ಬೇಲೂರು:ಭೀಮಾ ಕೊರೆಗಾಂವ್ ಕೇವಲ ಯುದ್ಧವಲ್ಲ, ದೌರ್ಜನ್ಯ ವಿರೋಧಿ ಕ್ರಾಂತಿ: ಅರೇಹಳ್ಳಿಯಲ್ಲಿ ವಿಜೃಂಭಣೆಯ ವಿಜಯೋತ್ಸವ

Dalit leader and Ambedkar Award winner Sridhar Kaliveer said that Bhima Koregaon was not just a war but a revolutionary struggle against the atrocities committed against the oppressed untouchable community.

ಬೇಲೂರು: ಭೀಮಾ ಕೊರೆಗಾಂವ್ ಕೇವಲ ಯುದ್ಧವಲ್ಲ ತುಳಿತಕ್ಕೆ ಒಳಗಾದ ಅಸ್ಪಶ್ಯ ಸಮುದಾಯದ ಮೇಲಿನ ದೌರ್ಜನ್ಯದ ವಿರುದ್ಧದ ನಡೆದ ಕ್ರಾಂತಿಕಾರಿ ಹೋರಾಟವಾಗಿದೆ ದಲಿತ ನಾಯಕ ಹಾಗೂ ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತ ಶ್ರೀಧರ್ ಕಲಿವೀರ್ ತಿಳಿಸಿದರು.

ಅರೇಹಳ್ಳಿ ಭೀಮಾ ಕೊರೆಗಾಂವ್ ವಿಜಯೋತ್ಸವ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಭೀಮಾ ಕೊರೆಗಾಂವ್ ವಿಜಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ಸಮುದಾಯದ ಮೇಲೆ ದಬ್ಬಾಳಿಕೆ ದೌರ್ಜನ್ಯ ಅತಿರೇಕಕ್ಕೆ ತಿರುಗಿದಾಗ ಅದರ ಪರಿಣಾಮ ಎಷ್ಟು ಕಠೋರವಾಗಿ ಇರುತ್ತದೆ ಎಂಬುದಕ್ಕೆ ಈ ಯುದ್ಧ ಸಾಕ್ಷಿಯಾಗಿದೆ ಎಂದರು.

ಇಂತಹ ಐತಿಹಾಸಿಕ ಯುದ್ಧದ ಬಗ್ಗೆ ಮಾಹಿತಿಯೇ ಇಲ್ಲದ ಸಂದರ್ಭದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅದನ್ನು ಪತ್ತೆ ಹಚ್ಚಿದ ಹಿನ್ನೆಲೆ ಇಂದು ಈ ಕಾರ್ಯಕ್ರಮ ಆಯೋಜನೆಗೊಂಡಿದೆ. ಆದರೆ ಇಂದಿಗೂ ಬಡವರ, ತುಳಿತಕ್ಕೆ ಒಳಗಾದವರ ಮೇಲೆ ಹಲ್ಲೆ ದೌರ್ಜನ್ಯಗಳು ನಿಂತಿಲ್ಲ, ಅಂಬೇಡ್ಕರ್ ಬರೆದಿರುವ ಸಂವಿಧಾನದ ಅಡಿಯಲ್ಲಿ ಸಮಾನತೆ ಕಟ್ಟುನಿಟ್ಟಿನ ಅನುಷ್ಠಾನವಾಗಬೇಕು ಎಂದರು.

ಲಂಡನ್ ದುಂಡುಮೇಜಿನ ಸಮ್ಮೇಳನದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಸಮಾನತೆಗಾಗಿ ಮಾತನಾಡಿದ ಭಾಷಣ ಶ್ಲಾಘನೀಯ ಆದರೆ ಇಂದಿಗೂ ಸಮ ಸಮಾಜ ನಿರ್ಮಾಣ ಸಾಧ್ಯವಾಗದೆ ಇರುವುದು ವಿಪರ್ಯಾಸ, ತಮ್ಮ ಹಕ್ಕುಗಳನ್ನು ಪಡೆಯಲು ಹಿಂದುಳಿದ ಸಮುದಾಯಗಳ ಎಲ್ಲರೂ ಮುಂದಾಗಬೇಕು, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹಾದಿಯಲ್ಲಿ ನಡೆಯುವ ಮೂಲಕ ಸಂವಿಧಾನ ರಕ್ಷಣೆಗೆ ಒಕ್ಕೊರಲಿನಿಂದ ಒಗ್ಗೂಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದಲ್ಲಿ ವಿವಿಧ ಕಲಾತಂಡಗಳೊಂದಿಗೆ ಭೀಮಾ ಕೊರೆಗಾಂವ್ ವಿಜಯಸ್ತಂಬ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರ ಹಾಗೂ ಭೀಮಾ ಕೊರೆಗಾಂವ್ ಯುದ್ಧದ ನಾಯಕ ಸಿದ್ದನಾಕ ಅವರ ಭಾವಚಿತ್ರಗಳ ಜೊತೆ ನಡೆದ ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯ ಸಮುದಾಯದ ಜನರು ಭಾಗವಹಿಸಿ ಡಿಜೆ ಶಬ್ದಕ್ಕೆ ಕುಣಿದು ಕುಪ್ಪಳಿಸಿದರು.

ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಸೇವಾ ಸಮಿತಿಯ ಅಧ್ಯಕ್ಷ ಸಂದೇಶ್, ಅರೇಹಳ್ಳಿ ಭೀಮಾ ಭೀಮಾ ಕೊರೆಗಾಂವ್ ವಿಜಯೋತ್ಸವ ಸಮಿತಿಯ ಅಧ್ಯಕ್ಷ ವಿರುಪಾಕ್ಷ, ಉಪಾಧ್ಯಕ್ಷ ಮಲ್ಲಿಕಾರ್ಜುನ್, ಕಾರ್ಯದರ್ಶಿ ಕುಮಾರ್, ದಿನೇಶ್, ಖಜಾಂಚಿ ಅನುಗಟ್ಟ ಕುಮಾರ್, ತಮಣ್ಣ ಇತರರು ಉಪಸ್ಥಿತರಿದ್ದರು.

Dalit leader and Ambedkar Award winner Sridhar Kaliveer said that Bhima Koregaon was not just a war but a revolutionary struggle against the atrocities committed against the oppressed untouchable community.