ಹಾಸನ : ಹಾಸನದಲ್ಲಿ ಬ್ಯಾಂಕ್ ನೌಕರರ ಮುಷ್ಕರ

ಹಾಸನ : ಭಾರತೀಯ ಬ್ಯಾಂಕ್ ಗಳ ಸಂಘಟನೆ (IBA) ಹಾಗೂ ಬ್ಯಾಂಕ್ ಸಿಬ್ಬಂದಿಗಳ ಸಂಘಟನೆಗಳೊಂದಿಗೆ 2023ರಲ್ಲಿ 12ನೇ ದ್ವಿಪಕ್ಷೀಯ ಒಪ್ಪಂದದ ಪ್ರಕಾರ ಐದು ದಿನ ಬ್ಯಾಂಕಿಂಗ್ ಸೌಲಭ್ಯವನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಬ್ಯಾಂಕ್ ಸಂಘಟನೆಗಳ ಸಂಯುಕ್ತ ವೇದಿಕೆಯು (UFBU)ಇಂದು ದೇಶವ್ಯಾಪಿ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿತ್ತು.

ಇದರ ಅಂಗವಾಗಿ ಇಂದು ಹಾಸನದಲ್ಲಿ ಎನ್ ಆರ್ ವೃತ್ತದಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಎದುರು ನೂರಾರು ಬ್ಯಾಂಕ್ ಸಿಬ್ಬಂದಿ ಪ್ರತಿಭಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮುಷ್ಕರವನ್ನು ಯಶಸ್ವಿಗೊಳುಸಲಾಯಿತು. ಇಂದು ಜಿಲ್ಲೆಯಾದ್ಯಂತ ಎಲ್ಲಾ ಬ್ಯಾಂಕ್ ಗಳು ಕಾರ್ಯ ನಿರ್ವಹಿಸಲಿಲ್ಲ.

2024ರ ಮಾರ್ಚಿನಲ್ಲಿ ಆದ 12ನೇ ದ್ವಿಪಕ್ಷೀಯ ಒಪ್ಪಂದದಲ್ಲಿ ಬ್ಯಾಂಕ್ ಸಿಬ್ಬಂದಿಗಳಿಗೆ ಸಂಬಂಧಪಟ್ಟ ಹಲವಾರು ಬೇಡಿಕೆಗಳಲ್ಲಿ ವಾರದಲ್ಲಿ ಐದು ದಿನಗಳ ಕೆಲಸದ ವ್ಯವಸ್ಥೆಯೂ ಒಂದು. ಒಪ್ಪಂದ ಆದಾಗಿನಿಂದಲೂ ಈ ವ್ಯವಸ್ಥೆಯನ್ನು ಜಾರಿ ಮಾಡಲು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದರೂ ಇದುವರೆಗೂ ಸರ್ಕಾರದಿಂದ ಈ ನಿಟ್ಟಿನಲ್ಲಿ ಯಾವುದೇ ರೀತಿಯ ಸಕರಾತ್ಮಕ ಸ್ಪಂದನೆ ಸಿಕ್ಕಿಲ್ಲ ದ ಕಾರಣ ಇಂದು ಮುಷ್ಕರಕ್ಕೆ ಕರೆ ಕೊಡಬೇಕಾಯಿತು.

ಇದರಿಂದ ಸಾರ್ವಜನಿಕರಿಗೆ ಉಂಟಾಗಿರುವ ಅನಾನುಕೂಲತೆಗೆ ವಿಷಾಧಿಸುತ್ತೇವೆ. ನಮ್ಮ ಐದು ದಿನ ಬ್ಯಾಂಕಿಂಗ್ ಬೇಡಿಕೆಯನ್ನು ಜಾರಿಗೊಳಿಸಲು ಒತ್ತಾಯಿಸಿ, ಸಾರ್ವಜನಿಕರಿಗೆ ಹಾಗೂ ಬ್ಯಾಂಕ್ ಗ್ರಾಹಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಕಳೆದ ಒಂದು ತಿಂಗಳಿಂದ ಅನೇಕ ರೀತಿಯ ಪ್ರತಿಭಟನೆಗಳ ಮೂಲಕ ಸರ್ಕಾರದ ಗಮನ ಸೆಳೆಯಲು ಪ್ರಯತ್ನ ಮಾಡಲಾಯಿತು. ಆದರೆ ಇದ್ಯಾವುದಕ್ಕೂ ಸ್ಪಂದಿಸದೆ ಸರ್ಕಾರ ನಿರ್ಲಕ್ಷ್ಯ ಧೋರಣೆ ತಳೆದುದರಿಂದ ಅನಿವಾರ್ಯವಾಗಿ ಮುಷ್ಕರ ಮಾಡಬೇಕಾಯಿತು.

