ಹಾಸನ: ಪೊಲೀಸರೆಂದರೆ ಸಮಾಜದ ರಕ್ಷಕರು ಮತ್ತು ನಮ್ಮ ಸೈನಿಕರು.2005 ರಿಂದ ನೆನೆಗುದಿಗೆ ಬಿದ್ದಿದ್ದ ಕ್ರೀಡಾ ಮೀಸಲಾತಿ ನೀತಿಯನ್ನು ಮರುಜಾರಿಗೊಳಿಸಿ ರಾಜ್ಯ ಸರ್ಕಾರವು ಕ್ರೀಡಾ ವಲಯಕ್ಕೆ ಮತ್ತೆ ಚೈತನ್ಯ ತುಂಬಿರುವುದು ರಾಜ್ಯದ ನೂರಾರು ಕ್ರೀಡಾಪಟುಗಳಲ್ಲಿ ಹೊಸ ಆಶಾಕಿರಣ ಮೂಡಿಸಿದೆ ಎಂದು ಅಂತಾರಾಷ್ಟ್ರೀಯ ವಾಲಿಬಾಲ್ ಆಟಗಾರ ಕೆ.ತರುಣ್ ಗೌಡ ಕೃತಜ್ಞತೆ ಸಲ್ಲಿಸಿದರು.
ನಗರದ ಹೊಸಲೈನ್ ರಸ್ತೆ ಬಳಿ ಇರುವ ಪೊಲೀಸ್ ಕವಾಯತು ಮೈದಾನದಲ್ಲಿ ಬುಧವಾರ ಬೆಳಿಗ್ಗೆ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ನೇಮಕಾತಿಯಲ್ಲಿ ಕ್ರೀಡಾಪಟುಗಳ ಮೀಸಲಾತಿಯನ್ನು ಶೇ.2 ರಷ್ಟು ಮೀಸಲಾತಿ ಜಾರಿಗೆ ಸರ್ಕಾರ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ, ನನ್ನಂತೆಯೇ ಸಾವಿರಾರು ಕ್ರೀಡಾಪಟುಗಳ ಸರ್ಕಾರಿ ನೌಕರಿಯ ಕನಸಿಗೆ ಪೂರಕವಾದ ಅವಕಾಶ ದೊರಕಲಿದೆ ಎಂದು ಒಬ್ಬ ಕ್ರೀಡಾಪಟು ಸರ್ಕಾರಕ್ಕೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಇಂದು ಮಕ್ಕಳನ್ನು ಪುಸ್ತಕದ ಒತ್ತಡದಲ್ಲಿ ತಳ್ಳುತ್ತಿರುವ ಪೋಷಕರು ಸ್ವಲ್ಪ ಜಾಗೃತರಾಗಬೇಕು. ಮಕ್ಕಳ ಭವಿಷ್ಯಕ್ಕಾಗಿ ಮುಖ್ಯವಾದರೂ, ಅವರ ದೈಹಿಕ-ಮಾನಸಿಕ ಆರೋಗ್ಯಕ್ಕಾಗಿ ಕ್ರೀಡೆ ಅನಿವಾರ್ಯ. ಈ ಮೀಸಲಾತಿಯ ಜಾರಿ ಮಕ್ಕಳಿಗೆ ಕ್ರೀಡೆ ಮೂಲಕ ವಿವಿಧ ಸರ್ಕಾರಿ ಹುದ್ದೆಗಳನ್ನು ಪಡೆಯುವ ಅವಕಾಶ ನೀಡುತ್ತದೆ. ಆದ್ದರಿಂದ ಪೋಷಕರು ಮಕ್ಕಳನ್ನು ಕ್ರೀಡೆಗೆ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.
