19.5 C
Munich
Home News “ಯುವಕರು ಬಲಿಷ್ಠರಾಗಿದ್ದರೆ, ದೇಶ ಬಲಿಷ್ಠವಾಗುತ್ತದೆ.”: ಸೆಪ್ಟೆಂಬರ್ 11 ದಿಗ್ವಿಜಯ ದಿನದ ವಿಶೇಷ ಲೇಖನ

“ಯುವಕರು ಬಲಿಷ್ಠರಾಗಿದ್ದರೆ, ದೇಶ ಬಲಿಷ್ಠವಾಗುತ್ತದೆ.”: ಸೆಪ್ಟೆಂಬರ್ 11 ದಿಗ್ವಿಜಯ ದಿನದ ವಿಶೇಷ ಲೇಖನ

ಸ್ವಾಮಿ ವಿವೇಕಾನಂದರ ಜೀವನವು ಭಾರತದ ಯುವಶಕ್ತಿಗೆ ದಿಕ್ಕು ತೋರಿದ ದೀಪಸ್ತಂಭ. ಪ್ರತಿವರ್ಷ ಸೆಪ್ಟೆಂಬರ್ 11 ರಂದು ನಾವು ಆಚರಿಸುವ ದಿಗ್ವಿಜಯ ದಿನವು 1893ರಲ್ಲಿ ಚಿಕಾಗೊ ಧರ್ಮಸಂಸತ್ತಿನಲ್ಲಿ ಸ್ವಾಮಿ ವಿವೇಕಾನಂದರು ನೀಡಿದ ಇತಿಹಾಸ ಪ್ರಸಿದ್ಧ ಭಾಷಣವನ್ನು ನೆನಪಿಸುವ ಮಹತ್ವದ ಕ್ಷಣವಾಗಿದೆ.“ಬ್ರದರ್ಸ್ ಅಂಡ್ ಸಿಸ್ಟರ್ಸ್ ಆಫ್ ಅಮೆರಿಕಾ” ಎಂದು ಆರಂಭವಾದ ಆ ಮಾತು ವಿಶ್ವವನ್ನು ಗೆದ್ದಿತು.

ಅದು ಕೇವಲ ಭಾರತದ ಧ್ವನಿಯಲ್ಲ, ಮಾನವತೆಯ ಮಹಾ ಘೋಷಣೆಯೂ ಆಗಿತ್ತು. ವಿವೇಕಾನಂದರು ಸದಾ ಯುವಕರಲ್ಲಿ ಶಕ್ತಿ ತುಂಬುತ್ತಿದ್ದರು. ಅವರ ನಂಬಿಕೆ ಏನೆಂದರೆ – “ಯುವಕರು ಬಲಿಷ್ಠರಾಗಿದ್ದರೆ, ದೇಶ ಬಲಿಷ್ಠವಾಗುತ್ತದೆ.” ಅವರು ಶಿಕ್ಷಣವನ್ನು ಕೇವಲ ಅಂಕಗಳಿಗಾಗಿ ಅಲ್ಲ, ಬದಲಾಗಿ ವ್ಯಕ್ತಿತ್ವ, ಧೈರ್ಯ, ನೈತಿಕತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಲು ಎಂದು ಹೇಳಿದರು.

ವಿದ್ಯಾರ್ಥಿಗಳು ದಿಗ್ವಿಜಯ ದಿನವನ್ನು ಆಚರಿಸುತ್ತಿರುವಾಗ, ಅವರ ಜೀವನದಲ್ಲಿ ಶಿಕ್ಷಣವು ವ್ಯಕ್ತಿತ್ವ ನಿರ್ಮಾಣ, ಧೈರ್ಯ ಮತ್ತು ಆತ್ಮವಿಶ್ವಾಸ, ಸಮಾಜಸೇವೆಯ ಮನೋಭಾವ ಎಂಬ ಮೂರು ಮಹತ್ವದ ಸಂದೇಶಗಳು ಪ್ರತಿಧ್ವನಿಸಬೇಕು.

ಪುಸ್ತಕ ಓದುವುದು ಅಥವಾ ಪಾಠ ಕಲಿಯುವುದಷ್ಟೇ ಸಾಕಾಗುವುದಿಲ್ಲ, ಸತ್ಯ, ಶಿಸ್ತು ಮತ್ತು ಧೈರ್ಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ನಿಜವಾದ ಶಿಕ್ಷಣ. ವಿವೇಕಾನಂದರು ಹೇಳಿದಂತೆ, “ನೀವು ನಿಮ್ಮೊಳಗಿನ ದೇವಶಕ್ತಿಯನ್ನು ಅರಿತುಕೊಳ್ಳುವವರೆಗೆ ನಿಜವಾದ ಶಿಕ್ಷಣ ಪೂರ್ಣವಾಗುವುದಿಲ್ಲ.” ಯಾವುದೇ ಅಡೆತಡೆ ಬಂದರೂ ವಿದ್ಯಾರ್ಥಿಗಳು ಹೆದರುವುದಿಲ್ಲ.

