ಹಾಸನ: ನಗರದ ರೋಟರಿ ಕ್ಲಬ್ ಆಫ್ ಸೆಂಟ್ರಲ್ ವತಿಯಿಂದ ನಗರದ ಹೃದಯ ಭಾಗದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು. ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಕೊಡುಗೆ ಅನನ್ಯವೆಂದು ಪರಿಗಣಿಸಿ ಕ್ಲಬ್‌ನ ಸದಸ್ಯರಾಗಿರುವ ಶಿಕ್ಷಕರು ಹಾಗೂ ಜಿಲ್ಲೆಯ ಹಲವಾರು ಗಣ್ಯ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಕ್ಲಬ್ ಅಧ್ಯಕ್ಷ ರೊ.ನಾಗೇಶ್ ಎಂ.ಡಿ ಮಾತನಾಡಿ, ಶಿಕ್ಷಕರು ಕೇವಲ ಪಾಠ ಹೇಳುವವರಲ್ಲ, ಅವರು ವಿದ್ಯಾರ್ಥಿಗಳ ಜೀವನ ರೂಪಿಸುವ ಶಿಲ್ಪಿಗಳು. ಸಮಾಜಕ್ಕೆ ನಿಷ್ಠಾವಂತ, ಜವಾಬ್ದಾರಿಯುತ ನಾಗರಿಕರನ್ನು ತಯಾರಿಸುವಲ್ಲಿ ಶಿಕ್ಷಕರ ಪಾತ್ರ ಅಪಾರ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಹಾಜರಿದ್ದ ಉಪನ್ಯಾಸಕ ಪ್ರಕಾಶ್ ಮೇಗಲಕೇರಿ ಮಾತನಾಡಿ, ಡಾ.ಎಸ್.ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನವಾಗಿ ಆಚರಿಸುವ ಪರಂಪರೆಯನ್ನು ನೆನಪಿಸಿಕೊಂಡರು. ಪ್ರಗತಿಶೀಲ ಸಮಾಜಕ್ಕೆ ಬಲವಾದ ಆಸ್ತಿ, ಅಸ್ತ್ರ ಶಿಕ್ಷಣವೇ ಆಗಿದ್ದು, ಅದರ ಆಧಾರ ಸ್ತಂಭ ಶಿಕ್ಷಕರು ಎಂದ ಅವರು, ಅವರ ಪರಿಶ್ರಮ ದಿಂದಲೇ ವಿದ್ಯಾರ್ಥಿಗಳು ಜ್ಞಾನಪೂರ್ಣ ಭವಿಷ್ಯ ಕಟ್ಟಿಕೊಳ್ಳುತ್ತಾರೆ ಎಂದು ಹೇಳಿದರು.
ಉಪನ್ಯಾಸಕ ಹರೀಶ ಮಾತನಾಡಿ, ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಬಹುದೊಡ್ಡದು, ಶಿಕ್ಷಕರ ಪರಿಶ್ರಮವಿಲ್ಲದೇ ಮಹತ್ತರವಾದ ಸಾಧನೆ ಯಾರಿಂದಲೂ ಸಾಧ್ಯವಿಲ್ಲ ಎಂದರು.ಕಾರ್ಯಕ್ರಮದಲ್ಲಿ ಪ್ರತಿಭಾವಂತ ಹಾಗೂ ಸೇವಾ ಮನೋಭಾವ ಹೊಂದಿದ ಶಿಕ್ಷಕರಿಗೆ ಗೌರವ ಸೂಚಿಸಿ ಫಲಕ, ಶಾಲು ಹಾಗೂ ಪುಷ್ಪ ನೀಡಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಶಿಕ್ಷಕರು ತಮ್ಮ ಅನುಭವ ಹಂಚಿಕೊಂಡು, ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ತಮಗಿರುವ ಬದ್ಧತೆ ವ್ಯಕ್ತಪಡಿಸಿದರು.ಕ್ಲಬ್ ಕಾರ್ಯದರ್ಶಿ ರೊ. ಅಶೋಕ್, ಖಜಾಂಚಿ ಯೋಗೇಶ್‌ಗೌಡ, ಆನ್ಸ್ ಭಾರತಿ, ಅನುಪಮ ವೇದಿಕೆಯಲ್ಲಿದ್ದರು.
ಕಾರ್ಯಕ್ರಮದಲ್ಲಿ ಪುಟಾಣಿ ಇಶಾನ್ ಶಿಕ್ಷಕರ ಕುರಿತು ಮಾಡಿದ ಭಾಷಣ ಎಲ್ಲರ ಗಮನ ಸೆಳೆಯಿತು. ರೊ.ಬಿ.ಆರ್ ಬೊಮ್ಮೇಗೌಡ ಕಾರ್ಯಕ್ರಮ ನಿರೂಪಿಸಿದರು. ನಭಾ ನಾಗೇಶ್ ಪ್ರಾರ್ಥಿಸಿದರೆ, ರೊ.ಆರ್. ಕೆ ದಯಾನಂದ್ ವಂದಿಸಿದರು.










