0.9 C
Munich
Home News ಚನ್ನರಾಯಪಟ್ಟಣ: ಅಂತರಾಷ್ಟ್ರೀಯ ಮಟ್ಟದಲ್ಲಿ ಸಹಕಾರ ಕ್ಷೇತ್ರದ ಗುರುತು

ಚನ್ನರಾಯಪಟ್ಟಣ: ಅಂತರಾಷ್ಟ್ರೀಯ ಮಟ್ಟದಲ್ಲಿ ಸಹಕಾರ ಕ್ಷೇತ್ರದ ಗುರುತು

ಚನ್ನರಾಯಪಟ್ಟಣ: ಸಹಕಾರ ಕ್ಷೇತ್ರವು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ಗುರುತಿಸಿಕೊಂಡಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.

ಪಟ್ಟಣದಲ್ಲಿ ಟಿ ಎ ಪಿ ಸಿ ಎಂ ಎಸ್, ಹಾಲು ಒಕ್ಕೂಟ ವಿವಿಧ ಸಹಕಾರ ಸಂಘಗಳ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಹಕಾರ ಕ್ಷೇತ್ರ ಅಭಿವೃದ್ಧಿ ಹೊಂದಿದರೆ ಮಾತ್ರ ದೇಶ ಪ್ರಗತಿ ಕಾಣಲು ಸಾಧ್ಯ ಎಂದರು.

ದೇಶದ ಪ್ರತಿಯೊಬ್ಬ ರೈತನು ಸಹ ಕೃಷಿ ಪತ್ತಿನ ಸಹಕಾರ ಸಂಘ, ಹಾಲು ಉತ್ಪಾದಕರ ಸಹಕಾರ ಸಂಘ ಸೇರಿದಂತೆ ಒಂದಲ್ಲ ಒಂದು ಸಹಕಾರ ಸಂಘಗಳ ಮೂಲಕ ಹತ್ತಾರು ಅನುಕೂಲಗಳನ್ನು ಪಡೆಯುತ್ತಿದ್ದು ಬದುಕನ್ನು ಸದೃಢಗೊಳಿಸಿಕೊಂಡಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 1800 ಹಾಲು ಉತ್ಪಾದಕರ ಸಹಕಾರ ಸಂಘಗಳಿಗಯವೆ. ಅದರಲ್ಲಿ 800ಕ್ಕೂ ಹೆಚ್ಚು ಮಹಿಳಾ ಸಹಕಾರ ಸಂಘಗಳು ಇದ್ದು ಹೈನುಗಾರಿಕೆಯ ಹೇಳಿಕೆಯಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೆಲವು ವರ್ಷಗಳ ಹಿಂದೆ ಜಿಲ್ಲಾ ಬ್ಯಾಂಕ್ ಸಿಬ್ಬಂದಿಗಳಿಗೆ ಸಂಬಳ ನೀಡಲಾಗದಂತಹ ಸ್ಥಿತಿ ಎದುರಾಗಿತ್ತು. ಅಂತಹ ಸಮಯದಲ್ಲಿ ಮಾಜಿ ಪ್ರಧಾನಿಗಳಾದ ಹೆಚ್‌.ಡಿ.ದೇವೇಗೌಡರು ಪೈಲೆಟ್ ಯೋಜನೆ ಮೂಲಕ ಮೂರು ಕೋಟಿ ರೂ ಅನುದಾನ ಕಲ್ಪಿಸಿ ಸಹಕಾರ ಕ್ಷೇತ್ರದ ಉಳಿವು ಹಾಗೂ ಪ್ರಗತಿಗೆ ಕಾರಣಕರ್ತರಾದರು ಎಂದು ಶ್ಲಾಘಿಸಿದರು.

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ವೇಳೆ ರೈತರ ಸಾಲ ಮನ್ನಾ ಮಾಡಿದ್ದು 3,800 ಕೋಟಿ ರೈತರ ಸಾಲ ಮನ್ನವಾಗಿದೆ. ಇದರಿಂದ ಲಕ್ಷಾಂತರ ರೈತ ಕುಟುಂಬಗಳು ಸಾಲದಿಂದ ಮುಕ್ತಿ ಪಡೆದು ನಿರಾಳಗೊಂಡಿವೆ ಎಂದರು.

