ತುಮಕೂರು : ತುಮಕೂರು ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿ ನಾಲ್ವರು ಅಯ್ಯಪ್ಪ ಭಕ್ತರು ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಶಬರಿಮಲೆ ಅಯ್ಯಪ್ಪ ದರ್ಶನ ಮುಗಿಸಿಕೊಂಡು ವಾಪಸಾಗುತ್ತಿದ್ದ ಭಕ್ತರು ಪ್ರಯಾಣಿಸುತ್ತಿದ್ದ ಕ್ರೂಸರ್ ವಾಹನ, ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಈ ಅಪಘಾತ ತುಮಕೂರಿನ ಕೋರಾ ಸಮೀಪದ ವಸಂತನರಸಾಪುರ ಕೈಗಾರಿಕಾ ಪ್ರದೇಶದ ಬಳಿ ನಡೆದಿದೆ.
ಅಪಘಾತದ ತೀವ್ರತೆಗೆ ನಾಲ್ವರು ಭಕ್ತರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ಮೂಲದ ಸಾಕ್ಷಿ (7), ವೆಂಕಟೇಶಪ್ಪ (30), ಮಾರತಪ್ಪ (35) ಹಾಗೂ ಗವಿಸಿದ್ದಪ್ಪ (40) ಮೃತಪಟ್ಟ ದುರ್ದೈವಿಗಳೆಂದು ಗುರುತಿಸಲಾಗಿದೆ.
ಇನ್ನೂ ಈ ದುರ್ಘಟನೆಯಲ್ಲಿ ಪ್ರಶಾಂತ್, ಪ್ರವೀಣ್ ಕುಮಾರ್, ರಾಜಪ್ಪ, ಉಲಗಪ್ಪ, ರಾಕೇಶ್, ತಿರುಪತಿ ಹಾಗೂ ಶ್ರೀನಿವಾಸ್ ಸೇರಿ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಘಟನಾ ಸ್ಥಳಕ್ಕೆ ಕೋರಾ ಪೊಲೀಸ್ ಠಾಣೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ










