ಸಕಲೇಶಪುರ: ಕಾಂಗ್ರೆಸ್ ಪಕ್ಷದ ವಿರುದ್ಧವಾಗಿ ನಡೆದುಕೊಂಡು ಮುರಳಿ ಮೋಹನ್ ವಿರುದ್ಧ ಅಪಪ್ರಚಾರ ನಡೆಸುತ್ತಿರುವ ಡಿ ಸಿ ಸಣ್ಣಸ್ವಾಮಿ ಗುಂಪಿನ ವ್ಯಕ್ತಿಗಳನ್ನು ಪಕ್ಷದಿಂದ ಉಚ್ಚಾಟನೆ ಮಾಡುವಂತೆ ಕಾಂಗ್ರೆಸ್ ಒಕ್ಕಲಿಗ ಹಾಗೂ ವೀರಶೈವ ಲಿಂಗಾಯತ ಸಮುದಾಯದ ಪ್ರಮುಖ ಕಾಂಗ್ರೆಸ್ ಮುಖಂಡರು ಒತ್ತಾಯಿಸಿದರು.
ಪಟ್ಟಣದ ಲಯನ್ಸ್ ಮಂದಿರದಲ್ಲಿ ನಡೆದ ಕಾಂಗ್ರೆಸ್ ಒಕ್ಕಲಿಗ ಹಾಗೂ ವೀರಶೈವ ಲಿಂಗಾಯತ ಸಮುದಾಯದ ಸಭೆಯಲ್ಲಿ ಮಾತನಾಡಿದ ಮುಖಂಡರು, ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಸಂಕಲ್ಪದೊಂದಿಗೆ ಹಗಲಿರುಳು ಶ್ರಮಿಸುತ್ತಿರುವ ನಿಷ್ಠಾವಂತ ಕಾರ್ಯಕರ್ತರು ಹಾಗೂ ಮುಖಂಡರ ಸಹನೆಯನ್ನು ದುರುಪಯೋಗಪಡಿಸಿಕೊಳ್ಳುವ ಕೆಲಸ ಇತ್ತೀಚೆಗೆ ಹೆಚ್ಚಾಗುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ನಮ್ಮ ಬದುಕಿನ ಅವಿಭಾಜ್ಯ ಅಂಗ. ಈ ಕ್ಷೇತ್ರದಲ್ಲಿ ಪಕ್ಷವನ್ನು ಪುನಃ ಅಧಿಕಾರಕ್ಕೆ ತರುವುದು ನಮ್ಮ ಜೀವನದ ಅತ್ಯಮೂಲ್ಯ ಕನಸಾಗಿದೆ. ಈ ಕನಸನ್ನು ನನಸು ಮಾಡಲು ಛಲ ತೊಟ್ಟು ನಿಂತಿರುವ ನಮ್ಮ ಪ್ರಯತ್ನಗಳಿಗೆ ಅಡ್ಡಿ ಉಂಟುಮಾಡುವ ಯಾವ ಪ್ರಯತ್ನವನ್ನೂ ಇನ್ನು ಮುಂದೆ ಸಹಿಸಲಾಗುವುದಿಲ್ಲ ಎಂದು ಒಕ್ಕಲಿಗ ಹಾಗೂ ವೀರಶೈವ ಲಿಂಗಾಯತ ಸಮುದಾಯದ ಪ್ರಮುಖ ಕಾಂಗ್ರೆಸ್ ಮುಖಂಡರು ಸ್ಪಷ್ಟ ಪಡಿಸುತ್ತೇವೆ ಎಂದರು.
