ಹಾಸನ: ಮಹಾನಗರ ಪಾಲಿಕೆ ಮೇಯರ್ ಎಂ. ಚಂದ್ರೇಗೌಡ ಅವರು ತಮ್ಮ ಕಚೇರಿಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಫೋಟೊ ಪಕ್ಕದಲ್ಲಿ ತಮ್ಮ ಭಾವಚಿತ್ರ ಹಾಕಿ ರಾಷ್ಟ್ರ ನಾಯಕರಿಗೆ ಅವಮಾನ ಮಾಡಿದ್ದಾರೆಂದು ಆರೋಪಿಸಿ ವಿವಿಧ ದಲಿತಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.
ಮೇಯರ್ ಕಚೇರಿ ಎದುರು ಧರಣಿ ನಡೆಸಿದ ಅಂಬೇಡ್ಕರ್ ಅಭಿಮಾನಿಗಳು, ಮಹಾತ್ಮ ಗಾಂಧೀಜಿ ಹಾಗು ಅಂಬೇಡ್ಕರ್ ಅವರಿಗಿಂತ ಎಂ. ಚಂದ್ರೇಗೌಡ ದೊಡ್ಡವರಲ್ಲ. ತಾವು ರಾಷ್ಟ್ರ ನಾಯಕರಿಗೆ ಸಮಾನರೆಂದು ಹೇಳ ಹೊರಟಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ವಾರದ ಹಿಂದೆ ಕಚೇರಿಗೆ ಭೇಟಿ ನೀಡಿ ತಮ್ಮ ಫೋಟೊ ಬೇರೆ ಕಡೆ ಅಳವಡಿಸಿ ಎಂದು ಸಲಹೆ ನೀಡಿದ್ದೆವು. ಚಂದ್ರೇಗೌಡ ಅವರು ನಮ್ಮ ಮನವಿಗೆ ಸ್ಪಂದಿಸಿಲ್ಲ. ಅಂಬೇಡ್ಕರ್ ಸಂವಿಧಾನ ರಚಿಸಿದ್ದರಿಂದಲೇ ಇವರೆಲ್ಲ ರಾಜಕಾರಣಿಗಳಾಗಿದ್ದಾರೆ. ಅವರ ಪಕ್ಕದಲ್ಲಿ ಫೋಟೊ ಹಾಕಿಕೊಳ್ಳಲು ಯಾವ ನೈತಿಕತೆಯಿದೆ ಎಂದು ಪ್ರಶ್ನಿಸಿದರು.
ಭಾರತೀಯ ಪರಿವರ್ತನಾ ಸಂಘದ ಜಿಲ್ಲಾಧ್ಯಕ್ಷ ರಮೇಶ್ ಹಾಕ್ಯ, ಮುಖಂಡರಾದ ದಿನೇಶ್, ರಾಮು, ಭಾನುಪ್ರಕಾಶ್, ಧರ್ಮರಾಜು, ಮಂಜುನಾಥ್, ಉಮೇಶ್ ಮತ್ತಿತರರಿದ್ದರು.










