ಅರಕಲಗೂಡು: ತಾಲ್ಲೂಕಿನ ಶಂಭನಾಥಪುರ ಗ್ರಾಮದಲ್ಲಿರುವ ಮಧುಶ್ರೀ ವೃದ್ಧಾಶ್ರಮಕ್ಕೆ ತಲುಪುವ ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು, ಸಂಚಾರಕ್ಕೆ ಭಾರೀ ಸಮಸ್ಯೆಯಾಗಿದೆ.
ಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೃದ್ಧಾಶ್ರಮವನ್ನು ಕಳೆದ ವರ್ಷದಿಂದ ಶಂಭನಾಥಪುರದ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ವಿಕಲಚೇತನರು, ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಮಧುಶ್ರೀ ಮಹಿಳಾ ಸಮಾಜದಿಂದ ವೃದ್ಧಾಶ್ರಮ ಕಾರ್ಯನಿರ್ವಹಿಸುತ್ತಿದ್ದು 16 ವೃದ್ಧರು ಆಶ್ರಯ ಪಡೆದಿದ್ದಾರೆ. ಸುಸಜ್ಜಿತ ಕಟ್ಟಡ, ಅಗತ್ಯ ಸೌಕರ್ಯಗಳನ್ನು ವೃದ್ಧಾಶ್ರಮ ಹೊಂದಿದೆಯಾದರೂ ಸಂಪರ್ಕ ರಸ್ತೆಯಿಲ್ಲದೆ ಗೋಳು ಹೇಳತೀರದಾಗಿದೆ.
2020ರಲ್ಲಿ ಆರಂಭವಾಗಿರುವ ವೃದ್ಧಾಶ್ರಮಕ್ಕೆ ಜಿಲ್ಲೆ ಮಾತ್ರವಲ್ಲದೆ ರಾಜ್ಯದ ವಿವಿಧ ಭಾಗಗಳಿಂದ ವೃದ್ಧರು ಬರುತ್ತಾರೆ. ಶೇ. 60 ರಷ್ಟು ಖರ್ಚು ಸರ್ಕಾರ ಭರಿಸಿದರೆ ಶೇ. 40 ರಷ್ಟು ಮಧುಶ್ರೀ ಮಹಿಳಾ ಸಮಾಜ ವಹಿಸಿಕೊಂಡಿದೆ. ಇಲ್ಲಿ ವಾಸ್ತವ್ಯ ಪಡೆದವರು ಸಹ ಅಚ್ಚುಕಟ್ಟು ವ್ಯವಸ್ಥೆಗೆ ಮೆಚ್ಚುಗೆ ಸೂಚಿಸಿದ್ದಾರೆ.
200 ಮೀಟರ್ ರಸ್ತೆಗೆ ನಿರ್ಲಕ್ಷ್ಯ
ಅರಕಲಗೂಡು ಪಟ್ಟಣಕ್ಕೆ ಸಮೀಪದಲ್ಲಿರುವ ವೃದ್ಧಾಶ್ರಮ ಮುಖ್ಯ ರಸ್ತೆಯಿಂದ ಕೇವಲ 200 ಮೀ. ದೂರದಲ್ಲಿದೆ. ಅದು ಕಾಲುವೆ ರಸ್ತೆಯಾಗಿದ್ದು ಡಾಂಬರು ಭಾಗ್ಯ ಕಂಡಿಲ್ಲ. ಅದರಿಂದ ವೃದ್ಧಾಶ್ರಮಕ್ಕೆ ದಿನಸಿ ಸಾಮಾಗ್ರಿ ಕೊಂಡೊಯ್ಯಲು, ವೃದ್ಧರನ್ನು ಕರೆದುಕೊಂಡು ಬರಲು, ಆಸ್ಪತ್ರೆಗೆ ಕರೆದೊಯ್ಯಲು ತೊಂದರೆಯಾಗುತ್ತಿದೆ. ಕಡಿಮೆ ಖರ್ಚಿನಲ್ಲಿ ಆಗಬಹುದಾದ ಕಾಮಗಾರಿ ಕುರಿತು ಸ್ಥಳೀಯ ಶಾಸಕರು, ಅಧಿಕಾರಿಗಳ ಗಮನಕ್ಕೆ ಸಾಕಷ್ಟು ಸಲ ತಂದರೂ ಪ್ರಯೋಜನವಾಗಿಲ್ಲ. ಡಾಂಬರು ರಸ್ತೆ ಮಾಡಿಕೊಟ್ಟರೆ ಅನುಕೂಲವಾಗುತ್ತ ಎಂದು ಮಧುಶ್ರೀ ಮಹಿಳಾ ಸಮಾಜದ ಮಧು ಮನವಿ ಮಾಡಿದರು.