ಪಕ್ಷವನ್ನು ಕಟ್ಟುವ ಉದ್ದೇಶದಿಂದ ನಾವು ನಮ್ಮ ಜೀವನದ ಅಮೂಲ್ಯ ಸಮಯವನ್ನು ತ್ಯಾಗ ಮಾಡಿದ್ದೇವೆ. ಪಕ್ಷಕ್ಕಾಗಿ ಸರ್ವಸ್ವವನ್ನೇ ಸಮರ್ಪಿಸಿದ್ದೇವೆ. ಮುಂದಿನ ದಿನಗಳಲ್ಲಿಯೂ ತನು–ಮನ–ಧನವನ್ನು ಅರ್ಪಿಸಲು ನಾವು ಸಿದ್ಧರಾಗಿದ್ದೇವೆ. ಕಾಂಗ್ರೆಸ್ ಪಕ್ಷ ಹಂತ ಹಂತವಾಗಿ ಅಧಿಕಾರದ ಹೆಜ್ಜೆ ಇಡುವ ಸಂದರ್ಭದಲ್ಲಿ, ನಮ್ಮ ಸಾಧನೆಯ ಹಾದಿಯನ್ನು ದುರುದ್ದೇಶದಿಂದ ಹಾದಿ ತಪ್ಪಿಸಲು ಕೆಲವರು ಒಳಗಿನಿಂದಲೇ ಸಂಚು ರೂಪಿಸುತ್ತಿರುವುದು ದುಃಖಕರ ಸಂಗತಿ ಎಂದರು.
ಚುನಾವಣಾ ಸಂದರ್ಭಗಳಲ್ಲಿ ನಮ್ಮೊಂದಿಗೆ ಇದ್ದು, ನಂತರ ಪಕ್ಷದ ವಿರುದ್ಧವಾಗಿ ಬೇರೆ ಪಕ್ಷಗಳಿಗೆ ಕೆಲಸ ಮಾಡುವವರು ಯಾರು ಎಂಬುದು ನಮಗೆ ಚೆನ್ನಾಗಿ ಗೊತ್ತಿದೆ. ಆದರೂ ಪಕ್ಷದ ಒಗ್ಗಟ್ಟಿಗಾಗಿ, ಆತ್ಮವಿಮರ್ಶೆ ಮಾಡಿಕೊಂಡು ಅವರು ಸರಿ ದಾರಿಗೆ ಬರಬಹುದು ಎಂಬ ಆಶಯದಿಂದ ನಾವು ಎಲ್ಲವನ್ನೂ ಸಹಿಸಿಕೊಂಡು ಬಂದಿದ್ದೇವೆ. ಸಭೆಗಳಲ್ಲಿ ಗಲಾಟೆ, ಸಭೆಯ ಶಾಂತಿಭಂಗ, ನಾಯಕತ್ವದ ಗೌರವ ಕುಂದಿಸುವ ಕೃತ್ಯಗಳು, ಪಕ್ಷದ ವಿರುದ್ಧ ಚಟುವಟಿಕೆಗಳು—ಇವೆಲ್ಲವೂ ತಿಳಿದಿದ್ದರೂ ಕಾಂಗ್ರೆಸ್ ಹಿತದೃಷ್ಟಿಯಿಂದ ಮೌನ ವಹಿಸಲಾಗಿತ್ತು.
ಆದರೆ ಈಗ ಮೌನ ವಹಿಸುವ ಕಾಲವಲ್ಲ. ಕೆಲ ವ್ಯಕ್ತಿಗಳ ಪಾಪದ ಕೊಡ ತುಂಬಿದ್ದು, ತಮ್ಮ ಸ್ವಾರ್ಥಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಸರ್ವನಾಶ ಮಾಡುವ ಮಟ್ಟಕ್ಕೆ ಅವರು ಇಳಿದಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳೊಂದಿಗೆ ಒಳಗೊಳಗೇ ಸಂಪರ್ಕ ಇಟ್ಟುಕೊಂಡು ಕುತಂತ್ರದ ಮೂಲಕ ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ದುರ್ಬಲಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.
