ಬೆಂಗಳೂರು: ಪವರ್ ಹಿಟ್ಟರ್‌ಗಳ ತಂಡದೊಂದಿಗೆ ಆರ್‌ಸಿಬಿ: WPL ಸೀಸನ್–4ರಲ್ಲಿ ಎರಡನೇ ಟ್ರೋಫಿಗೆ ರೆಡ್ ಆರ್ಮಿ ರೆಡಿ..!

ಬೆಂಗಳೂರು: ಮಹಿಳಾ ಪ್ರೀಮಿಯರ್ ಲೀಗ್ (WPL) ಟೂರ್ನಿಯ ಸೀಸನ್–4 ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಎರಡನೇ ಟ್ರೋಫಿ ಗೆಲ್ಲುವ ಗುರಿಯೊಂದಿಗೆ ರೆಡ್ ಆರ್ಮಿ ಮುಂಬೈನಲ್ಲಿ ಭರ್ಜರಿ ತಯಾರಿ ನಡೆಸುತ್ತಿದೆ.

ಕಳೆದ ಸೀಸನ್‌ಗೆ ಹೋಲಿಸಿದರೆ ಈ ಬಾರಿ ಆರ್‌ಸಿಬಿ ತಂಡ ಇನ್ನಷ್ಟು ಬಲಿಷ್ಠವಾಗಿ ರೂಪುಗೊಂಡಿದೆ. ಪವರ್‌ಫುಲ್ ಹಿಟ್ಟರ್‌ಗಳ ದಂಡೇ ತಂಡದಲ್ಲಿದ್ದು, ಬೌಂಡರಿ–ಸಿಕ್ಸರ್‌ಗಳ ಸುರಿಮಳೆ ಸುರಿಸಲು ರೆಡ್ ಆರ್ಮಿಯ ಸಿಂಹಿಣಿಯರು ಸಜ್ಜಾಗಿದ್ದಾರೆ.

ಟಿ20 ಫಾರ್ಮ್ಯಾಟ್ ಅಂದ್ರೆ ಬಿಗ್ ಹಿಟ್ಟರ್‌ಗಳ ಆಟ. ಈ ಫಾರ್ಮುಲಾನನ್ನು ಈ ಬಾರಿ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಸ್ಪಷ್ಟವಾಗಿ ಅರ್ಥಮಾಡಿಕೊಂಡಿದೆ. ಮೆಗಾ ಆಕ್ಷನ್‌ನಲ್ಲಿ ಸೂಕ್ತ ಲೆಕ್ಕಾಚಾರ ಮಾಡಿ ಸ್ಪೋಟಕ ಬ್ಯಾಟರ್‌ಗಳನ್ನು ತಂಡಕ್ಕೆ ಸೇರಿಸಿಕೊಂಡಿದೆ.

2026 ಐಪಿಎಲ್‌ನಿಂದ ಎಲ್ಲಿಸ್ ಪೆರಿ ತಂಡದಿಂದ ಹೊರಬಿದ್ದರೂ ಕೂಡ ಆರ್‌ಸಿಬಿ ಬ್ಯಾಟಿಂಗ್ ಶಕ್ತಿ ಕುಂದಿಲ್ಲ. ಬದಲಾಗಿ ಐವರು ಸ್ಪೋಟಕ ಬ್ಯಾಟರ್‌ಗಳು ತಂಡದ ಲೈನ್‌ಅಪ್‌ಗೆ ಹೊಸ ಬಲ ತುಂಬಿದ್ದಾರೆ.

