15.2 C
Munich
Home News ‘ಕಪ್ಪು ಹಲ್ಲಿನ ಕತೆ’ ಎರಡನೇ ಅವೃತ್ತಿ ಬಿಡುಗಡೆ: ಗ್ರಾಮೀಣ ಮೌಲ್ಯ ಕಳೆತ ಆತಂಕಕಾರಿ — ಡಾ....

‘ಕಪ್ಪು ಹಲ್ಲಿನ ಕತೆ’ ಎರಡನೇ ಅವೃತ್ತಿ ಬಿಡುಗಡೆ: ಗ್ರಾಮೀಣ ಮೌಲ್ಯ ಕಳೆತ ಆತಂಕಕಾರಿ — ಡಾ. ಮಲ್ಲೇಶ್‌ಗೌಡ

The elders, who have seen the true face of rural India, its hardships, the fragrance of the soil, the simplicity of the people and the joys of life, all this up close, are today expressing their concern as they stand before the new wave of civilization.

ಹಾಸನ: ಗ್ರಾಮೀಣ ಭಾರತದ ನಿಜವಾದ ರೂಪ, ಅದರ ಬವಣೆಗಳು, ಮಣ್ಣಿನ ಸುಗಂಧ, ಜನರ ಸರಳತೆ ಮತ್ತು ಸಂತೋಷದ ಮಜಲುಗಳು ಇವೆಲ್ಲವನ್ನೂ ಹತ್ತಿರದಿಂದ
ಕಂಡು ಬಂದಿರುವ ಹಿರಿಯರು ಇಂದು ನಾಗರಿಕತೆಯ ಹೊಸ ಹೊಳೆ ಮುಂದೆ ನಿಂತು ಆತಂಕ ವ್ಯಕ್ತಪಡಿಸಿದ್ದಾರೆ.

ಒಮ್ಮೆ ಸಮಯ ನಿಧಾನವಾಗಿ ಸಾಗುತ್ತಿತ್ತು, ಬದಲಾವಣೆಗಳಿಗೆ  ಗಾಢವಾದ ಅರ್ಥವಿತ್ತು. ಆದರೆ 2000ರ ಇಸವಿ ನಂತರ ನಮ್ಮ ಬದುಕಿನ ವೇಗವೇ ಬದಲುಗೊಂಡಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಹೆಚ್.ಎಲ್. ಮಲ್ಲೇಶ್‌ಗೌಡ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ಕಸಾಪ ಭವನದಲ್ಲಿ ಪ್ರತಿಮಾ ಟ್ರಸ್ಟ್ ಮತ್ತು ಕಸಾಪ ಇವರ ಸಹಯೋಗದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಉಮೇಶ್ ತೆಂಕನಹಳ್ಳಿ ಅವರ ಅನುಭವದ ಅಂತರಾಳದ ಕೃತಿ ಕಪ್ಪು ಹಲ್ಲಿನ ಕತೆ ಕಾದಂಬರಿಯ ಎರಡನೇ ಅವೃತ್ತಿ ಬಿಡುಗಡೆ ಕಾರ್ಯಕ್ರಮದಲ್ಲಿ ಕೃತಿ ಕುರಿತು ಮಾತನಾಡಿದರು.

ಬದಲಾವಣೆಯ ಈ ಬಿರುಸಿನಲ್ಲಿ ಮನುಷ್ಯನ ಮನಸ್ಥಿತಿಯೇ ಮಾರ್ಪಟ್ಟಿದೆ. ಅನೇಕರು ಗ್ರಾಮೀಣ ಬದುಕಿನ ಮೌಲ್ಯಗಳನ್ನು ಅರಿಯದೇ ಬದುಕುತ್ತಿರುವುದು ವಿಷಾದನೀಯ. ಇಂದಿನ ಆಧುನಿಕ ಕಾಲದಲ್ಲಿ ಅನೇಕ ಪುರುಷರು ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡಿದ್ದಾರೆ. ಮನುಷ್ಯನ ಮೌಲ್ಯ ಬಟ್ಟೆ, ಕಾರು, ಕಟ್ಟಡಗಳಲ್ಲಿ ಅಳೆಯಲಾಗುತ್ತಿದೆ. ತಾಯ್ತನದ ಮಹತ್ವವೂ ಮಸುಕಾಗುತ್ತಿರುವುದು ದೊಡ್ಡ ನಷ್ಟ ಎಂದು ಜೀವನಾನುಭವ ಹಂಚಿಕೊಂಡರು. ತಾಯಿ ಎಂಬ ಸ್ಥಾನವನ್ನು ಯಾರೂ ತುಂಬಲಾರರು. ಒಂದು ಕ್ಷಣದ ನಿರ್ಲಕ್ಷ್ಯಕ್ಕೂ ಮಗುವಿನ ಭವಿಷ್ಯ ಕತ್ತಲೆಯಾಗಬಹುದು. ಮನುಷ್ಯನನ್ನು ಮನುಷ್ಯನಾಗಿಸುವ ಮೊದಲ ಪಾಠ ತಾಯಿಯ ಮಮತೆಯಲ್ಲಿದೆ ಎಂದು ಕಿವಿಮಾತು ಹೇಳಿದರು.