ಮುರಳಿ ಮೋಹನ್ ಅವರು ಒಬ್ಬ ಪ್ರಾಮಾಣಿಕ, ನಿಷ್ಠಾವಂತ ಪಕ್ಷಪ್ರೇಮಿ. ನಮ್ಮಂತೆಯೇ ಅವರು ಪಕ್ಷಕ್ಕಾಗಿ ತಮ್ಮ ಅಮೂಲ್ಯ ಸಮಯವನ್ನು ಮೀಸಲಿಟ್ಟು, ಪ್ರತಿದಿನವೂ ಪಕ್ಷ ವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಅವರ ಕಾರ್ಯವೈಖರಿ ನಮಗೆಲ್ಲರಿಗೂ ಪ್ರೇರಣೆಯಾಗಿದೆ. ಇಂತಹ ವ್ಯಕ್ತಿಯ ವಿರುದ್ಧ ಇತ್ತೀಚಿನ ಒಂದು ಘಟನೆಯನ್ನು ಮುಂದಿಟ್ಟುಕೊಂಡು ನಿರಂತರ ಸುಳ್ಳು ಅಪಪ್ರಚಾರ ನಡೆಸಲಾಗುತ್ತಿದೆ. ಪಕ್ಷದೊಳಗೇ ಇದ್ದುಕೊಂಡು ಜೆಡಿಎಸ್ ಹಾಗೂ ಬಿಜೆಪಿಯ ಅಜೆಂಡಾಗಳನ್ನು ಕಾರ್ಯರೂಪಕ್ಕೆ ತರುವ ಯತ್ನ ನಡೆಯುತ್ತಿದೆ.
ಮುರಳಿ ಮೋಹನ್ ಅವರು, ಇಂದು ಬಿಜೆಪಿ ಮತ್ತು ಜೆಡಿಎಸ್ಗೆ ಬಲಿಷ್ಠ ಗೋಡೆಯಾಗಿ ನಿಂತಿದ್ದಾರೆ. ದಿನೇ ದಿನೇ ಅವರ ವರ್ಚಸ್ಸು ಹೆಚ್ಚಾಗುತ್ತಿದ್ದು, ಅದರೊಂದಿಗೆ ಕಾಂಗ್ರೆಸ್ ಪಕ್ಷವೂ ಬಲಿಷ್ಠವಾಗುತ್ತಿದೆ. ಸರ್ವಜಾತಿ ಸಮುದಾಯಗಳೊಂದಿಗೆ ಸಮಾನ ಸಂಬಂಧ ಹೊಂದಿರುವ ಅವರು, ವಿಶೇಷವಾಗಿ ಒಕ್ಕಲಿಗ ಹಾಗೂ ವೀರಶೈವ ಲಿಂಗಾಯತ ಸಮುದಾಯಗಳ ವಿಶ್ವಾಸವನ್ನು ಸಂಪೂರ್ಣವಾಗಿ ಗಳಿಸಿಕೊಂಡಿದ್ದಾರೆ.
ಮುರಳಿ ಮೋಹನ್ ರವರಿಂದ ಭಯಗೊಂಡಿರುವ ಕೆಲವರು, ಹೊರಗಿನ ದುಷ್ಟ ಶಕ್ತಿಗಳಿಗೆ ಕುಮ್ಮಕ್ಕು ನೀಡುತ್ತಾ “ಕಾಂಗ್ರೆಸ್ನಲ್ಲಿ ಒಕ್ಕಲಿಗರು ಹಾಗೂ ವೀರಶೈವ ಲಿಂಗಾಯತರು ಇಲ್ಲ”, “ತಾಲೂಕು ಕಾಂಗ್ರೆಸ್ ಈ ಜಾತಿಗಳ ವಿರುದ್ಧ ಕೆಲಸ ಮಾಡುತ್ತಿದೆ” ಎಂಬ ಸುಳ್ಳು ಅಪಪ್ರಚಾರವನ್ನು ಉದ್ದೇಶಪೂರ್ವಕವಾಗಿ ಹರಡುತ್ತಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಐಕ್ಯತೆಗೆ ಧಕ್ಕೆ ತರುವ ಕುತಂತ್ರವಾಗಿದ್ದು, ಇದನ್ನು ಪಕ್ಷದ ನಾಯಕತ್ವ ಗಂಭೀರವಾಗಿ ಪರಿಗಣಿಸಬೇಕು ಎಂದರು.
ಒಕ್ಕಲಿಗ ಮತ್ತು ವೀರಶೈವ ಲಿಂಗಾಯತ ಸಮುದಾಯಗಳು ಕಾಂಗ್ರೆಸ್ ಪಕ್ಷದೊಂದಿಗೆ ನಿಂತಿವೆ, ಮುಂದೆಯೂ ನಿಲ್ಲಲಿವೆ. ಪಕ್ಷದ ವಿರುದ್ಧ ಸಂಚು ರೂಪಿಸುವ ಯಾವುದೇ ವ್ಯಕ್ತಿಗಳಿಗೂ, ಯಾವುದೇ ಪಕ್ಷಗಳಿಗೂ ಸಕಲೇಶಪುರದಲ್ಲಿ ಜಾಗವಿಲ್ಲ. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಹೋರಾಟದಲ್ಲಿ ನಾವು ಹಿಂದೆ ಸರಿಯುವುದಿಲ್ಲ ಎಂದರು.