ಆರ್‌ಸಿಬಿಯ ಬ್ಯಾಟಿಂಗ್ ಶಕ್ತಿ – ಸ್ಮೃತಿ ಮಂದಾನ

ಕ್ಯಾಪ್ಟನ್ ಸ್ಮೃತಿ ಮಂದಾನ ಆರ್‌ಸಿಬಿ ಬ್ಯಾಟಿಂಗ್‌ನ ಆಧಾರಸ್ತಂಭ. ಮಂದಾನ ಬ್ಯಾಟಿಂಗ್ ಬಗ್ಗೆ ಹೆಚ್ಚಾಗಿ ಹೇಳಬೇಕಾಗಿಲ್ಲ. ದೇಶೀಯ ಹಾಗೂ ಅಂತರಾಷ್ಟ್ರೀಯ ವೇದಿಕೆಯಲ್ಲಿ ಅವರ ಬ್ಯಾಟ್ ಮಾತನಾಡಿದ ಅನೇಕ ಮಾಸ್ಟರ್‌ಕ್ಲಾಸ್ ಇನ್ನಿಂಗ್ಸ್‌ಗಳು ಕ್ಲಾಸ್ ಹಾಗೂ ಮಾಸ್ ಎರಡನ್ನೂ ತೋರಿಸಿವೆ. ಪವರ್‌ಪ್ಲೇನಲ್ಲಿ ಆಕ್ರಮಣಕಾರಿ ಆಟವಾಡುವ ಸಾಮರ್ಥ್ಯ ಹೊಂದಿರುವ ಮಂದಾನ ಫಾರ್ಮ್‌ಗೆ ಬಂದರೆ, ಆರ್‌ಸಿಬಿಯನ್ನು ತಡೆಯೋದೇ ಕಷ್ಟ.

ಗ್ರೇಸ್ ಹ್ಯಾರಿಸ್ – ಬಿಗ್ ಹಿಟ್ಟಿಂಗ್‌ಗೆ ಸಜ್ಜು

ಆಸ್ಟ್ರೇಲಿಯಾದ ಸ್ಪೋಟಕ ಬ್ಯಾಟರ್ ಗ್ರೇಸ್ ಹ್ಯಾರಿಸ್ ಈ ಬಾರಿ ಆರ್‌ಸಿಬಿಗೆ ಹೊಸ ಸೇರ್ಪಡೆ. ಓಪನರ್ ಆಗಲಿ ಅಥವಾ ಮಿಡಲ್ ಆರ್ಡರ್ ಆಗಲಿ – ಯಾವ ಪಾತ್ರ ಕೊಟ್ಟರೂ ಬೌಲರ್‌ಗಳಿಗೆ ಭಯ ಹುಟ್ಟಿಸುವ ಆಟಗಾರ್ತಿ. ಟಿ20 ಫಾರ್ಮ್ಯಾಟ್‌ನಲ್ಲಿ 155ಕ್ಕಿಂತ ಅಧಿಕ ಸ್ಟ್ರೈಕ್‌ರೇಟ್ ಹೊಂದಿರುವ ಹ್ಯಾರಿಸ್, ಬಿಗ್ ಬ್ಯಾಷ್ ಲೀಗ್‌ನಲ್ಲಿ ಮೂರು ಶತಕ ಸಿಡಿಸಿದ ದಾಖಲೆಗೂ ಮಾಲೀಕಳಾಗಿದ್ದಾರೆ.
ಆರ್‌ಸಿಬಿಯ ಸಿಕ್ಸ್ ಹಿಟ್ಟಿಂಗ್ ಮಷಿನ್
ಈ ಬಾರಿ ಆರ್‌ಸಿಬಿ ತಂಡದಲ್ಲಿ ನಿಜವಾದ ಸಿಕ್ಸ್ ಹಿಟ್ಟಿಂಗ್ ಮಷಿನ್ ಇದೆ. ಇತ್ತೀಚೆಗೆ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದ ನಡಿನ್ ಡಿ ಕ್ಲರ್ಕ್, ಈ ಬಾರಿ ರೆಡ್ ಆರ್ಮಿಯ ದೊಡ್ಡ ಶಕ್ತಿ. ಲೋವರ್ ಆರ್ಡರ್‌ನಲ್ಲಿ ಕಣಕ್ಕಿಳಿದು ಪಂದ್ಯವನ್ನೇ ತಿರುಗಿಸುವ ಸಾಮರ್ಥ್ಯ ಹೊಂದಿರುವ ದಕ್ಷಿಣ ಆಫ್ರಿಕಾ ಆಲ್‌ರೌಂಡರ್ ತಂಡಕ್ಕೆ ಭರ್ಜರಿ ಬಲ ನೀಡಿದ್ದಾರೆ.

