ಆಲೂರು: ತಾಲ್ಲೂಕು ಕಚೇರಿಗೆ ಬಾಂಬ್ ಇಟ್ಟಿರುವುದಾಗಿ ಅನಾಮಧೇಯ ವ್ಯಕ್ತಿ ಇ-ಮೇಲ್ ಮೂಲಕ ಬೆದರಿಕೆ ನೀಡಿರುವ ಘಟನೆ ಸೋಮವಾರ ತಾಲ್ಲೂಕು ಕಚೇರಿ ಸಿಬ್ಬಂದಿ ಹಾಗೂ ಸಾರ್ವಜನಿಕರಲ್ಲಿ ಆತಂಕ ಮೂಡಿಸಿತು.
ಕಚೇರಿಯ ಅಧಿಕೃತ ಇ-ಮೇಲ್ಗೆ ಬೆಳಗಿನ ಜಾವ 3.04 ನಿಮಿಷದಲ್ಲಿ ಗನ್ ಗೈನ ರಮೇಶ್ ಎಂಬ ಹೆಸರಿನಲ್ಲಿ ತಾಲೂಕು ಕಚೇರಿಯ ಅಧಿಕೃತ ಇಮೇಲ್ ಗೆ ಎರಡು ಆಡಿ ಎಕ್ಸ್ ಬಾಂಬ್ ಇಟ್ಟಿದ್ದು ಅದನ್ನು ಮಧ್ಯಾಹ್ನ 1:00 ಒಳಗೆ ಬ್ಲಾಸ್ಟ್ ಮಾಡಲಾಗುವುದು ಎಂಬ ಸಂದೇಶ ಬಂದಿದೆ.
ನೆನ್ನೆ ಭಾನುವಾರವಾದ್ದರಿಂದ ರಜೆ ಇತ್ತು. ಇಂದು ಎಂದಿನಂತೆ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿ ಕಂಪ್ಯೂಟರ್ ಆನ್ ಮಾಡಿ ಇ ಮೇಲ್ ಚೆಕ್ ಮಾಡಿದಾಗ ಅಂಚೆ ಸಂದೇಶ ಬಂದಿದ್ದನ್ನು ಅಧಿಕಾರಿಗಳಿಗೆ ತಿಳಿಸಿ ಎಲ್ಲಾ ಸಿಬ್ಬಂದಿ ಕಚೇರಿಯಿಂದ ಹೊರ ಬಂದಿದ್ದಾರೆ.
ಸಂದೇಶ ಗಮನಿಸಿದ ಸಿಬ್ಬಂದಿ ಕೂಡಲೇ ತಹಸೀಲ್ದಾರ್ ಮಲ್ಲಿಕಾರ್ಜುನ ಅವರಿಗೆ ಮಾಹಿತಿ ನೀಡಿದರು. ತಕ್ಷಣ ಅವರು ಸ್ಥಳೀಯ ಪೊಲೀಸರಿಗೆ ವಿಷಯ ತಿಳಿಸಿದರು.
ದೌಡಾಯಿಸಿದ ಪೊಲೀಸರು ಸಿಬ್ಬಂದಿ ಹೊರಗೆ ಕಳುಹಿಸಿ ಬಾಂಬ್ ನಿಷ್ಕ್ರಿಯ ದಳ, ಶ್ವಾನದಳದೊಂದಿಗೆ ಪೊಲೀಸ್ ಅಧಿಕಾರಿಗಳು ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿ ಸಂಪೂರ್ಣ ಕಟ್ಟಡದ ಸುದೀರ್ಘ ತಪಾಸಣೆ ನಡೆಸಿದರು. ಆದರೆ ಪರಿಶೀಲನೆ ವೇಳೆ ಯಾವುದೇ ಸ್ಪೋಟಕ ವಸ್ತುಗಳು ಪತ್ತೆಯಾಗಲಿಲ್ಲ ಎಂದು ಪೊಲೀಸರು ಸ್ಪಷ್ಟ ಪಡಿಸಿದರು.
ತಪಾಸಣೆ ಪೂರ್ಣಗೊಂಡ ಬಳಿಕ ತಹಸೀಲ್ದಾರ್ ಮಲ್ಲಿಕಾರ್ಜುನ ಅವರು, ಸಿಬ್ಬಂದಿ ಆತಂಕವಿಲ್ಲದೆ ಕರ್ತವ್ಯ ಮಾಡಿ ಎಂದರು.
ಮಾಹಿತಿ ತಿಳಿದ ತಕ್ಷಣ ತಾಲ್ಲೂಕು ಕಚೇರಿಗೆ ಶಾಸಕ ಸಿಮೆಂಟ್ ಮಂಜು ಭೇಟಿ ನೀಡಿ, ತಹಸೀಲ್ದಾರ್ ಹಾಗೂ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಬಳಿಕ ಮಾತನಾಡಿ, ಇದೊಂದು ಗಂಭೀರ ವಿಷಯ. ತಕ್ಷಣವೇ ಸರ್ಕಾರ ಇದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ತಾಲ್ಲೂಕು ಕಚೇರಿಯಲ್ಲಿ ಯಾವುದೇ ಸ್ಫೋಟಕ ವಸ್ತುಗಳಿಲ್ಲ ಎಂಬುದು ಸ್ಪಷ್ಟವಾಗಿದ್ದು, ಈಗ ಎಲ್ಲಾ ಸಿಬ್ಬಂದಿಗಳು ಸಹಜವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ತಹಸೀಲ್ದಾರ್ ಮಲ್ಲಿಕಾರ್ಜುನ್ ಮಾತನಾಡಿ, ಮೇಲ್ ಬಗ್ಗೆ ಸಿಬ್ಬಂದಿ ಮಾಹಿತಿ ನೀಡಿದ ಬಳಿಕ ಪೊಲೀಸರ ಗಮನಕ್ಕೆ ತಂದು ಎಲ್ಲವನ್ನೂ ಪರಿಶೀಲನೆ ನಡೆಸಿದಾಗ ಇದು ಹುಸಿ ಬಾಂಬ್ ಬೆದರಿಕೆ ಎಂಬುದು ಖಾತ್ರಿಯಾಗಿದೆ ಎಂದರು.
ಈ ಸಂದೇಶದಲ್ಲಿ ತಮಿಳುನಾಡಿನ ಡಿಐಜಿ ಸೇರಿದಂತೆ ಇನ್ನಿತರರಿಗೂ ಮೇಲ್ ವರ್ಗ ಆಗಿದೆ. ತಮಿಳುನಾಡಿನ ಕನ್ಯಾಕುಮಾರಿಯಲ್ಲೂ ಆಲೂರು ಎಂಬ ತಾಲೂಕಿದ್ದು, ಅಲ್ಲಿಗೂ ಮಾಹಿತಿ ನೀಡ ಲಾಗುವುದು. ಈಗ ಭಯ ದೂರವಾಗಿದೆ ಎಂದರು. ಸಕಲೇಶಪುರ ಡಿವೈಎಸ್ಪಿ, ಸ್ಥಳೀಯ ಸಿಪಿಐ ಮೋಹನ್ ರೆಡ್ಡಿ ಇತರಿದ್ದರು.
An anonymous person sent an email threatening to bomb the Alur Taluk office, causing panic among the taluk office staff and the public on Monday.