ಶಿಸ್ತಿನ ಇಲಾಖೆಯಲ್ಲಿ 24 ಗಂಟೆಗಳ ಸೇವೆ ಸಲ್ಲಿಸುವ ಸಿಬ್ಬಂದಿ ಬಗ್ಗೆ ಮಾತನಾಡಿದ ಅವರು, ನಿತ್ಯ ಕಾರ್ಯಭಾರದಿಂದ ದೈಹಿಕ ಮತ್ತು ಮಾನಸಿಕ ಒತ್ತಡ ಎದುರಿಸುವ ನಿಮಗೆ ಕ್ರೀಡೆ ಒಂದು ಶಕ್ತಿಯ ಮೂಲ. ನೀವು ಇಷ್ಟು ಉತ್ಸಾಹದಿಂದ ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಿರುವುದನ್ನು ಕಂಡು ನನಗೆ ಅನಂದ. ಇದು ನಿಮ್ಮ ಆರೋಗ್ಯಕ್ಕಾಗಿ ಮಾತ್ರವಲ್ಲ, ಸಮಾಜದ ಸುರಕ್ಷತೆಗಾಗಿ ಕೂಡ ಅಗತ್ಯ. ನೀವು ಶಕ್ತಿಯಾಗಿದ್ದರೆ ನಮ್ಮ ಸಮಾಜವೂ ಶಕ್ತಿಯಾಗಿರುತ್ತದೆ.
ನೀವು ನಮ್ಮ ಸಮಾಜದ ರಕ್ಷಕರು, ನಮ್ಮ ಸೈನಿಕರು ಎಂದು ಹೇಳಿದರು. ನಿಮ್ಮೆಲ್ಲರಿಗೂ ತಾಯಿ ಚಾಮುಂಡೇಶ್ವರಿ ಮತ್ತು ಹಾಸನಾಂಬೆಯ ಆಶೀರ್ವಾದ ಇರಲಿ. ಕ್ರೀಡಾ ಚಟುವಟಿಕೆಗಳು ಕೇವಲ ಸ್ಪರ್ಧೆಗೆ ಸಿಮೀತವಾಗದೆ, ಜೀವನ ಶೈಲಿಯಾಗಲಿ ಎಂದು ಆಶಿಸಿದರು. ರಾಜ್ಯ ಸರ್ಕಾರದ ಈ ಮಹತ್ವದ ನಿರ್ಧಾರವು ಕ್ರೀಡಾ ಕ್ಷೇತ್ರಕ್ಕೆ ಹೊಸ ಚೈತನ್ಯ ನೀಡಿದ್ದು, ಪ್ರತಿಭಾವಂತ ಕ್ರೀಡಾಪಟುಗಳಿಗೆ ಭವಿಷ್ಯದ ಬಾಗಿಲು ತೆರೆಯಲಿದೆ ಎಂಬುದು ಕ್ರೀಡಾಭಿಮಾನಿಗಳ ಅಭಿಪ್ರಾಯವಾಗಿದೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ಅವರು ಸ್ವಾಗತ ನುಡಿಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಕ್ರೀಡೆ ಎಂಬುದು ಮನುಷ್ಯನ ಅವಿಭಾಜ್ಯ ಅಂಗ. ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಭಾಗವಹಿಸಬೇಕು. ಕ್ರೀಡೆಯಲ್ಲಿ ಸೋಲು ಗೆಲುವು ಎಂಬುದನ್ನು ಸಮಾನಾಗಿ ಸ್ವೀಕರಿಸಿ ಕ್ರೀಡಾ ಮನೋಭಾವ ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಗೌರವ ಪೂರಕವಾಗಿ ಪಾರಿವಾಳ ಮತ್ತು ಬಲೂನ್ ಹಾರಿಸಲಾಯಿತು. ಪೊಲೀಸರಿಂದ ಪ್ರತಿಜ್ಞಾವಿಧಿ ಬೋಧಿಸಿದರು. ಇದೇ ವೇಳೆ ಅಪರ ಪೊಲೀಸ್ ವರಿಷ್ಠಾಧಿಕಾರಿಗಳಾದ ಕೆ.ಎಸ್. ತಮ್ಮಯ್ಯ, ವೆಂಕಟೇಶ್ ನಾಯ್ಡ್ ಹಾಗೂ ಅಧೀನ ಅಧಿಕಾರಿಗಳಿದ್ದರು. ನಂತರ ನಡೆದ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ತಮ್ಮ ಕ್ರೀಡಾಸ್ಫೂರ್ತಿ ಪ್ರದರ್ಶನ ಮಾಡಿ ಗಮನ ಸೆಳೆದರು.