ದೇಶದ ಎಲ್ಲಾ ಬ್ಯಾಂಕ್ ಸಿಬ್ಬಂದಿ ಇಂದು ಮಿತಿ ಮೀರಿದ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರಿಂದ ಆತ್ಮಹತ್ಯೆ, ಖಿನ್ನತೆ, ಕೌಟುಂಬಿಕ ಸಮಸ್ಯೆ ಹಾಗೂ ಸಾಮಾಜಿಕ ಸಮಸ್ಯೆಗಳು ಉಂಟಾಗುತ್ತಿದೆ. ಇದು ಉತ್ಪಾದಕತೆಯ ಮೇಲೆ ನೇರ ಪರಿಣಾಮ ಬೀರುತ್ತಿದೆ. ಬ್ಯಾಂಕ್ ಸಿಬ್ಬಂದಿಗಳ ಮೇಲಿನ ಒತ್ತಡ ಕಡಿಮೆ ಮಾಡಲು ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಅನಿವಾರ್ಯವಾಗಿದೆ.

ಈಗಾಗಲೇ ಹಣಕಾಸು ವಲಯದ ಇತರೆ ಸಾರ್ವಜನಿಕ ಸಂಸ್ಥೆಗಳಾದ ಆರ್ ಬಿ ಐ, ಎಲ್ ಐ ಸಿ, ಸಾಮಾನ್ಯ ವಿಮಾ ಕಂಪನಿಗಳು, ಸೆಬಿ(SEBI), ಷೇರು ಮಾರುಕಟ್ಟೆ, ವಿದೇಶಿ ವಿನಿಮಯ ಮಾರುಕಟ್ಟೆ, ಇತ್ಯಾದಿಗಳು ವಾರದಲ್ಲಿ ಐದು ದಿನಗಳಷ್ಟೇ ಕಾರ್ಯ ನಿರ್ವಹಿಸುತ್ತಿವೆ. ಪ್ರಪಂಚದಾದ್ಯಂತ ಬಹುತೇಕ ದೇಶಗಳಲ್ಲಿ ಬ್ಯಾಂಕ್ ಗಳು ಐದು ದಿನಗಳ ಕಾರ್ಯನಿರ್ವಹಣೆ ವ್ಯವಸ್ಥೆಯನ್ನು ಬಹಳ ಹಿಂದೆಯೇ ಅಳವಳಿಸಿಕೊಂಡಿವೆ. ಹೀಗಿರುವಾಗ ನಾವು ನ್ಯಾಯಯುತ ಬೇಡಿಕೆ ಈಡೇರಿಸುವಂತೆ ಹೋರಾಡುತ್ತಿದ್ದೇವೆ.

ಇಂದಿನ ಮುಷ್ಕರ ಕಾರ್ಯಕ್ರಮದ ಅಂಗವಾಗಿ ಎನ್ ಆರ್ ವೃತ್ತದಿಂದ ಹೇಮಾವತಿ ಪ್ರತಿಮೆ ವರೆಗೂ ನಡೆದ ಬೃಹತ್ ಮೆರವಣಿಗೆಯಲ್ಲಿ ನಗರದ ನೂರಾರು ಬ್ಯಾಂಕ್ ಸಿಬ್ಬಂದಿ ಪಾಲ್ಗೊಂಡಿದ್ದರು. ಇಂದಿನ ಮುಷ್ಕರದ ನೇತೃತ್ವವನ್ನು ಬ್ಯಾಂಕ್ ಸಂಘಟನೆಗಳ ಸಂಯುಕ್ತ ವೇದಿಕೆಯು (UFBU) ಹಾಸನ ಘಟಕದ ಸಂಚಾಲಕ ಆರ್ ಕುಮಾರ್ ವಹಿಸಿದ್ದರು.

ಇವರೊಂದಿಗೆ, ಕೆನರಾ ಬ್ಯಾಂಕ್ ಅಧಿಕಾರಿಗಳ ಸಂಘಟನೆ(CBOA)ಯ ಸಂಘಟನಾ ಕಾರ್ಯದರ್ಶಿ ಎ ಜೆ ಜಾವೀದ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಿಬ್ಬಂದಿ ಸಂಘಟನೆಯ ಜಿ ಟಿ ಲೋಕೇಶ್, ಜಯಚಂದ್ರ, ಎಸ್ ಬಿ ಐ ಸಿಬ್ಬಂದಿ ಸಂಘಟನೆಯ ಚೇತನ್, ಅಶೋಕ್ ಭಟ್, ಕರ್ನಾಟಕ ಬ್ಯಾಂಕ್ ನ ಶೀಲಾ, ಮುಂತಾದವರು ಉಪಸ್ಥಿತರಿದ್ದರು.