ಹೈನುಗಾರಿಕೆಯಲ್ಲಿ ತೊಡಗಿರುವ ರೈತರು ತಮ್ಮ ಜಾನುವಾರುಗಳಿಗೆ 400 ರೂ. ಪಾವತಿಸಿ ವಿಮೆ ಮಾಡಿಸುವುದು ಸೂಕ್ತ. ಇದರ ಜೊತೆಗೆ ಹಾಸನ ಹಾಲು ಒಕ್ಕೂಟ ಹಾಗೂ ಕೆಎಂಎಫ್ ಉಳಿದ ಹಣವನ್ನು ಪಾವತಿಸಲಿದೆ. ವಿಮೆ ಹೊಂದಿರುವ ಜಾನುವಾರು ಅನಿವಾರ್ಯ ಮೃತಪಟ್ಟಲ್ಲಿ 70 ಸಾವಿರ ರೂ. ಪರಿಹಾರ ಸಿಗಲಿದೆ ಎಂದು ಮನವಿ ಮಾಡಿದರು.

ಹಾಲು ಉತ್ಪಾದನೆಯಲ್ಲಿ ಚನ್ನರಾಯಪಟ್ಟಣ ತಾಲೂಕು ರಾಜ್ಯದಲ್ಲಿಯೇ ನಾಲ್ಕನೇ ಸ್ಥಾನದಲ್ಲಿದೆ. 340 ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು ದಿನ ಒಂದಕ್ಕೆ 2.86 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗಲಿದೆ. ವಾರ್ಷಿಕ 400 ಕೋಟಿ ವಹಿವಾಟು ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

ಸಂಪನ್ಮೂಲ ವ್ಯಕ್ತಿ ಜಯಪ್ರಕಾಶ್ ಮಾತನಾಡಿ, ಸಹಕಾರ ಸಂಘಗಳ ಮೂಲಕ ಹಲವು ಸೇವೆಗಳನ್ನು ಪ್ರಾರಂಭಿಸಬಹುದು. ಸಹಕಾರ ಸಂಘಗಳ ಮೂಲಕ 108 ಆಂಬುಲೆನ್ಸ್ ಸೇವೆ ನಡೆಸಬಹುದು. ನಮ್ಮ ಹಾಗೂ ನಮ್ಮ ಸಮಾಜದ ಬೆಳವಣಿಗೆಗೆ ಪೂರಕವಾಗಿ ಅನೇಕ ಸೇವೆಗಳನ್ನು ಸಲ್ಲಿಸುವ ಅವಕಾಶ ಸಹಕಾರ ಕ್ಷೇತ್ರದಲ್ಲಿದೆ ಎಂದರು.

ಕರ್ನಾಟಕ ರಾಜ್ಯ ಮಾರಾಟ ಮಹಾಮಂಡಳದ ಅಧ್ಯಕ್ಷ ಸಿ.ಎನ್. ಪುಟ್ಟಸ್ವಾಮಿಗೌಡ, ಟಿ ಎ ಪಿ ಸಿ ಎಂ ಎಸ್ ಅಧ್ಯಕ್ಷ ಮೆಡಿಕಲ್ ವೆಂಕಟೇಶ್, ನಿರ್ದೇಶಕರಾದ ತೋಟೀನ್ ನಾಗಣ್ಣ, ಅನಿಲ್, ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಸಿ.ಎನ್.ವೆಂಕಟೇಶ್. ಮಾಜಿ ಅಧ್ಯಕ್ಷ ತೋಟಿ ಜಯರಾಮ್, ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಎಚ್.ಜಿ. ರಾಮಕೃಷ್ಣ, ಜೆಡಿಎಸ್ ತಾಲೂಕು ಅಧ್ಯಕ್ಷ ಪರಮದ ದೇವರಾಜೇಗೌಡ, ಸಿಡಿಪಿಓ ವಿಜಯೇಂದ್ರ, ಜಿಲ್ಲಾ ಬ್ಯಾಂಕ್ ನಾಮಿನಿ ಅಭಿಲಾಶ್, ಪ್ರಮುಖರಾದ ನಾಗರಾಜ್, ಮಧು, ದಯಾನಂದ್, ಯೋಗೇಶ್, ತಾಲೂಕು ವ್ಯಾಪ್ತಿಯ ಸಹಕಾರ ಸಂಘಗಳ ಕಾರ್ಯದರ್ಶಿಗಳು, ಅಧ್ಯಕ್ಷರು, ನಿರ್ದೇಶಕರು ಹಾಗೂ ಸದಸ್ಯರು ಸೇರಿದಂತೆ ಸಾರ್ವಜನಿಕರು ಪಾಲ್ಗೊಂಡಿದ್ದರು.

error: Content is protected !!