Video:ಹಾಸನ ಜಿಲ್ಲೆಯಲ್ಲಿ ಕೊಡಗಿನಿಂದ ಬಂದ ದೈತ್ಯ ಒಂಟಿ ಸಲಗದ ಆರ್ಭಟ-ಬೇಲೂರಿನಲ್ಲಿ‌ ಹಿಂಡು ಹಿಂಡು ಕಾಡಾನೆಗಳ ಕಾಟ!

The entry of new, gigantic wild elephants from Kodagu district into the forest areas of the Hassan district is a cause for concern

ಹಾಸನ: ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕೊಡಗು ಜಿಲ್ಲೆಯಿಂದ ಬಂದಿರುವ ದೈತ್ಯಾಕಾರದ ಹೊಸ ಕಾಡಾನೆಗಳು ಜಿಲ್ಲೆಯ ಅರಣ್ಯ ಪ್ರದೇಶಕ್ಕೆ ಪ್ರವೇಶಿಸಿರುವುದು ಆತಂಕಕ್ಕೆ ಕಾರಣವಾಗಿದೆ.

ಬೇಲೂರು ತಾಲ್ಲೂಕಿನ ಬಿಕ್ಕೋಡು ಸಮೀಪ ಕೊಡಗು ಅರಣ್ಯ ಪ್ರದೇಶದಿಂದ ಬಂದಿರುವ ಎರಡು ಉದ್ದನೆಯ ದಂತಗಳನ್ನು ಹೊಂದಿರುವ ಭಾರೀ ಗಾತ್ರದ ಒಂಟಿ ಸಲಗ ಅರಣ್ಯ ಸೇರಿಕೊಂಡಿದೆ. ಇದೇ ವೇಳೆ, ಇನ್ನೊಂದೆಡೆ ಹಿಂಡು ಹಿಂಡಾಗಿ ಸಂಚರಿಸುತ್ತಿರುವ ಕಾಡಾನೆಗಳೂ ಕಂಡುಬಂದಿವೆ.

ಆಹಾರ ಅರಸಿ ಕಾಫಿ ತೋಟದೊಳಗಿರುವ ಮನೆಗಳ ಮುಂಭಾಗಕ್ಕೆ ದೈತ್ಯಾಕಾರದ ಕಾಡಾನೆ ಬಂದು ಕೆಲಕಾಲ ಮನೆಯ ಸುತ್ತಮುತ್ತ ಓಡಾಡಿ ನಂತರ ತೋಟದೊಳಗೆ ತೆರಳಿದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅರಣ್ಯ ಹಾಗೂ ಕಾಫಿ ತೋಟ ಪ್ರದೇಶಗಳಲ್ಲಿ ಕಾಡಾನೆಗಳು ಹೆಚ್ಚಾಗಿ ಸಂಚರಿಸುತ್ತಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಇನ್ನು, ರೈತರ ಜಮೀನಿಗೆ ನುಗ್ಗಿದ ಕಾಡಾನೆಗಳ ಹಿಂಡು ರಾತ್ರಿಯಿಡೀ ಬೆಳೆಗಳನ್ನು ತಿಂದು, ತುಳಿದು ನಾಶಪಡಿಸಿ ಬೆಳಗಿನ ಜಾವ ಅರಣ್ಯ ಪ್ರದೇಶಕ್ಕೆ ವಾಪಸ್ಸಾಗಿರುವ ಘಟನೆಗಳು ವರದಿಯಾಗಿವೆ. ನಿರಂತರ ಕಾಡಾನೆಗಳ ಕಾಟದಿಂದ ಬೇಲೂರು ತಾಲ್ಲೂಕಿನ ಹಲವು ಗ್ರಾಮಗಳ ರೈತರು ಹಾಗೂ ಸಾರ್ವಜನಿಕರು ತೀವ್ರ ತೊಂದರೆಗೆ ಒಳಗಾಗಿದ್ದು, ಅರಣ್ಯ ಇಲಾಖೆ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.