ಚನ್ನರಾಯಪಟ್ಟಣ: ಪ್ರತಿ ಮಂಗಳವಾರ ನಡೆಯುವ ಇಲ್ಲಿನ ಸಂತೆಯಲ್ಲಿ ಎಪಿಎಂಸಿ ವತಿಯಿಂದ ತೆಂಗಿನಕಾಯಿ ವ್ಯಾಪಾರವನ್ನು ಪುನರಾರಂಭಿಸಲಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ತಾಲ್ಲೂಕಿನ ದಿಡಗ ಗ್ರಾಮದ ಎಪಿಎಂಸಿ ಆವರಣದಲ್ಲಿ ಚನ್ನರಾಯಪಟ್ಟಣ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ನೂತನ ಹರಾಜುಕಟ್ಟೆ ಹಾಗೂ ತೆಂಗಿನಕಾಯಿ ಸಂತೆಯನ್ನು ಉದ್ಘಾಟಿಸಿ ಮಾತನಾಡಿದರು.
ಇಲ್ಲಿನ ಉಪ ಮಾರುಕಟ್ಟೆಯಲ್ಲಿ ಆರ್‌ಐಡಿಎಫ್-೨೯ ರ ಯೋಜನೆಯಡಿ ೭೦ ಲಕ್ಷ ರೂ. ವೆಚ್ಚದಲ್ಲಿ ಹರಾಜುಕಟ್ಟೆ, ಕಾಂಕ್ರಿಟ್ ರಸ್ತೆ ಹಾಗೂ ಚರಂಡಿ ವ್ಯವಸ್ಥೆಯೊಂದಿಗೆ ಅಭಿವೃದ್ಧಿಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ೧೦ ಮಳಿಗೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದರು.
ಈ ಉಪ ಮಾರುಕಟ್ಟೆಯು ಸುಮಾರು ೧೨ ಎಕರೆ ವಿಸ್ತೀರ್ಣ ಹೊಂದಿದ್ದು ಬೆಳೆದು ನಿಂತಿರುವ ಗಿಡಗಂಟಿಗಳನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲದೆ ಸ್ಥಳೀಯ ಗ್ರಾಮ ಪಂಚಾಯಿತಿ ಮೂಲಕ ಪ್ರಾಂಗಣದ ಅಲ್ಲಲ್ಲಿ ವಿದ್ಯುತ್ ದೀಪ ಅಳವಡಿಸಲು ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಅತಿ ಶೀಘ್ರದಲ್ಲಿಯೇ ಮಾರುಕಟ್ಟೆ ಆವರಣದಲ್ಲಿ ಸುಲಭ ಶೌಚಾಲಯ ನಿರ್ಮಿಸಿ ಸೂಕ್ತ ನಿರ್ವಹಣೆಗೆ ವ್ಯವಸ್ಥೆ ಮಾಡಲಾಗುವುದು. ವ್ಯಾಪ್ತಿಯ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅನುದಾನದ ಲಭ್ಯತೆಯ ಮೇರೆಗೆ ಹೆಚ್ಚಿನ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಇನ್ನು ದಿಡಗ ಗ್ರಾಮದ ಸಾರಿಗೆ ಬಸ್ ನಿಲ್ದಾಣಕ್ಕೆ ಜರೂರಾಗಿ ಕಾಂಕ್ರಿಟ್ ಹಾಕಿಸುವುದರ ಜತೆಗೆ ಪುರುಷರು ಹಾಗೂ ಮಹಿಳೆಯರಿಗೆ ಪ್ರಥ್ಯೇಕವಾಗಿ ಶೌಚಾಲಯ ನಿರ್ಮಿಸುವ ಮೂಲಕ ಅಭಿವೃದ್ಧಿಗೊಳಿಸಲಾಗುವುದು ಎಂದರು.
ದಿಡಗ ಹಾಗೂ ಕಬ್ಬಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವ ಮಹತ್ತರವಾದ ಏತನೀರಾವರಿ ಯೋಜನೆಯನ್ನು ವರ್ಷಗಳ ಹಿಂದೆಯೇ ಕೈಗೆತ್ತಿಕೊಂಡಿದ್ದು ಕಾರ್ಯರೂಪಕ್ಕೆ ತರುವಲ್ಲಿ ಹೆಚ್ಚಿನ ಗಮನ ಹರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ದಿಡಗ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಪುಟ್ಟರಾಜು, ಎಂ.ಆರ್.ವಾಸು, ಎಪಿಎಂಸಿ ಮಾಜಿ ಅಧ್ಯಕ್ಷ ಉಗೇನಹಳ್ಳಿ ರಘುರಾಮ್, ದಿಡಗ ಸೊಸೈಟಿ ಮಾಜಿ ಅಧ್ಯಕ್ಷರಾದ ಹೆಚ್.ಕೆ.ಯೋಗೇಶ್, ಶ್ರೀಕಂಠಪ್ಪ, ನಿರ್ದೇಶಕರಾದ ಮಲ್ಲೇಗೌಡ, ಹೆಚ್.ಎಸ್.ಮಹೇಶ್, ಮಧುಗೌಡ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆಡಳಿತಾಧಿಕಾರಿ ವಿಜಯಲಕ್ಷ್ಮಿ, ಕಾರ್ಯದರ್ಶಿ ಸೋಮಶೇಖರ್, ಗ್ರಾಪಂ ಪಿಡಿಒ ಕೆ.ಎಸ್.ಪ್ರಕಾಶ್, ಸದಸ್ಯರು, ನೀರುಗಂಟಿಗಳು ಹಾಗೂ ಇನ್ನಿತರರು ಇದ್ದರು.










