಿವರ್ಷದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪತ್ರಿಕೋದ್ಯಮ ಕ್ಷೇತ್ರದಿಂದ ಈ ಬಾರಿಯ ಸನ್ಮಾನಕ್ಕೆ ಜಿಲ್ಲೆಯ ಇಬ್ಬರು ಪತ್ರಕರ್ತರು ಭಾಜನರಾಗಿದ್ದಾರೆ.
ಅರಕಲಗೂಡಿನ ಪ್ರಜಾವಾಣಿ ಹಿರಿಯ ವರದಿಗಾರ ಜಿ.ಚಂದ್ರಶೇಖರ ಹಾಗೂ ಜನಮಿತ್ರ ಪ್ರಾದೇಶಿಕ ದಿನ ಪತ್ರಿಕೆ ಉಪ ಸಂಪಾದಕರಾದ ಶ್ರೀ ಲಕ್ಷ್ಮಿ ಎಸ್. ಪ್ರಸಾದ್ ಅವರು ಸೋಮವಾರ ಬೆಳಗ್ಗೆ ಸನ್ಮಾನ ಸ್ವೀಕರಿಸುವರು.
ಪರಿಚಯ:
ಜಿ. ಚಂದ್ರಶೇಖರ ಅವರು ಲೇಟ್ ಜಿ.ಕೆ.ವೆಂಕಟ ಸುಬ್ಬಯ್ಯ-ಲೇಟ್ ನಾಗರತ್ಮಮ್ಮ ದಂಪತಿ ಸುಪುತ್ರರು. ಮೂಲತಃ ಅರಕಲಗೂಡಿನವರಾದ ಇವರು 1977 ರಲ್ಲಿ ಕನ್ನಡ ಪ್ರಭ ದಿನ ಪತ್ರಿಕೆ ಹಂಚುವ ಮೂಲಕ ಪತ್ರಿಕೋದ್ಯಮ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದರು. ನಂತರ ಪ್ರಜಾವಾಣಿ ಏಜೆಂಟರಾಗಿ, ಅಲ್ಲೇ ವರದಿಗಾರರಾದರು. ನಡುವೆ ಸಂಯುಕ್ತ ಕರ್ನಾಟಕ, ಮುಂಗಾರು, ಮುಂಜಾನೆ, ಜನತಾ ಮಾಧ್ಯಮ, ಜನಮಿತ್ತ ಪತ್ರಿಕೆ ವರದಿಗಾರರಾಗಿ ಸೇವೆ ಸಲ್ಲಿಸಿ ಕಳೆದ 30 ವರ್ಷಗಳಿಂದ ಪ್ರಜಾವಾಣಿ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶಿವಮೊಗ್ಗ ಜಿಲ್ಲೆ ಭದ್ರಾವತಿಯ ನಿವಾಸಿಗಳಾದ ಶ್ರೀ ಎ.ಎನ್.ಕೃಷ್ಣಮೂರ್ತಿ-ಶ್ರೀಮತಿ ಎ.ಕೆ.ಪುಷ್ಪಾವತಿ ದಂಪತಿಗಳ ಸುಪುತ್ರಿಯಾಗಿ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕು ಜಯಪುರ ಗ್ರಾಮದಲ್ಲಿ ಜನಿಸಿದ ಎ.ಕೆ.ಶ್ರೀಲಕ್ಷ್ಮಿ (ಶ್ರೀಲಕ್ಷ್ಮಿ ಎಸ್.ಪ್ರಸಾದ್) ಅವರು
೨೦೦೯ ರ ನವೆಂಬರ್ ೧೯ ರಂದು ಕಪ್ಪು ಬಿಳುಪು, ೨ ಪುಟಗಳ ಜನಮಿತ್ರ ಸ್ಥಳೀಯ ದಿನಪತ್ರಿಕೆಯಲ್ಲಿ ಕೆಲಸಕ್ಕೆ ಸೇರಿ, ಈಗಲೂ ಅಲ್ಲೇ ವೃತ್ತಿ ಮುಂದುವರಿಸಿದರು.
೧೬ ವರ್ಷಗಳಿಂದ ಒಂದೇ ಸಂಸ್ಥೆಯಲ್ಲಿ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ.
ನ್ಯೂಸ್ ಎಡಿಟಿಂಗ್, ಆರ್ಟಿಕಲ್ ಎಡಿಟಿಂಗ್, ಸಂಪಾದಕೀಯ ಪುಟ ವಿನ್ಯಾಸ, ಭಾನುವಾರದ ವಿಶೇಷ ಸಾಪ್ತಾಹಿಕ ಜೀವನ್ಮುಖಿ ಅಲ್ಲದೆ ವಿಶೇಷ ದಿನಗಳಲ್ಲಿ ವಿಶೇಷ ಪುಟಗಳನ್ನು ನಿಭಾಯಿಸುತ್ತಿದ್ದಾರೆ.
ಸನ್ಮಾನಿತರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಹೆಚ್.ಬಿ.ಮದನಗೌಡ, ಜಿಲ್ಲಾಧ್ಯಕ್ಷರಾದ ಜೆ.ಆರ್.ಕೆಂಚೇಗೌಡರು ಹಾಗೂ ಸಂಘದ ಎಲ್ಲಾ ಪದಾಧಿಕಾರಿಗಳು ಹಾರ್ದಿಕವಾಗಿ ಅಭಿನಂದಿಸಿದ್ದಾರೆ.










