ಹಾಸನ: ಡಿ. 27, 28ರಂದು ಅದ್ಧೂರಿ ‘ಜಿಲ್ಲಾ ವಿಪ್ರ ಸಮ್ಮೇಳನ’

With the aim of uniting all Vipra followers in Hassan district and creating awareness about the culture, a 'District Vipra Conference' has been organized on December 27 and 28 at the Malenadu College of Engineering (MCE) campus in the city.

ಹಾಸನ: ಜಿಲ್ಲೆಯ ಸಮಸ್ತ ವಿಪ್ರ ಬಾಂಧವರನ್ನು ಒಂದುಗೂಡಿಸುವ ಮತ್ತು ಸಂಸ್ಕಾರದ ಅರಿವು ಮೂಡಿಸುವ ಉದ್ದೇಶದಿಂದ ಡಿಸೆಂಬರ್ 27 ಮತ್ತು 28ರಂದು ನಗರದ ಮಲೆನಾಡು ಎಂಜಿನಿಯರಿಂಗ್ ಕಾಲೇಜು (MCE) ಆವರಣದಲ್ಲಿ ‘ಜಿಲ್ಲಾ ವಿಪ್ರ ಸಮ್ಮೇಳನ’ ಹಮ್ಮಿಕೊಳ್ಳಲಾಗಿದೆ. ಈ ಬೃಹತ್ ಕಾರ್ಯಕ್ರಮದ ಪೂರ್ವಭಾವಿ ಸಭೆಯು ಭಾನುವಾರ ಸಂಜೆ ನಗರದ ಶಂಕರ ಮಠದಲ್ಲಿ ಯಶಸ್ವಿಯಾಗಿ ಜರುಗಿತು.

ಕೋಟಿ ಗಾಯತ್ರಿ ಜಪದ ಸಂಕಲ್ಪ: ಭರದಿಂದ ಸಾಗಿದ ಸಿದ್ಧತೆ

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಬ್ರಾಹ್ಮಣ ಸಭಾದ ಅಧ್ಯಕ್ಷರಾದ ಮಂಜುನಾಥ ಮೂರ್ತಿ ಅವರು, ಸಮ್ಮೇಳನದ ಅಂಗವಾಗಿ ಹಮ್ಮಿಕೊಂಡಿರುವ ‘ಕೋಟಿ ಗಾಯತ್ರಿ ಜಪ’ ಅಭಿಯಾನಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ ಎಂದರು.

ಈಗಾಗಲೇ ಸುಮಾರು 1 ಕೋಟಿ17 ಲಕ್ಷ ಜಪ ಪೂರ್ಣಗೊಂಡಿದ್ದು, ಮುಂದಿನ ಒಂದು ವಾರದಲ್ಲಿ ಈ ಸಂಖ್ಯೆ 50 ಲಕ್ಷ ದಾಟುವ ನಿರೀಕ್ಷೆಯಿದೆ ಎಂದರು.

ಸಮ್ಮೇಳನದ ಪ್ರಚಾರಕ್ಕಾಗಿ ಜಿಲ್ಲೆಯಾದ್ಯಂತ ಪ್ರವಾಸ ಕೈಗೊಂಡಾಗ ವಿಪ್ರ ಬಾಂಧವರಿಂದ ಭವ್ಯ ಸ್ವಾಗತ ಹಾಗೂ ಬೆಂಬಲ ದೊರೆತಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.

ಸಮ್ಮೇಳನದ ಪ್ರಮುಖ ಆಕರ್ಷಣೆಗಳು ಕೇವಲ ಧಾರ್ಮಿಕ ಕಾರ್ಯಕ್ರಮಗಳಿಗೆ ಸೀಮಿತವಾಗದೆ, ಸಮಾಜದ ಎಲ್ಲಾ ವರ್ಗದವರನ್ನು ತಲುಪಲು ವೈವಿಧ್ಯಮಯ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.

ಗಾಯತ್ರಿ ಹೋಮ:

ಡಿಸೆಂಬರ್ 27ರಂದು 30 ಹೋಮ ಕುಂಡಗಳಲ್ಲಿ 600 ಜನ ಋತ್ವಿಜರಿಂದ ಗಾಯತ್ರಿ ಹೋಮ ನಡೆಯಲಿದ್ದು, ಮಧ್ಯಾಹ್ನ 12:30ಕ್ಕೆ ಪೂರ್ಣಾಹುತಿ ನೆರವೇರಲಿದೆ.

ವೈವಿಧ್ಯಮಯ ಉತ್ಸವಗಳು:

ಸಮ್ಮೇಳನದಲ್ಲಿ ಗಾಳಿಪಟ ಉತ್ಸವ, ಮೆಹಂದಿ , ವಿವಿಧ ಗೋಷ್ಠಿಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಸೆಳೆಯಲಿವೆ.

*ರಾಜ್ಯಮಟ್ಟದ ಗಣ್ಯರ ಆಗಮನ:
ರಾಜ್ಯದ ವಿವಿಧ ಜಿಲ್ಲೆಗಳ ವಿಪ್ರ ಸಭೆಗಳಿಗೆ ಆಮಂತ್ರಣ ನೀಡಲಾಗಿದ್ದು, ನೂರಾರು ಗಣ್ಯರು ಭಾಗವಹಿಸಲಿದ್ದಾರೆ.

ಮಕ್ಕಳಿಗೆ ಸಂಸ್ಕಾರದ ಅಡಿಪಾಯ

“ಇಂದಿನ ಪೀಳಿಗೆಗೆ ಸಂಸ್ಕಾರ ನೀಡುವುದು ಈ ಸಮ್ಮೇಳನದ ಮುಖ್ಯ ಉದ್ದೇಶ. ಪೋಷಕರು ತಮ್ಮ ಮಕ್ಕಳೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ನಮ್ಮ ಪರಂಪರೆಯ ಅರಿವು ಮೂಡಿಸಬೇಕು” ಎಂದು ಅಧ್ಯಕ್ಷರು ಮನವಿ ಮಾಡಿದರು. ಅಲ್ಲದೆ, ಸಮ್ಮೇಳನಕ್ಕೆ ಸ್ಥಳಾವಕಾಶ ನೀಡಿ ಸಹಕರಿಸುತ್ತಿರುವ ಮಲೆನಾಡು ಎಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸಿದರು.

ತನು-ಮನ-ಧನದ ಸಹಕಾರಕ್ಕೆ ಕರೆ

ಈ ಐತಿಹಾಸಿಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ವಿಪ್ರ ಬಾಂಧವರು ತನು-ಮನ-ಧನದಿಂದ ಸಹಕರಿಸಬೇಕೆಂದು ಕೋರಲಾಯಿತು. ವೇದಿಕೆಯಲ್ಲಿ ಜಿಲ್ಲಾ ಬ್ರಾಹ್ಮಣ ಸಭಾದ ಕಾರ್ಯದರ್ಶಿ ಸುರೇಶ್ ಹಾಗೂ ಖಜಾಂಚಿ ಅಶ್ವಿನಿ ಉಪಸ್ಥಿತರಿದ್ದರು.