“ಏಳಿ! ಜಾಗ್ರತವಾಗಿರಿ! ಗುರಿ ತಲುಪುವವರೆಗೆ ನಿಲ್ಲಬೇಡಿ!” ಎಂಬ ಸ್ವಾಮಿ ವಿವೇಕಾನಂದರ ಘೋಷಣೆ ಪ್ರತಿಯೊಬ್ಬರಿಗೂ ಮಾರ್ಗದರ್ಶಕವಾಗಬೇಕು. ಕನಸು ಕಾಣುವುದು ಸುಲಭ, ಆದರೆ ಅದನ್ನು ನಿಜಗೊಳಿಸಲು ಬೇಕಾದ ಶ್ರಮ, ಧೈರ್ಯ ಮತ್ತು ಹೋರಾಟವೇ ನಿಜವಾದ ವಿಜಯ.

ವಿವೇಕಾನಂದರು ಸಮಾಜಕ್ಕಾಗಿ ಬದುಕುವುದೇ ನಿಜವಾದ ಸಾಧನೆ ಎಂದರು. ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಕೇವಲ ಸ್ವಾರ್ಥಕ್ಕಾಗಿ ಅಲ್ಲ, ಬದಲಾಗಿ ರಾಷ್ಟ್ರ ಮತ್ತು ಮಾನವತೆಯ ಹಿತಕ್ಕಾಗಿ ಬಳಸಬೇಕು. ಅವರ ಮಾತಿನಂತೆ, “ಇತರರ ಸೇವೆಯಲ್ಲಿದೆ ನಿಜವಾದ ದೇವರ ಸೇವೆ.” ವಿದ್ಯಾರ್ಥಿಗಳೇ, ನೀವು ನಾಳೆಯ ಭಾರತದ ಶಿಲ್ಪಿಗಳು. ನಿಮ್ಮ ಕನಸುಗಳು ದೇಶದ ಕನಸುಗಳಾಗಬೇಕು, ನಿಮ್ಮ ಶ್ರಮವು ರಾಷ್ಟ್ರದ ಪ್ರಗತಿಗೆ ಕಾರಣವಾಗಬೇಕು, ನಿಮ್ಮ ಜೀವನವು ಇತರರಿಗೆ ಪ್ರೇರಣೆಯಾಗಬೇಕು.

ದಿಗ್ವಿಜಯ ದಿನದ ಸ್ಮರಣೆ ನಮಗೆ ಕೇವಲ ಇತಿಹಾಸವನ್ನು ನೆನಪಿಸುವುದಲ್ಲ, ಆದರೆ ಭವಿಷ್ಯವನ್ನು ರೂಪಿಸಲು ಬಲವನ್ನೂ ನೀಡುತ್ತದೆ. ಈ ದಿನವು ಪ್ರತಿಯೊಬ್ಬ ವಿದ್ಯಾರ್ಥಿಗೂ ಜಾಗೃತಿ ಮೂಡಿಸುವ ದಿನ. ಪ್ರತಿಯೊಬ್ಬರೂ ತಮ್ಮೊಳಗಿನ ಶಕ್ತಿಯನ್ನು ಅರಿತು, ಅದನ್ನು ಸಮಾಜ ಹಿತಕ್ಕಾಗಿ ಬಳಸಿದಾಗ ಮಾತ್ರ ನಿಜವಾದ ದಿಗ್ವಿಜಯ ಸಾಧ್ಯ. ಆದ್ದರಿಂದ ಸ್ವಾಮಿ ವಿವೇಕಾನಂದರ ಸಂದೇಶವನ್ನು ಹೃದಯದಲ್ಲಿ ಅಳವಡಿಸಿಕೊಂಡು, ನಾವು ಪ್ರತಿಜ್ಞೆ ಮಾಡೋಣ – “ನಮ್ಮ ಜೀವನವು ಶ್ರೇಷ್ಠವಾಗಲಿ, ನಮ್ಮ ದೇಶವು ಶ್ರೇಷ್ಠವಾಗಲಿ.” ದಿಗ್ವಿಜಯ ದಿನವು ಯುವಕರಿಗೆ ಕೇವಲ ಹಬ್ಬವಲ್ಲ, ಅದು ಒಂದು ಜಾಗೃತಿ, ಒಂದು ಪ್ರೇರಣೆ, ಒಂದು ಗುರಿಯತ್ತ ದಾರಿದೀಪ.

ಅಂತೋಣಿ ಮುತ್ತು ವಿ
9449376695
ಪ್ರಾಂಶುಪಾಲರು
ಸ್ಕಾಲರ್ಸ್ ಇಂಟರ್ ನ್ಯಾಷನಲ್ ಸ್ಕೂಲ್
ಹಾಸನ
error: Content is protected !!