ಉಡುಪಿ : ಫ್ಲ್ಯಾಟ್–ಚಿನ್ನ ವ್ಯವಹಾರ ನೆಪದಲ್ಲಿ ಕೋಟ್ಯಂತರ ವಂಚನೆ!

ಉದ್ಯಮಿಗೆ ದೋಖಾ, ಶೆಟ್ಟಿ ದಂಪತಿ ವಿರುದ್ಧ ಪ್ರಕರಣ ದಾಖಲು

ಉಡುಪಿ : ಹರಾಜಿನಲ್ಲಿ ಫ್ಲ್ಯಾಟ್, ಚಿನ್ನ ಖರೀದಿಸಿ ಕೊಡಿಸುವುದಾಗಿ ನಂಬಿಸಿ ಮುಂಬೈ ಮೂಲದ ಉದ್ಯಮಿ ಮಮತಾ ಶೆಟ್ಟಿಯಿಂದ ಸುಮಾರು ₹4.78 ಕೋಟಿ ವಂಚನೆ ಮಾಡಿರುವ ಆರೋಪ ಉಡುಪಿಯ ದಂಪತಿ ವಿರುದ್ಧ ಕೇಳಿಬಂದಿದೆ. ಈ ಸಂಬಂಧ ಸುಹಾಸಿನಿ ಶೆಟ್ಟಿ ಹಾಗೂ ಅವರ ಪತಿ ಪುನೀತ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲಾಗಿದೆ.

ದೂರಿನ ಪ್ರಕಾರ, ಮಮತಾ ಶೆಟ್ಟಿಗೆ ದೂರದ ಸಂಬಂಧಿಯಾಗಿರುವ ಸುಹಾಸಿನಿ ಶೆಟ್ಟಿ 2024ರ ಜನವರಿಯಿಂದ ಜೂನ್‌ವರೆಗೆ ಹಂತ ಹಂತವಾಗಿ ಒಟ್ಟು ₹4.78 ಕೋಟಿ ಹಣವನ್ನು ವರ್ಗಾಯಿಸಿಕೊಳ್ಳಲಾಗಿದೆ. ಹರಾಜಿನಲ್ಲಿ ಚಿನ್ನ, ಫ್ಲ್ಯಾಟ್ ಮತ್ತು ಸ್ಕ್ರಾಪ್ ವ್ಯವಹಾರದಲ್ಲಿ ಹೆಚ್ಚಿನ ಲಾಭ ತಂದುಕೊಡುವ ಹೂಡಿಕೆ ಮಾಡಿಕೊಡುವುದಾಗಿ ಭರವಸೆ ನೀಡಿದ್ದರೂ, ಬಳಿಕ ಯಾವುದೇ ಆಸ್ತಿಯನ್ನೂ ಖರೀದಿಸಿ ಕೊಡದೆ ಹಣ ದುರುಪಯೋಗಪಡಿಸಿಕೊಂಡಿರುವುದಾಗಿ ಆರೋಪಿಸಲಾಗಿದೆ.

ಈ ಸಂಬಂಧ 2024ರಲ್ಲಿ ಉಡುಪಿ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಸುಹಾಸಿನಿ ಶೆಟ್ಟಿ ನ್ಯಾಯಾಲಯದಿಂದ ಸ್ಟೇ ಆದೇಶ ಪಡೆದಿದ್ದಾರೆ ಎನ್ನಲಾಗಿದೆ. ಮಧ್ಯವರ್ತಿಗಳಾದ ಕಿಶೋರ್ ಶೆಟ್ಟಿ ಮತ್ತು ನವೀನ್ ಮೂಲ್ಕಿ ಮೂಲಕ ಸಂಧಾನದ ಪ್ರಯತ್ನ ನಡೆದಿದ್ದರೂ ಅದು ಫಲಕಾರಿಯಾಗಿಲ್ಲ.

ಇದೀಗ ದಂಪತಿ ಮಣಿಪಾಲದಿಂದ ಮಂಗಳೂರಿಗೆ ಸ್ಥಳಾಂತರಗೊಂಡ ಹಿನ್ನೆಲೆ, ಮಮತಾ ಶೆಟ್ಟಿ ಮಂಗಳೂರು ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಮರು ತನಿಖೆಗೆ ಮನವಿ ಮಾಡಿದ್ದಾರೆ. ಪ್ರಕರಣವನ್ನು ಮರು ಪರಿಶೀಲಿಸಲಾಗುವುದು ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.