ಸಭೆಯಲ್ಲಿ ತಾಲೂಕು ಕಾಂಗ್ರೆಸ್ ಅಧ್ಯಕ್ಷ ಬೈರ್ಮುಡಿ ಚಂದ್ರು, ಮಾಜಿ ಅಧ್ಯಕ್ಷ ವಿದ್ಯಾಶಂಕರ್, ಮಹಿಳಾ ಘಟಕದ ಅಧ್ಯಕ್ಷ ಅನ್ನಪೂರ್ಣ ಶ್ರೀಶೈಲ, ಬಗರ್ ಹುಕಂ ಸದಸ್ಯ ಉದಯ್ ಎಚ್ ಎಚ್, ಗೋಪಾಲಸ್ವಾಮಿ, ವೀರಶೈವ ಸಮಾಜದ ಉಪಾಧ್ಯಕ್ಷ ಗಗನ್, ತಾ ಪಂ ಮಾಜಿ ಅಧ್ಯಕ್ಷ ಲೋಲಾಕ್ಷಿ, ಅರವಿಂದ್, ದೇವಲೇಕೆರೆ ಲೋಕೇಶ್, ಹಾಸನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೊದ್ದು ಲೋಕೇಶ್, ಕಿರಣ್, ವಾಲೆ ಮಂಜು, ಪ್ರಾಧಿಕಾರ ಸದಸ್ಯ ವಿಜಯಕುಮಾರ್, ಹೊಸೂರ್ ರವಿ, ಪ್ರಾಧಿಕಾರ ಸದಸ್ಯ ಚರಣ್ ಗೌಡ, ಪುರಸಭೆ ಮಾಜಿ ಅಧ್ಯಕ್ಷೆ ಕೌಸಲ್ಯ ಲಕ್ಷ್ಮಣಗೌಡ, ಅರವಿಂದ ಹೆತ್ತೂರು, ಬಿಕೆ ಮಹೇಶ್, ಮುದ್ದ, ವೀರಶೈವ ಸಮಾಜ ಪ್ರಮುಖ ಸಂಗಪ್ಪ, ಪಿ ಎಲ್ ಡಿ ಬ್ಯಾಂಕ್ ಉಪಾದ್ಯಕ್ಷ ಹಿತೈಶ್, ದಿನೇಶ್, ಪುರಸಭಾ ನಾಮಿನಿ ಸದಸ್ಯ ಅಶೋಕ ಕಡಗರಹಳ್ಳಿ, ರಾಧಾಕೃಷ್ಣ, ಕುರಬುತ್ತೂರು ಗ್ರಾಮ ಪಂಚಾಯತಿ ಅಧ್ಯಕ್ಷ ವೆಂಕಟೇಶ್, ಸದಸ್ಯ ಅರ್ಜುನ್, ಸೋಮೇಗೌಡ, ಬ್ಯಾಕರವಳ್ಳಿ ಗ್ರಾ ಪಂ ಅಧ್ಯಕ್ಷ ರಂಗನಾಥ್, ಕ್ಯಾಮನಹಳ್ಳಿ ಗ್ರಾ ಪಂ ಅಧ್ಯಕ್ಷ ಮಲ್ಲೇಶ್, ಕುನಿಗನಹಳ್ಳಿ ಗ್ರಾ ಪಂ ಅಧ್ಯಕ್ಷ ಶಾಂತ ಮಹೇಶ್, ಕಾಮನಹಳ್ಳಿ ಜಯರಾಜ್, ವಸಂತ ಕೊಲ್ಲಹಳ್ಳಿ ಇತರರು ಉಪಸ್ಥಿತರಿದ್ದರು.
The Congress party is an integral part of our lives. Bringing the party back to power in this constituency is the most cherished dream of our lives.