ಪೂರ್ವಿಕರ ಬದುಕು ನೆನಪಿಸಿಕೊಂಡ ಅವರು, ಬದುಕನ್ನೇ ಆಟವಾಗಿ ಆಡುವ ಸಾಮರ್ಥ್ಯವಿಟ್ಟಿದ್ದರು. ಮಣ್ಣಿನ ನಡುವೆಯೇ ಜೀವನದ ಮೌಲ್ಯ ಕಂಡಿದ್ದರು. ಆದರೆ ನಾವು ನಾಗರಿಕರು ಆಟವನ್ನೇ ಮರೆಯುತ್ತಿದ್ದೇವೆ. ಮಣ್ಣಿನಿಂದ ದೂರವಾಗಿ, ಮನುಷ್ಯರಿಂದ ದೂರವಾಗಿ ಯಂತ್ರಗಳ ನಡುವೆ ಬದುಕುತ್ತಿದ್ದೇವೆ ಎಂಬ ಆತಂಕ ವ್ಯಕ್ತಪಡಿಸಿದರು.

ಇಂದಿನ ಹಳ್ಳಿಗಳೂ ಹಳ್ಳಿ ಆಗಿ ಉಳಿದಿಲ್ಲ, ಭೂತಕಾಲದ ಸುಗಂಧ ಕಳೆದು, ಹೊಸ ಜಗತ್ತಿನ ಗೊಂದಲದ ಮಧ್ಯೆ ಮಕ್ಕಳು ಬೆಳೆದಿದ್ದಾರೆ. ಅವರ ಬದುಕಿನ ನಿರ್ಧಾರಗಳು ಮತ್ತು ನಮ್ಮ ಹಾದಿಗಳು ಒಂದೇ ನಕ್ಷೆಯಲ್ಲಿ ಕಾಣುವುದು ಕಷ್ಟ. ಜೀವನದ ಗತಿಯೇ ಬದಲಾಗಿದೆ ಎಂದರು. ಕಲೆ, ಸಾಹಿತ್ಯ, ಸಂಸ್ಕೃತಿಯ ಮಹತ್ವವನ್ನೂ ಅವರು ಸ್ಪರ್ಶಿಸಿ, ಒಂದು ಕೃತಿ ವಿಶ್ವಾಸ ಮೂಡಿಸಿದರೆ ಅದು ಗೆದ್ದಂತೆ. ಅರ್ಥಪೂರ್ಣ ಮಾತುಗಳು ಸಮಾಜ ರೂಪಿಸಬಲ್ಲವು ಎಂದು ಹೇಳಿದರು.

ನಮ್ಮ ಮಾತೇ ನಮ್ಮ ಬೇರಿನ ಗುರುತು. ಈ ಭಾಷೆಯೇ ನಮ್ಮ ಬದುಕಿನ ಮಣ್ಣು. ಇದನ್ನು ಉಳಿಸುವುದು ಪ್ರತಿ ಪೀಳಿಗೆಯ ಕರ್ತವ್ಯ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ.ನಿಶ್ಚಲನಂದನಾಥ  ಸ್ವಾಮೀಜಿ, ಹಿರಿಯ ಪತ್ರಕರ್ತ ಆರ್.ಪಿ.ವೆಂಕಟೇಶಮೂರ್ತಿ, ಕೃತಿ ಕರ್ತೃ ಉಮೇಶ್ ತೆಂಕನಹಳ್ಳಿ, ಸಾಹಿತಿ ದಯಾ ಗಂಗನಘಟ್ಟ, ಚನ್ನರಾಯಪಟ್ಟಣ ತಾಲೂಕು ಕಸಾಪ ಅಧ್ಯಕ್ಷ ಹೆಚ್.ಎನ್. ಲೋಕೇಶ್, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಬಿ.ಆರ್.ಬೊಮ್ಮೇಗೌಡ ಮೊದಲಾದವರಿದ್ದರು.

error: Content is protected !!