ಹಾಸನ: ನಮ್ಮ ಸಂವಿಧಾನವನ್ನು ಗೌರವಿಸುವ ಜತೆಗೆ ಭ್ರಾತೃತ್ವ ಭಾವನೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಸ್ಕಾಲರ್ಸ್ ಶಾಲೆಯ ಆಡಳಿತಾಧಿಕಾರಿ ಡಾ. ಎಚ್.ಎನ್. ಚಂದ್ರಶೇಖರ್ ಅವರು ಹೇಳಿದರು.
ನಗರದ ಸ್ಕಾಲರ್ಸ್ ಶಾಲೆಯಲ್ಲಿ ಆಯೋಜಿಸಿದ್ದ 77ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮ ಸಂವಿಧಾನದ ಆಶಯಗಳು ಜಾರಿಗೊಳ್ಳಬೇಕಾದರೆ ಪ್ರತಿಯೊಬ್ಬರ ಜೀವನದಲ್ಲೂ ಅದರ ಆಶಯಗಳು ಅಳವಡಿಕೆಯಾಗಬೇಕು ಎಂದರು.
ಶಾಲೆಯ ಕಾರ್ಯದರ್ಶಿ ಮಮತಾ ಚಂದ್ರಶೇಖರ್ ಅವರು ಧ್ವಜಾರೋಹಣ ನೆರವೇರಿಸಿದರು. ಬಳಿಕ ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಗೂ ವಂದೇ ಮಾತರಂ ಗೀತೆಗಳನ್ನು ಹಾಡಿ ರಾಷ್ಟ್ರಧ್ವಜಕ್ಕೆ ನಮನ ಸಲ್ಲಿಸಿದರು.
ಮಮತಾ ಚಂದ್ರಶೇಖರ್ ಮಾತನಾಡಿ, ಭಾರತದ ಸಂವಿಧಾನವನ್ನು ಅಂಗೀಕರಿಸಿದ ದಿನದ ಸ್ಮರಣಾರ್ಥವಾಗಿ ಗಣರಾಜ್ಯೋತ್ಸವವನ್ನು ಪ್ರತಿವರ್ಷ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ರಾಷ್ಟ್ರಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮಹನೀಯರು ಹಾಗೂ ದೇಶದ ಏಕತೆ ಮತ್ತು ಅಖಂಡತೆಗಾಗಿ ಹೋರಾಡಿದ ದೇಶಭಕ್ತರನ್ನು ಸ್ಮರಿಸಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಶಾಲಾ ಸಿಬ್ಬಂದಿವರ್ಗ ಭಾಗವಹಿಸಿದ್ದರು.










