
ಹಾಸನ: ನಗರದ ನ್ಯೂ ಬಸ್ ನಿಲ್ದಾಣ ಟರ್ಮಿನಲ್ನಿಂದ ಎನ್.ಆರ್. ಸರ್ಕಲ್ ವರೆಗೆ ಸಂಪರ್ಕ ಕಲ್ಪಿಸುವ ರೈಲು ಮೇಲ್ಸೇತುವೆ ನಿರ್ಮಾಣ ಬಳಿಕ ಎನ್.ಆರ್. ಸರ್ಕಲ್ ವ್ಯಾಪ್ತಿಯಲ್ಲಿ ತೀವ್ರ ಸಂಚಾರ ದಟ್ಟಣೆ ಹಾಗೂ ರಸ್ತೆ ಸುರಕ್ಷತಾ ಸಮಸ್ಯೆ ದಿನೇ ದಿನೆ ಹೆಚ್ಚುತ್ತಿವೆ ಎಂದು ನಗರಸಭೆ ಮಾಜಿ ಸದಸ್ಯ ಹೆಚ್.ಎಂ.ಸುರೇಶ್ ಕುಮಾರ್ ಹಾಗೂ ಇತರರು ಆರೋಪಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅವೈಜ್ಞಾನಿಕ
ರಸ್ತೆ ವಿನ್ಯಾಸ ಹಾಗೂ ಅಸಮರ್ಪಕ ಹೊಂದಾಣಿಕೆಯಿಂದಾಗಿ ವಾಹನ ಸವಾರರು ಮತ್ತು ಪಾದಚಾರಿಗಳು ನಿರಂತರ ಅಪಾಯದ ಮಧ್ಯೆ ಸಂಚರಿಸಬೇಕಿದೆ. ಅಕಸ್ಮಾತ್ ಮೈ ಮರೆತರೆ ಅಪಾಯ ಗ್ಯಾರಂಟಿ ಎಂದು ಆತಂಕ ಹೊರ ಹಾಕಿದರು.
ಆರ್ಒಬಿ ಇಳಿಜಾರಿನ ತುದಿ ಮತ್ತು ಸಮೀಪದಲ್ಲಿರುವ ಸಂಚಾರ ಸಿಗ್ನಲ್ ನಡುವಿನ ಅಂತರ ಅತ್ಯಂತ ಕಡಿಮೆ ಇದೆ. ಕೇವಲ 30 ಸೆಕೆಂಡ್ಗಳಲ್ಲಿ ಹೆಚ್ಚು ವಾಹನಗಳು ಹಾದು ಹೋಗುವುದು ಕಷ್ಟವಾಗಿದೆ.
ಅಕಸ್ಮಾತ್ ಮೇಲ್ಸೇತುವೆಯಿಂದ ಇಳಿಯುವ ವಾಹನಗಳು ಏಕಾಏಕಿ ಬ್ರೇಕ್ ಹಾಕಿದರೆ ಕಷ್ಟವಾಗಲಿದೆ. ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಸೇರಿ ಎಲ್ಲರೂ ಮನವಿ ಮಾಡಿದರೂ, ಸಂಬಂಧಪಟ್ಟ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿಲ್ಲ ಎಂದು ಆರೋಪಿಸಿದರು.
ಸಮರ್ಪಕ ಬಫರ್ ಜಾಗದ ಕೊರತೆ, ಸಿಗ್ನಲ್ ದೃಶ್ಯದ ಕಡಿಮೆ ಅಂತರ, ಮುನ್ನೆಚ್ಚರಿಕೆ ಸೂಚನಾ ಫಲಕ ಅಳವಡಿಸದೇ ಇರುವುದು, ಅವೈಜ್ಞಾನಿಕ ಸಂಗಮ ವಿನ್ಯಾಸದಿಂದಾಗಿ ಇಲ್ಲಿ ನಿತ್ಯವೂ ಸಂಚಾರ ಕಿರಿಕಿರಿ ಮತ್ತು ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ ಎಂದರು.