ಜಾರ್ಜಿಯಾ ವೋಲ್ ಎಂಟ್ರಿಯಿಂದ ಬಲವರ್ಧನೆ

ಆಸ್ಟ್ರೇಲಿಯಾದ ಯುವ ಹಾಗೂ ಎನರ್ಜಿಟಿಕ್ ಆಟಗಾರ್ತಿ ಜಾರ್ಜಿಯಾ ವೋಲ್ ಬಿಗ್ ಬ್ಯಾಷ್ ಲೀಗ್ ಹಾಗೂ ದಿ ಹಂಡ್ರೆಡ್ ಲೀಗ್‌ನಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್‌ನಿಂದ ಗಮನ ಸೆಳೆದವರು. ಕಳೆದ ಸೀಸನ್ WPLನಲ್ಲಿ 167ರ ಸ್ಟ್ರೈಕ್‌ರೇಟ್‌ನಲ್ಲಿ ರನ್ ಸುರಿಸಿದ್ದ ಜಾರ್ಜಿಯಾ, ಅದ್ರಲ್ಲೂ ಆರ್‌ಸಿಬಿ ವಿರುದ್ಧವೇ 99 ರನ್‌ಗಳ ಸ್ಪೋಟಕ ಇನ್ನಿಂಗ್ಸ್ ಆಡಿದ್ದನ್ನ ಮರೆತರೆ ಆಗಲ್ಲ. ಸಿಂಗಲ್ ಹ್ಯಾಂಡೆಡ್ ಆಗಿ ಗೇಮ್ ಚೇಂಜ್ ಮಾಡುವ ಸಾಮರ್ಥ್ಯ ಇರುವ ಈ ಆಟಗಾರ್ತಿಯ ಸೇರ್ಪಡೆ ರೆಡ್ ಆರ್ಮಿಗೆ ಮತ್ತಷ್ಟು ಶಕ್ತಿ ನೀಡಿದೆ.

ಚಿಕ್ಕ ಪ್ಯಾಕೆಟ್ – ದೊಡ್ಡ ಧಮಾಕಾ ರಿಚಾ ಘೋಷ್

ಲಾಸ್ಟ್ ಬಟ್ ನಾಟ್ ಲೀಸ್ಟ್… ಕೇವಲ 22 ವರ್ಷ ವಯಸ್ಸಿನಲ್ಲೇ ದಿಗ್ಗಜ ಬೌಲರ್‌ಗಳ ಎದೆಯಲ್ಲಿ ನಡುಕ ಹುಟ್ಟಿಸಿರುವ ರಿಚಾ ಘೋಷ್, ಆರ್‌ಸಿಬಿ ಲೋವರ್ ಆರ್ಡರ್‌ನ ನಿಜವಾದ ಬಲ. ಡೆತ್ ಓವರ್‌ಗಳಲ್ಲಿ ಬೌಂಡರಿ ಹಾಗೂ ಸಿಕ್ಸರ್‌ಗಳ ಮಳೆ ಸುರಿಸುವಲ್ಲಿ ನಿಪುಣಳಾದ ರಿಚಾ, ಈ ಸೀಸನ್‌ನಲ್ಲೂ ಪವರ್ ಹಿಟ್ಟಿಂಗ್ ಪ್ರದರ್ಶಿಸಲು ಸಂಪೂರ್ಣ ಸಜ್ಜಾಗಿದ್ದಾರೆ.

ಒಟ್ಟಿನಲ್ಲಿ, ಈ ಸೀಸನ್‌ನಲ್ಲಿ ಪವರ್ ಹಿಟ್ಟರ್‌ಗಳ ದಂಡೆಯೇ ಆರ್‌ಸಿಬಿ ತಂಡದಲ್ಲಿದೆ. ನಿರೀಕ್ಷೆಯಂತೆ ಎಲ್ಲರೂ ಫಾರ್ಮ್‌ಗೆ ಬಂದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಎರಡನೇ ಟ್ರೋಫಿ ಗೆಲ್ಲುವುದರಲ್ಲಿ ಯಾವುದೇ ಸಂಶಯವೇ ಇಲ್ಲ.