ಇದರಿಂದ ಹಿಂಬದಿ ಡಿಕ್ಕಿ ಅಪಾಯ ಹೆಚ್ಚಾಗಿದೆ. ತುರ್ತು ಸೇವಾ ವಾಹನ, ಟ್ರಾಫಿಕ್ ಮಧ್ಯೆ ಸಿಲುಕುವಂತಹ ಸಂದರ್ಭಗಳು ಉಂಟಾಗುತ್ತಿವೆ. ಜೊತೆಗೆ ಎನ್.ಆರ್. ಸರ್ಕಲ್ ಸುತ್ತಮುತ್ತ ಸಾರ್ವಜನಿಕರ ಜೀವಕ್ಕೂ ಅಪಾಯ ಎದುರಾಗಿದೆ ಎಂದು ಆತಂಕ ಹೊರ ಹಾಕಿದರು.
ಎನ್.ಆರ್. ಸರ್ಕಲ್ನಲ್ಲಿ ಸೇವಾ ರಸ್ತೆ ಮತ್ತು ಮುಖ್ಯ ರಸ್ತೆ
(ಮೇನ್ ಕ್ಯಾರೇಜ್ ವೇ)ಗಳ ಸಂಗಮ ಸರಿಯಾದ ರೀತಿಯಲ್ಲಿ ಹೊಂದಾಣಿಕೆ ಆಗಿಲ್ಲ. ಸಂಗಮದ ಬಳಿ ನಿರ್ಮಿಸಲಾಗಿರುವ ಟೋ ವಾಲ್ ಅಗತ್ಯಕ್ಕಿಂತ ಬಹಳ ಮುಂದಕ್ಕೆ ನಿರ್ಮಾಣ ಗೊಂಡಿರುವುದರಿಂದ, ರಸ್ತೆ ಅಗಲ ಏಕಾಏಕಿ ಕುಗ್ಗುತ್ತಿದೆ. ಇದರಿಂದ ವಾಹನ ಸವಾರರು ತಕ್ಷಣ ಹಾಗೂ ಅಪಾಯಕಾರಿ ತಿರುವು ಮತ್ತು ಲೇನ್ ಬದಲಾವಣೆ ಮಾಡುವಾಗ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ದೂರಿದರು.
ರಸ್ತೆ ಸುರಕ್ಷತಾ ತಜ್ಞರ ಪ್ರಕಾರ, ಭಾರತೀಯ ರಸ್ತೆ ಕಾಂಗ್ರೆಸ್ ಮಾರ್ಗಸೂಚಿಗಳಂತೆ ನಗರ ರಸ್ತೆಯಲ್ಲಿ 50*60 ಕಿ.ಮೀ ವೇಗಕ್ಕೆ ಕನಿಷ್ಠ 60 ರಿಂದ 90 ಮೀಟರ್ ನಿಲ್ಲುವ ದೃಶ್ಯ ದೂರ ಕಡ್ಡಾಯ. ಜೊತೆಗೆ ಸಿಗ್ನಲ್ ಬಳಿ ವಾಹನ ಸಾಲ ನಿಲ್ಲಿಸಲು ಸಮರ್ಪಕ ಜಾಗ ಒದಗಿಸಬೇಕು.
ಹೆಚ್ಚಿನ ಸಂಚಾರವಿರುವ ನಗರ ಜಂಕ್ಷನ್ಗಳಲ್ಲಿ ಸಾಮಾನ್ಯವಾಗಿ 150 ರಿಂದ 200 ಮೀಟರ್ ವರೆಗೆ ವಾಹನ ಸಾಲಿಗೆ ಜಾಗ ಇರಬೇಕು. ಆದರೆ ಎನ್.ಆರ್. ಸರ್ಕಲ್ನಲ್ಲಿ ಈ ನಿಯಮ ಪಾಲನೆಯಾಗುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದರು.
ದೊಡ್ಡ ಅಪಘಾತ ಘಟಿಸುವ ಮುನ್ನ ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚೆತ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹೆಚ್.ಡಿ ದೀಪಕ್ ಜೈನ್, ಎಸ್.ಡಿ. ಚಂದ್ರು, ಪ್ರೀತಿವರ್ಧನ್, ಗುರುಪ್ರಸಾದ್, ಪ್ರಸನ್ನ ಕುಮಾರ್ ಇದ್ದರು.
This has increased the risk of rear-end collisions. Emergency service vehicles are getting stuck in traffic. In addition, the lives of the public around N.R. Circle are also at risk, he expressed concern.









